ಕರ್ನಾಟಕ-ಗಡಿನಾಡು ಕನ್ನಡ ಸಮ್ಮೇಳನ–2026: ಎಡನೀರು ಶ್ರೀಗಳಿಂದ ಪ್ರಚಾರ ಕಾರ್ಯಕ್ಕೆ ಚಾಲನೆ

Picture of RB NEWS

RB NEWS

Bureau Report

[

ಕರ್ನಾಟಕ-ಗಡಿನಾಡು ಕನ್ನಡ ಸಮ್ಮೇಳನ–2026: ಎಡನೀರು ಶ್ರೀಗಳಿಂದ ಪ್ರಚಾರ ಕಾರ್ಯಕ್ಕೆ ಚಾಲನೆ


ಕಾಸರಗೋಡು: ಕರ್ನಾಟಕ-ಕೇರಳ ಗಡಿಭಾಗದ ಕನ್ನಡಿಗರ ಸಾಂಸ್ಕೃತಿಕ ಏಕತೆಗೆ ವೇದಿಕೆಯಾಗಿರುವ “ಕರ್ನಾಟಕ-ಗಡಿನಾಡು ಕನ್ನಡ ಸಮ್ಮೇಳನ–2026” ಕಾರ್ಯಕ್ರಮದ ಪ್ರಚಾರ ಕಾರ್ಯಕ್ಕೆ ಎಡನೀರು ಶ್ರೀಗಳ ಆಶೀರ್ವಾದದೊಂದಿಗೆ ಅಧಿಕೃತ ಚಾಲನೆ ನೀಡಲಾಯಿತು.
ಜುಲೈ 26, 2026ರಂದು (ಭಾನುವಾರ) ಕಾಸರಗೋಡು ಜಿಲ್ಲೆಯ ನುಳ್ಳಿಪ್ಪಾಡಿಯ ಸೀತಮ್ಮ ಪುರುಷನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕನ್ನಡ ಭವನ ಪ್ರಕಾಶನ ಹಾಗೂ ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಈ ಸಮ್ಮೇಳನ ನಡೆಯಲಿದೆ.
ಈ ಹಿನ್ನೆಲೆ, ಸಮ್ಮೇಳನದ ಪ್ರಚಾರ ನಿಮಿತ್ತ ಬ್ಯಾನರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಎಡನೀರು ಶ್ರೀಗಳು ಮಾತನಾಡಿ, “ಭೌಗೋಳಿಕವಾಗಿ ಕೇರಳದಲ್ಲಿದ್ದರೂ ನಾವು ಕನ್ನಡ ಸಂಸ್ಕೃತಿಯವರಾಗಿದ್ದು, ನಮ್ಮ ಭಾಷೆ-ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗರ ಮೇಲಿದೆ. ಸರ್ಕಾರದ ಸಹಾಯಕ್ಕಾಗಿ ಕಾಯದೆ ಸ್ವಯಂ ಪರ್ಯಾಪ್ತತೆಯೊಂದಿಗೆ ಸಂಘ ಸಂಸ್ಥೆಗಳು ಮುಂದಾಗಬೇಕು. ಕನ್ನಡ ಭವನವು ನಿರಂತರವಾಗಿ ಕನ್ನಡ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಪ್ರಶಂಸನೀಯ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು,” ಎಂದು ಕರೆ ನೀಡಿದರು.
ಸಮ್ಮೇಳನ ಸಮಿತಿ ಅಧ್ಯಕ್ಷರಾದ ಡಾ. ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಅಶೋಕ್ ಚಂದ್ರಗಿ (ಬೆಳಗಾಂ), ಬಲರಾಮ್ (ಬೆಳಗಾಂ), ಜಗನ್ನಾಥ್ ಶೆಟ್ಟಿ, ವಸಂತ್ ಕೆರೆಮನೆ, ಸಂದ್ಯಾ ರಾಣಿ ಟೀಚರ್ ಹಾಗೂ ಎಡನೀರು ಶ್ರೀಮಠದ ವ್ಯವಸ್ಥಾಪಕರಾದ ಶ್ರೀ ರಾಜೇಂದ್ರ ಕಲ್ಲೂರಾಯ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎ.ಆರ್. ಸುಬ್ಬಯ ಕಟ್ಟೆ ಹಾಗೂ ಸಾಹಿತಿ ಶ್ರೀಹರಿ ಭಟ್ ಪೆಲ್ತಾಜೆ ಭಾಗವಹಿಸಿದರು.
ಈ ಸಂದರ್ಭದಲ್ಲಿ ಕನ್ನಡ ಭವನದ ಸ್ಥಾಪಕ ಅಧ್ಯಕ್ಷರಾದ ಡಾ. ವಾಮನ್ ರಾವ್ ಬೇಕಲ್ ಮತ್ತು ಸಂದ್ಯಾ ರಾಣಿ ದಂಪತಿಗಳು ಎಡನೀರು ಶ್ರೀಗಳಿಗೆ ತುಳಸೀ ಹಾರ ತೊಡಿಸಿ, ಫಲ-ಪುಷ್ಪ ಕಾಣಿಕೆ ನೀಡಿ ಆಶೀರ್ವಾದ ಪಡೆದರು.
ಸಮ್ಮೇಳನವನ್ನು ಯಶಸ್ವಿಗೊಳಿಸಲು ಗಡಿನಾಡಿನ ಎಲ್ಲಾ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top