ಕಾರ್ಕಳ : ಸ್ನೇಹಿತರೊಂದಿಗೆ ನದಿಗೆ ತೆರಳಿದ್ದ ವೇಳೆ ದುರ್ಘಟನೆ; ಮೂರು ಗಂಟೆಗಳ ಕಾರ್ಯಾಚರಣೆಯ ಬಳಿಕ ಶವಗಳ ಪತ್ತೆ
ಕಾರ್ಕಳ: ಸ್ನೇಹಿತರೊಂದಿಗೆ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಹೆರ್ಮುಂಡೆಯ ಸುವರ್ಣ ನದಿಯಲ್ಲಿ ಮಂಗಳವಾರ ಮಧ್ಯಾಹ್ನ ಸಂಭವಿಸಿದೆ. ಮೃತರನ್ನು ಹಿರ್ಗಾನ ಗ್ರಾಮದ ಪೇಂಟಿಂಗ್ ವೃತ್ತಿಯ ಭರತ್ ಪೂಜಾರಿ (29) ಹಾಗೂ ಹರ್ಷನ್ ಆಚಾರ್ಯ (23) ಎಂದು ಗುರುತಿಸಲಾಗಿದೆ. ಮಂಗಳವಾರ ಕೆಲಸಕ್ಕೆ ರಜೆ ಇದ್ದ ಹಿನ್ನೆಲೆಯಲ್ಲಿ ಭರತ್, ಹರ್ಷನ್ ಸೇರಿದಂತೆ ಐವರು ಸ್ನೇಹಿತರು ಮಧ್ಯಾಹ್ನ ಸ್ನಾನ ಹಾಗೂ ಈಜಾಟಕ್ಕಾಗಿ ಹೆರ್ಮುಂಡೆ ಸುವರ್ಣ ನದಿಗೆ ತೆರಳಿದ್ದರು. ಹಿರ್ಗಾನದ ಮಂಗಿಲಾರು ಎಂಬಲ್ಲಿಂದ ಸುಮಾರು ಎರಡು ಕಿ.ಮೀ. ದುರ್ಗಮ ದಾರಿಯಲ್ಲಿ ನಡೆದುಕೊಂಡು ನದಿ ತೀರ ತಲುಪಿದ ಬಳಿಕ ಸ್ನೇಹಿತರು ಈಜಾಡುತ್ತಿದ್ದರು. ಈ ವೇಳೆ ಭರತ್ ಹಾಗೂ ಹರ್ಷನ್ ನೀರಿನ ಆಳದ ಕಡೆ ತೆರಳಿದ್ದು, ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಸ್ನೇಹಿತರು ರಕ್ಷಿಸಲು ಪ್ರಯತ್ನಿಸಿದರೂ ಇಬ್ಬರನ್ನೂ ಕೂಡಲೇ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ದುರ್ಗಮ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಘಟನೆ ನಡೆದ ಸ್ಥಳಕ್ಕೆ ವಾಹನ ಸಂಚಾರಕ್ಕೆ ಸೂಕ್ತ ರಸ್ತೆ ಸಂಪರ್ಕವಿಲ್ಲದ ಕಾರಣ ರಕ್ಷಣಾ ಕಾರ್ಯಾಚರಣೆಗೆ ತೆರಳಿದ ಅಗ್ನಿಶಾಮಕ ದಳದ ಸಿಬ್ಬಂದಿ ತಮ್ಮ ರಕ್ಷಣಾ ಸಲಕರಣೆಗಳನ್ನು ಹೊತ್ತುಕೊಂಡು ಸುಮಾರು 3 ಕಿ.ಮೀ. ದೂರ ಕಾಲ್ನಡಿಗೆಯಲ್ಲೇ ಸಾಗಬೇಕಾಯಿತು. ಘಟನಾ ಸ್ಥಳಕ್ಕೆ ತಲುಪಿದ ಬಳಿಕ ಅಗ್ನಿಶಾಮಕ ದಳದ ಠಾಣಾಧಿಕಾರಿ ಸಂಜೀವ ದೇವಾಡಿಗ ನೇತೃತ್ವದ ತಂಡ ಸ್ಥಳೀಯರ ಸಹಕಾರದೊಂದಿಗೆ ಶೋಧ ಕಾರ್ಯಾಚರಣೆ ಆರಂಭಿಸಿತು. ನೀರಿನ ಆಳದಲ್ಲಿ ಸಿಲುಕಿದ್ದ ಯುವಕರ ಶವಗಳನ್ನು ಪತ್ತೆಹಚ್ಚಲು ಸಿಬ್ಬಂದಿ ಮೂರು ಗಂಟೆಗೂ ಅಧಿಕ ಕಾಲ ನಿರಂತರ ಕಾರ್ಯಾಚರಣೆ ನಡೆಸಿದರು. ಅಂತಿಮವಾಗಿ ಇಬ್ಬರ ಶವಗಳನ್ನು ನೀರಿನಿಂದ ಮೇಲಕ್ಕೆತ್ತಿ, ಮುಂದಿನ ಕ್ರಮಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳಾದ ರೂಪೇಶ್, ಸುರೇಶ್, ನಿತ್ಯಾನಂದ, ದಿನೇಶ್, ಮುಜಾಮಿಲ್ ಹಾಗೂ ಚಾಲಕ ಶಿವಾನಂದ ಭಾಗವಹಿಸಿದ್ದರು. ಘಟನೆಯಿಂದ ಹಿರ್ಗಾನ ಪರಿಸರದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದ್ದು, ಇಬ್ಬರು ಯುವಕರ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.