CSEET ಜನವರಿ ಆವೃತ್ತಿಯ ಪರೀಕ್ಷಾ ಫಲಿತಾಂಶ ಪ್ರಕಟ : ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ
RB NEWS
Bureau Report
CSEET ಜನವರಿ ಆವೃತ್ತಿಯ ಪರೀಕ್ಷಾ ಫಲಿತಾಂಶ ಪ್ರಕಟ
ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ
ಕಾರ್ಕಳ : ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ (ICSI) ಬೋರ್ಡ್ ವತಿಯಿಂದ ನಡೆಸಲ್ಪಡುವ ದೇಶದ ಅತ್ಯಂತ ಕ್ಲಿಷ್ಟಕರ ಪರೀಕ್ಷೆಗಳಲ್ಲಿ ಒಂದಾದ CSEET (Company Secretary Executive Entrance Test) ಜನವರಿ ಆವೃತ್ತಿಯ ಪರೀಕ್ಷಾ ಫಲಿತಾಂಶ ಇತ್ತೀಚೆಗೆ ಪ್ರಕಟವಾಗಿದ್ದು, ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮೆರೆದಿದ್ದಾರೆ. ಕಂಪನಿ ಸೆಕ್ರೆಟರಿ ಅರ್ಹತೆಗಾಗಿ ನಡೆಯುವ ಈ ಪರೀಕ್ಷೆಯಲ್ಲಿ ಕ್ರಿಯೇಟಿವ್ ಕಾಲೇಜಿನ ಒಟ್ಟು 60 ವಿದ್ಯಾರ್ಥಿಗಳ ಪೈಕಿ 41 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಮುಂದಿನ CS Executive ಪರೀಕ್ಷೆಗೆ ಅರ್ಹತೆ ಪಡೆದಿದ್ದಾರೆ. ಪರೀಕ್ಷೆಯಲ್ಲಿ 200ಕ್ಕೆ 169 ಅಂಕಗಳನ್ನು ಪಡೆದ ಸಾಯಿ ಪ್ರಸಾದ್ ಪ್ರಥಮ ಸ್ಥಾನ ಗಳಿಸಿದ್ದಾರೆ. ಕಿಶನ್ ಎನ್. ಮತ್ತು ಮಂಗಿಲಾಲ್ ತಲಾ 157 ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನಿತರ ವಿದ್ಯಾರ್ಥಿಗಳಲ್ಲಿ ಜತಿನ್ ಹರೀಶ್ (144), ಸ್ಪೂರ್ತಿ ಯು.ಎ. (143), ಭೂಮಿಕ ಸುಬ್ರಾಯ ಹೆಗ್ಡೆ (137), ಚಿನ್ಮಯ್ ಆರ್. (134), ವರುಣ್ ಚಂದ್ರಶೇಖರ್ (130) ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಗಮನಾರ್ಹವಾಗಿ, 120 ಕ್ಕಿಂತ ಹೆಚ್ಚು ಅಂಕಗಳನ್ನು 15 ವಿದ್ಯಾರ್ಥಿಗಳು ಹಾಗೂ 110 ಕ್ಕಿಂತ ಅಧಿಕ ಅಂಕಗಳನ್ನು 21 ವಿದ್ಯಾರ್ಥಿಗಳು ಪಡೆದಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಪ್ರಾಂಶುಪಾಲರು, ಸಹ ಸಂಸ್ಥಾಪಕರು, ಉಪನ್ಯಾಸಕ ವರ್ಗದವರು ಹಾಗೂ ಪರೀಕ್ಷಾ ಸಂಯೋಜಕರಾದ ಜ್ಞಾನೇಶ್ ಕೋಟ್ಯಾನ್ ಅವರು ಅಭಿನಂದನೆ ಸಲ್ಲಿಸಿ, ಮುಂದಿನ ಹಂತದಲ್ಲೂ ಯಶಸ್ಸು ಸಾಧಿಸುವಂತೆ ಶುಭ ಹಾರೈಸಿದ್ದಾರೆ.