
ಉಡುಪಿ: ಉಡುಪಿ-ಮಣಿಪಾಲ ರಾಷ್ಟ್ರೀಯ ಹೆದ್ದಾರಿಯ ಕುಂಜಿಬೆಟ್ಟು ಎಂಬಲ್ಲಿ ಮೇ 19ರಂದು ನಸುಕಿನ ವೇಳೆ ನಡು ರಸ್ತೆಯಲ್ಲಿಯೇ ನಡೆದ ಗ್ಯಾಂಗ್ ವಾರ್ಗೆ ಸಂಬಂಧಿಸಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಉಡುಪಿ ಎಸ್ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.


ಗರುಡ ಗ್ಯಾಂಗ್ ಗೆ ಸಂಬಂಧಿಸಿದ ಆಶೀಕ್, ರಾಕೀಬ್ ಮೊದಲಿಗೆ ಪೊಲೀಸರು ಬಂಧಿಸಿದ್ದರು. ಇದೇ ಪ್ರಕರಣದಲ್ಲಿ ಸಕ್ಲಾನ್ ಎಂಬ ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ.
ಉಡುಪಿ-ಮಣಿಪಾಲ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಪು ಮೂಲದ ಎರಡು ತಂಡಗಳ ಯುವಕರ ನಡುವೆ ಈ ಜಗಳ ನಡೆದಿದ್ದು, ಸಿನೆಮಿಯಾ ರೀತಿಯಲ್ಲಿ ಆರೋಪಿಗಳ ಕಾರುಗಳೆರಡು ಪರಸ್ಪರ ಡಿಕ್ಕಿ ಹೊಡೆಯುವುದು, ಬೇಕಾಬಿಟ್ಟಿ ವಾಹನ ಚಲಾಯಿಸಿ ಮತ್ತೊಂದು ಗುಂಪಿನ ಸದಸ್ಯನಿಗೆ ಡಿಕ್ಕಿ ಹೊಡೆಸಿ ರಸ್ತೆ ಉರುಳಿಸುವುದು ಇವೆಲ್ಲದರ ದೃಶ್ಯಾವಳಿಯೂ ಸಮೀಪದ ಪ್ಲಾಟ್ ವೊಂದರಲ್ಲಿ ವಾಸವಾಗಿದ್ದ ವ್ಯಕ್ತಿಯೊಬ್ಬರು ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರೆಂದು ತನಿಖೆ ಮೂಲಗಳಿಂದ ತಿಳಿದುಬಂದಿದೆ.
ಇತ್ತಂಡಗಳ ಮಧ್ಯೆ ಕಾರು ಮಾರಾಟಕ್ಕೆ ಸಂಬಂಧಿಸಿದಂತೆ ವಿವಾದವಿತ್ತು ಎನ್ನಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.






































