ಭಾವಪೂರ್ಣ ನಮನಗಳು…

ಮಾಜಿ ಶಾಸಕ ವಸಂತ ಬಂಗೇರ ಯಾವತ್ತೂ ವಸಂತ ಬಂಗೇರನೇ ಆಗಿದ್ದರು. ಅವರ ಮರ್ಜಿಯ ಅನುಕರಣೆ ಇತರರಿಗೆ ಅದು ಅಸಾಧ್ಯ.
ವಸಂತ ಬಂಗೇರ ಶೈಲಿಯಲ್ಲಿ ಬೇರೆ ಯಾರಿಗೂ ರಾಜಕೀಯ ಮಾಡುವುದು ಅಥವಾ ಜನಸೇವೆ ಮಾಡುವುದು,ಭ್ರಷ್ಟ ಅಧಿಕಾರಿಗಳನ್ನು ನಿಯಂತ್ರಣದಲ್ಲಿಟ್ಚು ಬಡವರ ಪರ ಕೆಲಸ ಮಾಡಿಸುವುದು ಸಾಧ್ಯವೇ ಇಲ್ಲ,ಸಾಧ್ಯವೇ ಇಲ್ಲ.
ಬೆಳ್ತಂಗಡಿಯನ್ನು ಕಾಡಿದ್ದ ಮಂಗನ ಕಾಯಿಲೆ(ಕ್ಯಾಸನೂರು ಫಾರೆಸ್ಟ್ ಡಿಸೀಸ್)ಗೆ ಸರಿಯಾದ ಚಿಕಿತ್ಸೆ ಹಾಗೂ ಆಸ್ಪತ್ರೆಗಳ ವ್ಯವಸ್ಥೆಯಾಗಬೇಕೆಂದು ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಎದುರಿಗೆ ತನ್ನ ರಾಜೀನಾಮೆ ಪತ್ರ ಮತ್ತು ಮಂಗನ ಮೈಯಲ್ಲಿರುವ ಜಿಗಣೆಗಳ ಸ್ಯಾಂಪಲ್ ನೊಂದಿಗೆ ಮಾತಾಡಿದ್ದ ಬಂಗೇರ ,ಇಡೀ ತಾಲೂಕಿನ ಜನರ ದೇವರಂತಾಗಿ ಬಿಟ್ಚಿದ್ದರು.ಮುಖ್ಯಮಂತ್ರಿ ಹೆಗಡೆಯವರು ಕೂಡ ಬಂಗೇರ ಬೇಡಿಕೆಯನ್ನು ಯಥಾವತ್ತಾಗಿ ಪೂರೈಸಿದ್ದರು. ವಸಂತ ಬಂಗೇರ ಅವರನ್ನು ಪ್ರತ್ಯಕ್ಷ ದೇವರು ಎಂದು ತಾಲೂಕಿನ ಜನತೆ ಒಪ್ಪಿಕೊಂಡಿತು.
2012ರಲ್ಲಿ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಕಾಲೇಜಿನ ವಿದ್ಯಾರ್ಥಿನಿ ಕು . ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಎರಡೂ ನಡೆಯಿತು. ಆಗ ಬಿಜೆಪಿಯ ಯೆಡಿಯೂರಪ್ಪ ಸರಕಾರ. ನಂತರ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂತು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದರು. ಬಡವರ ,ಹಿಂದುಳಿದವರ ಪರ ಯಾವತ್ತೂ ಹೋರಾಡುತ್ತಲೇ ಬಂದಿದ್ದ,ಬಡವರಿಗೆ ಅನ್ಯಾಯ ಮಾಡಬೇಡಿ ಎಂದು ಅಧಿಕಾರಿಗಳನ್ನು ಸದಾ ಮನವಿ ಮಾಡುತ್ತ ,ಗದರಿಸುತ್ತಲೇ ಬರುತ್ತಿದ್ದ ಕೆ. ವಸಂತ ಬಂಗೇರ ಅವರು ತನ್ನ ಪರಮಾಪ್ತನೂ ಆಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಮನವಿ ಮಾಡಿದ್ದು ‘ಸೌಜನ್ಯ ಪ್ರಕರಣ ತನಿಖೆಯನ್ನು ಸಿಬಿಐಗೆ ಕೊಡಬೇಕು,ಆ ನಂತರವೇ ನಾನು ಕ್ಷೇತ್ರಕ್ಕೆ ವಾಪಾಸು ಹೋಗುವುದು’
ಸಿದ್ಧರಾಮಯ್ಯರಿಗೆ ಪ್ರತಿ ಮಾತಾಡುವುದಕ್ಕೆ ಅವಕಾಶವೆ ಇಲ್ಲ,ಮಾತಾಡಿದರೂ ಅದು ವ್ಯರ್ಥ.! ಬಂಗೇರನ ಬೇಡಿಕೆ ಅದು ಶೋಷಿತರ ಪರವಾದ ಧ್ವನಿ ಎಂದು ಸಿದ್ಧರಾಮಯ್ಯ ಅರ್ಥಮಾಡಿಕೊಂಡು ಪ್ರಕರಣವನ್ನು ಸಿಬಿಐಗೆ ವಹಿಸಿಕೊಡುತ್ತಾರೆ.
ಕೆಎಫ್ ಡಿ ಸಾಂಕ್ರಾಮಿಕ ರೋಗವನ್ನು ಸಮರ್ಪಕವಾಗಿ ನಿಯಂತ್ರಿಸಲು ಸರಕಾರದ ಜೊತೆ ಕಾದಾಡಿದ ಬೆಳ್ತಂಗಡಿಯ ಮಣ್ಣಿನ ಮಗ ಕೇದೆ ವಸಂತ ಬಂಗೇರ,ಬೆಳ್ತಂಗಡಿಯ ಮಗಳ ಅತ್ಯಾಚಾರ ಮತ್ತು ಕೊಲೆಯ ತನಿಖೆಯನ್ನು ಸಿಬಿಐ ಗೆ ಕೊಡಿಸಿದಾಗ ಅವರು ಬೆಳ್ತಂಗಡಿ ಕ್ಷೇತ್ರಕ್ಕೇ ಖಳನಾಯಕನಾಗುತ್ತಾನೆ ಎಂದು ಬರೆಯಬೇಕಾದುದೇ ದುರಂತ.
ಪ್ರತಿ ಸೆಕೆಂಡು ಕೂಡಾ ಬಂಗೇರನನ್ನು ಮತ್ತೆ ಗೆದ್ದು ಬಾರದ ಹಾಗೆ ಮಾಡುವ ತಂತ್ರಗಾರಿಕೆ ಹೆಣೆಯಲು ಮೀಸಲಾಗುತ್ತದೆ.ಮನೆಮನೆಗೂ ಪೂಜೆ ಪುನಸ್ಕಾರಕ್ಕಾಗಿ ಸಹಾಯ ಸಹಕಾರ ರವಾನೆಯಾಗುತ್ತದೆ. ಎಲ್ಲ ಬೂತಗಳಿಗೂ ಕೋಲ ನೇಮ ಮಾಡಲು ನೆರವು ಹರಿಯುತ್ತದೆ. ಮದುವೆ ಸೀಮಂತ ಮುಂತಾದ ಕಾರ್ಯ ಕಜ್ಜಗಳಿಗೆ ಬೇಕಾದ್ದು ಕೊಡಲಾಗುತ್ತದೆ.
ಬೆಳ್ತಂಗಡಿಯ ಯುವ ಜನತೆ ಕೆ. ವಸಂತ ಬಂಗೇರ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಸೋಲಿಸುತ್ತದೆ.
ಏನೇ ಆದಾಗಲೂ ಬೆಳಗ್ಗೆದ್ದು ವಸಂತ ಬಂಗೇರ ಅವರ ಮನೆ ಬಾಗಿಲಿಗೇ ಹೋಗಿ,’ಸ್ವಾಮೀ ಹಾಗೆ ಹೀಗೆ…’ ಎಂದು ಆಪದ್ಭಾಂಧವನಿಂದ ರಕ್ಷಣೆ ಮತ್ತು ಸಹಾಯ ಪಡೆಯಿತ್ತಿದ್ದ ಬೆಳ್ತಂಗಡಿಯ ಜನತೆ ಇಂದು ಭಾವ ಶೂನ್ಯರಾಗಿದ್ದಾರೆ ಅಷ್ಟೇಕೆ ಬೆಳ್ತಂಗಡಿ ತಾಲುಕು ಕೂಡ ಮರುಗುತ್ತಿದೆ.
ಅಷ್ಟೇ ಮಾತುಗಳಿಂದ ಕೆ. ವಸಂತ ಬಂಗೇರ ಅವರಿಗೆ ನನ್ನ ಭಾವಪೂರ್ಣ ನಮನವನ್ನು ಸಲ್ಲಿಸುತ್ತೇನೆ.
ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಸಂತ ಬಂಗೇರ ಅವರ ಉತ್ತರಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಗಲಿದ ಬಡವರ ಚೇತನಕ್ಕೆ ತನ್ನ ಶಿರ ಬಾಗಿಸಿ ನಮೋ ಎಂದರು.
- ವಿ. ಕೆ. ವಾಲ್ಪಾಡಿ

ಚಿತ್ರದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯರಿಂದ ಕೆ. ವಸಂತ ಬಂಗೇರ ಭಾವಚಿತ್ರಕ್ಕೆ ಪುಷ್ಪ ನಮನಗೈಯುತ್ತಿರುವುದು.ಸ್ಪೀಕರ್ ಯು. ಟಿ. ಖಾದರ್ ಅವರೂ ಇದ್ದಾರೆ.






































