ಕಾರ್ಕಳ ಪರಶುರಾಮ ಪ್ರತಿಮೆ ಪುನರ್ ನಿರ್ಮಾಣ, ಥೀಮ್ ಪಾರ್ಕ್ ಅಭಿವೃದ್ಧಿಗೆ ಸರಕಾರ ಗ್ರೀನ್ ಸಿಗ್ನಲ್ : ವಿಕಾಸಸೌಧದಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ: ತಾಂತ್ರಿಕ ಪರಿಣಿತರ ಸಲಹೆ, ಹೊಸ ಟೆಂಡರ್ ಹಾಗೂ ಜಮೀನು ವರ್ಗಾವಣೆಗೆ ನಿರ್ಧಾರಸರಕಾರದ ಕ್ರಮವನ್ನು ಸ್ವಾಗತಿಸಿ ಕೃತಜ್ಞತೆ ಸಲ್ಲಿಸಿದ ಕಾರ್ಕಳ ಕಾಂಗ್ರೆಸ್

Picture of RB NEWS

RB NEWS

Bureau Report


ಉಡುಪಿ: ಕಾರ್ಕಳ ಬೈಲೂರಿನ ಉಮ್ಮಿಕಲ್ ಬೆಟ್ಟದಲ್ಲಿ ನಿರ್ಮಿಸಲಾಗಿರುವ ಪರಶುರಾಮ ಪ್ರತಿಮೆ ಹಾಗೂ ಥೀಮ್ ಪಾರ್ಕ್ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿ ರಾಜ್ಯ ಸರಕಾರ ಮಹತ್ವದ ಹೆಜ್ಜೆ ಇರಿಸಿದೆ. ಕಳೆದ ಮೂರು ವರ್ಷಗಳಿಂದ ವಿವಾದ ಹಾಗೂ ಹೋರಾಟಕ್ಕೆ ಕಾರಣವಾಗಿದ್ದ ಪ್ರತಿಮೆ ಪುನರ್ ನಿರ್ಮಾಣ ಮತ್ತು ಥೀಮ್ ಪಾರ್ಕ್ ಅಭಿವೃದ್ಧಿಗೆ ಸಂಬಂಧಿಸಿ ಬೆಂಗಳೂರಿನ ವಿಕಾಸಸೌಧದಲ್ಲಿ ನಡೆದ ಸಭೆಯಲ್ಲಿ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ತರಾತುರಿಯಲ್ಲಿ ಪ್ರತಿಮೆ ನಿರ್ಮಿಸಿ ಉದ್ಘಾಟನೆ ಮಾಡಲಾಗಿದೆ ಎಂಬ ಆರೋಪದೊಂದಿಗೆ ಆರಂಭವಾದ ವಿವಾದ, ಬಳಿಕ ಪ್ರತಿಮೆಯ ಲೋಹದ ಗುಣಮಟ್ಟ ಹಾಗೂ ಕಾಮಗಾರಿಯ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು. ಈ ವಿಚಾರವನ್ನು ಪ್ರಶ್ನಿಸಿದ ಹೋರಾಟಗಾರರು ಮತ್ತು ಕಾರ್ಯಕರ್ತರ ವಿರುದ್ಧ ಅವಮಾನ ಹಾಗೂ ಅಪಹಾಸ್ಯ ನಡೆಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಇದೀಗ ರಾಜ್ಯ ಸರಕಾರ ಅಸಲಿ ಪ್ರತಿಮೆ ಪುನರ್ ನಿರ್ಮಾಣ ಹಾಗೂ ಥೀಮ್ ಪಾರ್ಕ್ ಅಭಿವೃದ್ಧಿಗೆ ಮುಂದಾಗಿರುವುದು ಹೋರಾಟಕ್ಕೆ ಮಹತ್ವದ ತಿರುವು ನೀಡಿದೆ ಎಂದು ಕಾರ್ಕಳ ಕಾಂಗ್ರೆಸ್ ಅಭಿಪ್ರಾಯಪಟ್ಟಿದೆ.
ಮಂಗಳವಾರ ಬೆಂಗಳೂರಿನ ವಿಕಾಸಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರ ನೇತೃತ್ವದಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ವಿಶೇಷ ಸಭೆ ನಡೆಯಿತು.

ಕಾರ್ಕಳ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಅವರು ಹೈಕೋರ್ಟ್‌ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರದಲ್ಲಿ ನ್ಯಾಯಾಲಯ ನೀಡಿದ ಮಾರ್ಗದರ್ಶನದ ಹಿನ್ನೆಲೆಯಲ್ಲಿ ಸರಕಾರ ಈ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಕಾಂಗ್ರೆಸ್ ತಿಳಿಸಿದೆ.
ಪ್ರತಿಮೆ ಪುನರ್ ನಿರ್ಮಾಣಕ್ಕೆ ಸಂಬಂಧಿಸಿ ತಾಂತ್ರಿಕ ಪರಿಣಿತರ ಸಲಹೆ ಪಡೆಯುವುದು, ಥೀಮ್ ಪಾರ್ಕ್ ವ್ಯಾಪ್ತಿಯ ಗೋಮಾಳ ಜಮೀನನ್ನು ಪಾರ್ಕ್ ಹೆಸರಿಗೆ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಳ್ಳುವುದು ಹಾಗೂ ಕಾಮಗಾರಿಯನ್ನು ಪಾರದರ್ಶಕವಾಗಿ ನಡೆಸಲು ಹೊಸದಾಗಿ ಟೆಂಡರ್ ಕರೆಯುವುದು ಸೇರಿದಂತೆ ಹಲವು ಪ್ರಮುಖ ವಿಷಯಗಳನ್ನು ಸಭೆಯಲ್ಲಿ ನಿರ್ಧರಿಸಲಾಗಿದೆ. ಉಡುಪಿ ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ಈ ನಿರ್ಣಯಗಳನ್ನು ಕೈಗೊಂಡಿರುವುದು ಅಭಿವೃದ್ಧಿ ಕಾರ್ಯಗಳಿಗೆ ಹೊಸ ವೇಗ ನೀಡುವ ನಿರೀಕ್ಷೆಯಿದೆ. ಸರಕಾರದ ಈ ಕ್ರಮವನ್ನು ಕಾರ್ಕಳ ಕಾಂಗ್ರೆಸ್ ಸ್ವಾಗತಿಸಿ, ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದೆ.
ಶಾಸಕರಿಂದ ಮತ್ತೊಂದು ನಾಟಕ: ಕಾಂಗ್ರೆಸ್ ಟೀಕೆ
ಥೀಮ್ ಪಾರ್ಕ್ ವಿಚಾರವಾಗಿ ವಿಕಾಸಸೌಧದಲ್ಲಿ ಸಭೆ ನಡೆಯುತ್ತಿದ್ದಂತೆಯೇ ಕಾರ್ಕಳ ಶಾಸಕರ ಆಪ್ತರ ಸಾಮಾಜಿಕ ಜಾಲತಾಣಗಳು ಹಾಗೂ ವೆಬ್ ನ್ಯೂಸ್‌ಗಳಲ್ಲಿ ಬೆಂಗಳೂರಿನಿಂದ ಕಾರ್ಕಳಕ್ಕೆ ವಾಹನ ಜಾಥಾ ಆಯೋಜಿಸುವ ಪೋಸ್ಟರ್‌ಗಳು ಹರಿದಾಡುತ್ತಿವೆ. ಥೀಮ್ ಪಾರ್ಕ್ ಕಾಮಗಾರಿ ಪೂರ್ಣಗೊಳಿಸುವಂತೆ ಆಗ್ರಹಿಸಿ ಈ ಜಾಥಾ ಆಯೋಜಿಸಲಾಗುತ್ತಿದೆ ಎಂದು ಪ್ರಚಾರ ಮಾಡಲಾಗುತ್ತಿದೆ.
ಈ ಹಿಂದೆ ಎರಡು ಬಾರಿ ವಾಹನ ಜಾಥಾ ಆಯೋಜಿಸಲು ಪ್ರಯತ್ನಿಸಲಾಗಿದ್ದರೂ ಜನಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿತ್ತು. ಈ ಬಾರಿಯ ಜಾಥಾದ ಉದ್ದೇಶವೂ ವಿಚಿತ್ರವಾಗಿದೆ. ಬೆಂಗಳೂರಿಗೆ ತೆರಳಿ ಮನವಿ ಸಲ್ಲಿಸಬೇಕಾದವರು ಬೆಂಗಳೂರಿನಿಂದ ಕಾರ್ಕಳಕ್ಕೆ ಹಿಂದಿರುಗುವ ಜಾಥಾ ಆಯೋಜಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪಾರ್ಕ್‌ನಲ್ಲಿ ನಡೆಯುವ ಕಾಮಗಾರಿಗಳು ತಮ್ಮ ಹೋರಾಟದ ಫಲ ಎಂದು ಬಿಂಬಿಸಿಕೊಳ್ಳುವ ಉದ್ದೇಶದಿಂದ ಈ ಜಾಥಾ ಆಯೋಜಿಸಲಾಗಿದೆ. ಇದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಕಾಂಗ್ರೆಸ್ ಮುಖಂಡರು ಟೀಕಿಸಿದ್ದಾರೆ.
ಮೂರು ವರ್ಷಗಳ ಹೋರಾಟಕ್ಕೆ ಮತ್ತೊಂದು ಹಂತದ ಜಯ
ರಾಜ್ಯ ಸರಕಾರದ ದಿಟ್ಟ ನಿರ್ಧಾರದಿಂದ ಕಳೆದ ಮೂರು ವರ್ಷಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಮತ್ತೊಂದು ಹಂತದ ಜಯ ದೊರೆತಂತಾಗಿದೆ. ಈ ವಿಚಾರವನ್ನು ಪ್ರಶ್ನಿಸಿದವರ ವಿರುದ್ಧ ದಾಖಲಾಗಿದ್ದ ಪೊಲೀಸ್ ಪ್ರಕರಣಗಳು, ಅಧಿಕಾರಿಗಳು ಅನುಭವಿಸಿದ ಒತ್ತಡ, ಕಾರ್ಯಕರ್ತರ ನಡುವಿನ ಸಂಘರ್ಷಗಳು ಹಾಗೂ ಆರೋಪ-ಪ್ರತ್ಯಾರೋಪಗಳಿಗೆ ಕೊನೆ ಹಾಡುವ ಕಾಲ ಸನ್ನಿಹಿತವಾಗಿದೆ.
ಸರಕಾರದ ಈ ನಿರ್ಧಾರದ ಅನುಷ್ಠಾನಕ್ಕೆ ಯಾವುದೇ ಅಡ್ಡಿಪಡಿಸದೆ ಸಹಕರಿಸುವ ಮನೋಭಾವವನ್ನು ಶಾಸಕರು ಹಾಗೂ ಅವರ ಆಪ್ತರಿಗೆ ಪರಶುರಾಮನೇ ಕರುಣಿಸಲಿ ಎಂದು ಕಾಂಗ್ರೆಸ್ ಮುಖಂಡರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ್ ರಾವ್ ವಿವರ ನೀಡಿದರು. ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಿನಾಥ್ ಭಟ್, ಕಾರ್ಕಳ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಕಾರ್ಕಳ ಪುರಸಭೆಯ ಮಾಜಿ ಅಧ್ಯಕ್ಷರಾದ ಸುಬಿತ್ ಕುಮಾರ್ ಎನ್.ಆರ್. ಮತ್ತು ಪ್ರತಿಮಾ ರಾಣೆ, ಪುರಸಭೆಯ ಮಾಜಿ ಸದಸ್ಯ ವಿವೇಕಾನಂದ ಶೆಣೈ ಹಾಗೂ ಕೆಎಂಎಫ್ ಮಂಗಳೂರು ನಿರ್ದೇಶಕ ಸುಧಾಕರ್ ಶೆಟ್ಟಿ ಉಪಸ್ಥಿತರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top