ಪತ್ನಿಗೆ ವಿಷದ ಇಂಜೆಕ್ಷನ್ ಚುಚ್ಚಿಸಿ ಹತ್ಯೆಗೆ ಯತ್ನ: ಪ್ರೇಮಿಯೊಂದಿಗೆ ದಟ್ಟಾರಣ್ಯದಲ್ಲಿ ಆತ್ಮಹತ್ಯೆ

Picture of RB NEWS

RB NEWS

Bureau Report


ಕುಂದಾಪುರ: ಪತ್ನಿಗೆ ವಿಷಕಾರಿ ದ್ರವ್ಯವಿರುವ ಇಂಜೆಕ್ಷನ್ ಚುಚ್ಚಿಸಿ ಹತ್ಯೆಗೆ ಯತ್ನಿಸಿದ ಆರೋಪ ಎದುರಿಸುತ್ತಿದ್ದ ಆಟೋ ಚಾಲಕ ಹಾಗೂ ಆತನೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದ ಮಹಿಳೆ ದಟ್ಟಾರಣ್ಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಹಾಲ್ಕಲ್ ಸಮೀಪದ ಚಾರ್ಸಾಲ್‌ನಲ್ಲಿ ಸುಮಾರು 15 ದಿನಗಳ ಬಳಿಕ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ಮೃತರನ್ನು ಚಾರ್ಸಾಲ್ ನಿವಾಸಿ, ಕೊಲ್ಲೂರು ಆಟೋ ನಿಲ್ದಾಣದ ರಿಕ್ಷಾ ಚಾಲಕ ವಿಠಲ ನಾಯ್ಕ್ ಹಾಗೂ ಹೊಸೂರು ಗ್ರಾಮದ ದರುಕೋಡು ನಿವಾಸಿ, ಟೈಲರ್ ವೃತ್ತಿಯ ಭವ್ಯ ಸಮಗಾರ್ತಿ ಎಂದು ಗುರುತಿಸಲಾಗಿದೆ.
ವಿಠಲ ನಾಯ್ಕ್ ವಿವಾಹಿತನಾಗಿದ್ದು, ಗರ್ಭಿಣಿ ಪತ್ನಿ ಹಾಗೂ ಪುತ್ರನೊಂದಿಗೆ ವಾಸವಾಗಿದ್ದ ಎನ್ನಲಾಗಿದೆ. ಈ ನಡುವೆ ಟೈಲರ್ ವೃತ್ತಿಯಲ್ಲಿದ್ದ ಭವ್ಯ ಸಮಗಾರ್ತಿಯೊಂದಿಗೆ ಆತನಿಗೆ ಪರಿಚಯವಾಗಿದ್ದು, ಬಳಿಕ ಇಬ್ಬರ ನಡುವೆ ಆತ್ಮೀಯ ಸಂಬಂಧ ಬೆಳೆದಿತ್ತು ಎಂದು ತಿಳಿದುಬಂದಿದೆ.
ಪತ್ನಿಗೆ ವಿಷದ ಇಂಜೆಕ್ಷನ್?
ಪತ್ನಿಯನ್ನು ಹತ್ಯೆಗೈಯಲು ವಿಠಲ ನಾಯ್ಕ್ ಸಂಚು ರೂಪಿಸಿದ್ದಾನೆ ಎಂಬ ಆರೋಪ ಕೇಳಿಬಂದಿತ್ತು. ಗಣೇಶ ಚತುರ್ಥಿಯ ಸಂದರ್ಭದಲ್ಲಿ ಭವ್ಯಳನ್ನು ನರ್ಸ್ ಎಂದು ಪತ್ನಿಗೆ ಪರಿಚಯಿಸಿದ್ದ ಎನ್ನಲಾಗಿದ್ದು, ಬಳಿಕ ಆಕೆಯ ಮೂಲಕ ವಿಷಕಾರಿ ದ್ರವ್ಯವಿರುವ ಸಿರಿಂಜ್‌ ಅನ್ನು ಪತ್ನಿಗೆ ಚುಚ್ಚಿಸಲಾಗಿತ್ತು ಎಂಬ ಆರೋಪವಿದೆ.
ಇಂಜೆಕ್ಷನ್ ಬಳಿಕ ಅಸ್ವಸ್ಥಗೊಂಡ ಮಹಿಳೆಯನ್ನು ಸ್ಥಳೀಯರು ಮಣಿಪಾಲದ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ವಿಠಲ ನಾಯ್ಕ್ ಹಾಗೂ ಭವ್ಯ ಇಬ್ಬರೂ ಮೈಸೂರಿಗೆ ಪರಾರಿಯಾಗಿದ್ದರು ಎನ್ನಲಾಗಿದೆ.
ಮರಳಿ ಬಂದ ಬಳಿಕ ಕಾಡಿನಲ್ಲಿ ಆತ್ಮಹತ್ಯೆ?
ನಂತರ ಇಬ್ಬರೂ ಕೊಲ್ಲೂರು ಭಾಗಕ್ಕೆ ಮರಳಿದ್ದು, ಹಾಲ್ಕಲ್ ಸಮೀಪದ ಚಾರ್ಸಾಲ್‌ನ ದಟ್ಟ ಕಾಡಿನೊಳಗೆ ತೆರಳಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸುಮಾರು 15 ದಿನಗಳ ಹಿಂದೆಯೇ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಮಂಗಳವಾರ ಘಟನೆ ಬೆಳಕಿಗೆ ಬಂದಿದೆ. ದೇಹಗಳು ಕೊಳೆತು ಹೋಗಿದ್ದರಿಂದ ಗುರುತು ಪತ್ತೆಹಚ್ಚಲು ಕಷ್ಟವಾಗುವ ಸ್ಥಿತಿಯಲ್ಲಿದ್ದವು ಎಂದು ತಿಳಿದುಬಂದಿದೆ.
ಈ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರ ಆತ್ಮಹತ್ಯೆಗೆ ನಿಖರ ಕಾರಣವೇನು, ಪತ್ನಿಗೆ ವಿಷಕಾರಿ ಇಂಜೆಕ್ಷನ್ ನೀಡಿದ ಆರೋಪದ ವಾಸ್ತವಾಂಶವೇನು ಹಾಗೂ ಪ್ರಕರಣದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top