ಪರಶುರಾಮನ ಪ್ರತಿಮೆ ವಿಚಾರ: ಹೈಕೋರ್ಟ್ ಅಭಿಪ್ರಾಯ ಶಾಸಕ ಸಮರ್ಥಕರ ಕಣ್ಣು ತೆರೆಸಲಿ
RB NEWS
Bureau Report
ಪರಶುರಾಮನ ಪ್ರತಿಮೆ ವಿಚಾರ: ಹೈಕೋರ್ಟ್ ಅಭಿಪ್ರಾಯ ಶಾಸಕ ಸಮರ್ಥಕರ ಕಣ್ಣು ತೆರೆಸಲಿ
ಜನಾಗ್ರಹ ಸಭೆ ಕಳೆದುಹೋದ ಮಾನ ಉಳಿಸಿಕೊಳ್ಳುವ ಪ್ರಯತ್ನ: ಕಾಂಗ್ರೆಸ್
ಕಾರ್ಕಳ: ಬೈಲೂರು ಉಮ್ಮಿಕಲ್ ಬೆಟ್ಟದ ಮೇಲಿನ ಪರಶುರಾಮನ ಪ್ರತಿಮೆ ಮರುಸ್ಥಾಪನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ ಉದಯ್ ಕುಮಾರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು ವಿಷಯವನ್ನು ರಾಜ್ಯ ಸರಕಾರದ ಅಂಗಳಕ್ಕೆ ವರ್ಗಾಯಿಸಿರುವುದು ಅಸಲಿ ಪ್ರತಿಮೆ ನಿರ್ಮಾಣಕ್ಕಾಗಿ ತಾವು ನಡೆಸಿಕೊಂಡು ಬಂದಿರುವ ಹೋರಾಟಕ್ಕೆ ಮುನ್ನಡೆಯಾಗಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶುಭದಾ ರಾವ್ ಹಾಗೂ ಮುಖಂಡರು ತಿಳಿಸಿದ್ದಾರೆ. ಪರಶುರಾಮನ ಪ್ರತಿಮೆ ಮರುಸ್ಥಾಪನೆಗೆ ಕೋರಿ ಉದಯ್ ಕುಮಾರ್ ಶೆಟ್ಟಿ ಅವರು 2024ರ ಜುಲೈ 24ರಂದು ಸರಕಾರಕ್ಕೆ ಸಲ್ಲಿಸಿರುವ ಮನವಿಯ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವುದು ಪ್ರವಾಸೋದ್ಯಮ ಇಲಾಖೆಯ ಕರ್ತವ್ಯವಾಗಿದೆ ಎಂದು ಹೈಕೋರ್ಟ್ ಸೂಚಿಸಿದೆ. ಮನವಿಯನ್ನು ಪರಿಗಣಿಸುವ ಸಂದರ್ಭದಲ್ಲಿ ನಿರ್ಮಿತಿ ಕೇಂದ್ರಕ್ಕೆ ನೋಟಿಸ್ ನೀಡಿ, ಅವರ ವಾದವನ್ನೂ ಆಲಿಸಬೇಕು ಎಂದು ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಸಲಿ ಪ್ರತಿಮೆ ನಿರ್ಮಾಣವಾಗಬೇಕು ಎಂಬ ಕಾಂಗ್ರೆಸ್ ಪಕ್ಷದ ನಿಲುವಿಗೆ ಹೈಕೋರ್ಟ್‌ನ ಈ ಅಭಿಪ್ರಾಯವು ಮತ್ತಷ್ಟು ಬಲ ನೀಡಿದೆ. ಪ್ರತಿಮೆ ವಿಚಾರದಲ್ಲಿ ಶಾಸಕರನ್ನು ಸಮರ್ಥಿಸುತ್ತಿರುವವರು ಹಾಗೂ ಕಾಂಗ್ರೆಸ್ ಮತ್ತು ಅದರ ನಾಯಕರ ವಿರುದ್ಧ ಆರೋಪಗಳನ್ನು ಮಾಡುತ್ತಿರುವವರು ಇನ್ನಾದರೂ ವಾಸ್ತವಾಂಶವನ್ನು ಅರಿತುಕೊಳ್ಳಬೇಕು ಎಂದು ಮುಖಂಡರು ಹೇಳಿದ್ದಾರೆ. ಮಾನ ಉಳಿಸಿಕೊಳ್ಳುವ ಸಭೆ ಬೈಲೂರಿನ ಮಾರಿಗುಡಿಯಲ್ಲಿ ನಡೆದ ಸಾರ್ವಜನಿಕ ಜನಾಗ್ರಹ ಸಭೆಯ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್ ಮುಖಂಡರು, ಸಭೆಯನ್ನು ಬಿಜೆಪಿ ಅಥವಾ ಬಿಜೆಪಿಯ ಯಾವುದೇ ಪದಾಧಿಕಾರಿಗಳು ಆಯೋಜಿಸಿದ್ದರೆ ತಾವು ಭಾಗವಹಿಸುತ್ತಿರಲಿಲ್ಲ. ಆದರೆ ಸಾರ್ವಜನಿಕ ಸಮಿತಿ ಆಯೋಜಿಸಿದ ಸಭೆ ಎಂಬ ಕಾರಣಕ್ಕೆ ತಮ್ಮ ಅಭಿಪ್ರಾಯ ತಿಳಿಸಲು ತೆರಳಿದ್ದೆವು ಎಂದು ತಿಳಿಸಿದ್ದಾರೆ. ಸಭೆಗೆ ತೆರಳಿದ ಬಳಿಕ ಅದು ಶಾಸಕ ವಿ. ಸುನಿಲ್ ಕುಮಾರ್ ಅವರ ಪ್ರಯೋಜಿತ ಸಭೆ ಎಂಬುದು ತಿಳಿಯಿತು. ಶಾಸಕರ ತಪ್ಪನ್ನು ಸಮರ್ಥಿಸುವ ಉದ್ದೇಶದಿಂದ ಸಭೆ ಆಯೋಜಿಸಲಾಗಿತ್ತು ಹಾಗೂ ತಮ್ಮ ಅಭಿಪ್ರಾಯ ಮಂಡಿಸಲು ಅವಕಾಶ ನೀಡಲಿಲ್ಲ ಎಂದು ಅವರು ಆರೋಪಿಸಿದ್ದಾರೆ. ಆದರೂ ದೇವಸ್ಥಾನದ ಒಳಗೆ ತೆರಳಿ ಪ್ರತಿಮೆಯ ನೈಜತೆಯ ಕುರಿತು ಪ್ರಮಾಣ ಹಾಗೂ ಪ್ರಾರ್ಥನೆ ಸಲ್ಲಿಸಿ ಬಂದಿದ್ದೇವೆ ಎಂದು ತಿಳಿಸಿದ್ದಾರೆ. ಜನಾಗ್ರಹ ಸಭೆಯು ಎಲ್ಲರ ಅಭಿಪ್ರಾಯ ಪಡೆಯುವ ಸಾರ್ವಜನಿಕ ಸಭೆಯಾಗಿರಲಿಲ್ಲ. ಬದಲಾಗಿ ಪ್ರತಿಮೆ ವಿಚಾರದಲ್ಲಿ ಕಳೆದುಕೊಂಡಿರುವ ಮಾನವನ್ನು ಮರಳಿ ಪಡೆಯಲು ಹಾಗೂ ಮುಂದೆ ಮತ್ತಷ್ಟು ಮುಜುಗರ ಎದುರಾಗದಂತೆ ನೋಡಿಕೊಳ್ಳುವ ಪ್ರಯತ್ನವಾಗಿತ್ತು ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ. ಕಾಂಗ್ರೆಸ್ ನಿಲುವು ಸ್ಪಷ್ಟ ಉಮ್ಮಿಕಲ್ ಬೆಟ್ಟದ ಥೀಮ್ ಪಾರ್ಕ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದ ನಿಲುವು ಸ್ಪಷ್ಟವಾಗಿದೆ. ಪಾರ್ಕ್ ನಿರ್ಮಾಣಗೊಂಡಿರುವ ಜಮೀನು ಗೋಮಾಳವಾಗಿರುವುದರಿಂದ ಮೊದಲು ಅದನ್ನು ಥೀಮ್ ಪಾರ್ಕ್ ಹೆಸರಿಗೆ ವರ್ಗಾವಣೆ ಮಾಡಬೇಕು. ಬೆಟ್ಟದ ಮೇಲೆ ಅಸಲಿ ಕಂಚಿನ ಪರಶುರಾಮನ ಪ್ರತಿಮೆಯನ್ನು ನಿರ್ಮಿಸಬೇಕು. ಪ್ರಸ್ತುತ ಪ್ರತಿಮೆಯ ಪರಿಸ್ಥಿತಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯಲ್ಲಿ ಪಕ್ಷ ಬದ್ಧವಾಗಿದೆ ಎಂದು ಮುಖಂಡರು ತಿಳಿಸಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಶುಭದಾ ರಾವ್, ಬ್ಲಾಕ್ ಹಿಂದುಳಿದ ಘಟಕದ ಅಧ್ಯಕ್ಷ ಅನಿಲ್ ಪೂಜಾರಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ವಿವೇಕ್ ಶೆಣೈ, ಎರ್ಲಪಾಡಿ ಗ್ರಾಮೀಣ ಸಮಿತಿ ಅಧ್ಯಕ್ಷ ಸಚಿನ್ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಅಂತೋನಿ ಮಿರಾಂದ ಮೊದಲಾದವರು ಉಪಸ್ಥಿತರಿದ್ದರು.