ಮಂಗಳೂರು: ಪ್ರಕರಣವೊಂದಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಬಂಧಿಸಿದ್ದಾರೆ. ಕಾಸರಗೋಡು ಜಿಲ್ಲೆಯ ಮಂಜೇಶ್ವರ ಗ್ರಾಮದ ಉಪ್ಪಳ ನಿವಾಸಿ ಮಹಮ್ಮದ್ ತೌಸೀಫ್ (40) ಬಂಧಿತ ಆರೋಪಿ. ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಕ್ರಂ ನಂ.135/2013, ಕಲಂ 392 ಐಪಿಸಿ ಪ್ರಕರಣದಲ್ಲಿ ಆರೋಪಿಯಾಗಿದ್ದ ಮಹಮ್ಮದ್ ತೌಸೀಫ್, ಪ್ರಕರಣದ ವಿಚಾರಣೆಗೆ ಸಂಬಂಧಿಸಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ 2ನೇ ಸಿಜೆಎಂ ನ್ಯಾಯಾಲಯವು ಎಲ್ಪಿಸಿ ನಂ.3/2026ರಂತೆ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿ, ಆ.29ರಂದು ಸಿಸಿಬಿ ಪೊಲೀಸರ ಸಹಕಾರದೊಂದಿಗೆ ಪರಂಗಿಪೇಟೆಯಲ್ಲಿ ಮಹಮ್ಮದ್ ತೌಸೀಫ್ನನ್ನು ದಸ್ತಗಿರಿ ಮಾಡಿದ್ದಾರೆ. ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಸೆ.13ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತ ಮಹಮ್ಮದ್ ತೌಸೀಫ್, ಕುಖ್ಯಾತ ಸರಗಳ್ಳತನದ ಆರೋಪಿಯಾಗಿರುವ ಸೈಯದ್ ಸಾಹೀಲ್ನ ಅಣ್ಣ ಎಂದು ಪೊಲೀಸರು ತಿಳಿಸಿದ್ದಾರೆ.