[t4b-ticker]

ಕತ್ತಲಲ್ಲಿ ಮುಳುಗಿದ ಚೆಂಡೆ ಬಸದಿ ರಸ್ತೆ: ಬೀದಿ ದೀಪಗಳಿಲ್ಲದೆ ಗ್ರಾಮಸ್ಥರಿಗೆ ಆತಂಕ

Picture of RB NEWS

RB NEWS

Bureau Report

ಕಾರ್ಕಳ, ಆ.28: ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐತಿಹಾಸಿಕ ಹಿನ್ನೆಲೆಯುಳ್ಳ ಚೆಂಡೆ ಬಸದಿ ರಸ್ತೆಯು ರಾತ್ರಿ ವೇಳೆಯಲ್ಲಿ ಸಂಪೂರ್ಣ ಕತ್ತಲಿನಲ್ಲಿ ಮುಳುಗುತ್ತಿದ್ದು, ಈ ಭಾಗದ ನಿವಾಸಿಗಳು ಹಾಗೂ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರಸ್ತೆಯಲ್ಲಿ ಅಗತ್ಯ ಸಂಖ್ಯೆಯ ಬೀದಿ ದೀಪಗಳಿಲ್ಲದಿರುವುದು ಮಾತ್ರವಲ್ಲದೆ, ಅಳವಡಿಸಲಾಗಿರುವ ಕೆಲವೇ ದಾರಿದೀಪಗಳೂ ಕಳೆದ ಸುಮಾರು ಆರು ತಿಂಗಳಿನಿಂದ ಕಾರ್ಯನಿರ್ವಹಿಸದೆ ಇರುವುದರಿಂದ ಸಮಸ್ಯೆ ಮತ್ತಷ್ಟು ಗಂಭೀರವಾಗಿದೆ.

ಕಾರ್ಕಳ-ಬೆಳ್ತಂಗಡಿ ಮಾರ್ಗವಾಗಿ ಸಂಚರಿಸುವ ಬಸ್‌ಗಳು ಚೆಂಡೆ ಕ್ರಾಸ್ ಮೂಲಕ ಹಾದೂ ಹೋಗುತ್ತವೆ. ನಂತರದಲ್ಲಿ ಪ್ರಯಾಣಿಕರು ಕಾಲ್ನಡಿಗೆಯಲ್ಲಿಯೇ ಸಾಗಬೇಕಾದ ಪರಿಸ್ಥಿತಿ ಎದುರಾಗುತ್ತಿದೆ. ಈ ರಸ್ತೆಯ ಇಕ್ಕೆಲಗಳಲ್ಲಿ ಹಲವಾರು ಮನೆಗಳಿದ್ದು, ಸುತ್ತಮುತ್ತ ಕೃಷಿ ತೋಟಗಳು ಮತ್ತು ಮಳೆಗಾಲದಲ್ಲಿ ದಟ್ಟವಾಗಿ ಬೆಳೆಯುವ ಕುರುಚಲು ಗಿಡಗಳು ರಸ್ತೆಯನ್ನು ಆವರಿಸಿಕೊಂಡಿವೆ. ಇದರಿಂದ ರಾತ್ರಿ ವೇಳೆಯಲ್ಲಿ ರಸ್ತೆ ಇನ್ನಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.

ವಿಶೇಷವಾಗಿ ಕತ್ತಲು ಆವರಿಸಿದ ಬಳಿಕ ರಸ್ತೆಯಲ್ಲಿ ಸಂಚರಿಸುವ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಹೆಚ್ಚಿನ ಆತಂಕಕ್ಕೆ ಒಳಗಾಗುತ್ತಿದ್ದಾರೆ. ರಸ್ತೆಯ ಬದಿಗಳಲ್ಲಿ ಬೆಳಕು ಇಲ್ಲದ ಕಾರಣ ಎದುರಿನಿಂದ ಬರುವ ವಾಹನಗಳು, ಪಾದಚಾರಿಗಳು ಹಾಗೂ ರಸ್ತೆ ಬದಿಯಲ್ಲಿರುವ ಗುಂಡಿ-ತಗ್ಗುಗಳು ಸ್ಪಷ್ಟವಾಗಿ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ರಸ್ತೆ ಬದಿಯ ಸಸ್ಯವರ್ಗ ದಟ್ಟವಾಗಿ ಬೆಳೆದಿರುವುದರಿಂದ ಹಾವು ಸೇರಿದಂತೆ ವಿಷಕಾರಿ ಸರಿಸೃಪಗಳ ಉಪಟಳದ ಆತಂಕವೂ ಸ್ಥಳೀಯರಲ್ಲಿ ಇದೆ.

ಕಾರ್ಯನಿರ್ವಹಿಸದ ವಿದ್ಯುತ್ ಕಂಬಗಳ ಸುತ್ತಲೂ ಸಸ್ಯಬಳ್ಳಿಗಳು ಬೆಳೆದು ಆವರಿಸಿಕೊಂಡಿರುವುದು ಕೂಡ ಕಂಡುಬರುತ್ತಿದೆ. ವಿದ್ಯುತ್ ಕಂಬಗಳು ಹಾಗೂ ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ಆರೋಪ ಸ್ಥಳೀಯರಿಂದ ಕೇಳಿಬರುತ್ತಿದೆ. ಸಂಬಂಧಪಟ್ಟ ಮೆಸ್ಕಾಂ ಇಲಾಖೆ ಈ ಭಾಗದ ವಿದ್ಯುತ್ ಕಂಬಗಳು ಮತ್ತು ದಾರಿದೀಪಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ಅಗತ್ಯ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂಬ ಆಗ್ರಹ ವ್ಯಕ್ತವಾಗಿದೆ.

ಇನ್ನೊಂದೆಡೆ, ನಲ್ಲೂರು ಗ್ರಾಮ ಪಂಚಾಯಿತಿಯಲ್ಲಿ ಚುನಾವಣೆ ನಡೆಯದೆ ಇರುವುದರಿಂದ ಆಡಳಿತಾತ್ಮಕವಾಗಿ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಕುಂಠಿತಗೊಂಡಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳ ಬದಲಾಗಿ ಅಧಿಕಾರಿಗಳ ಆಡಳಿತವೇ ಮುಂದುವರಿದಿರುವ ಹಿನ್ನೆಲೆಯಲ್ಲಿ ಸ್ಥಳೀಯ ಸಮಸ್ಯೆಗಳು ತ್ವರಿತವಾಗಿ ಪರಿಹಾರವಾಗುತ್ತಿಲ್ಲ ಎಂಬ ಅಸಮಾಧಾನವೂ ಕೆಲವರಲ್ಲಿದೆ.

ಗ್ರಾಮದ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿಯಮಿತವಾಗಿ ಸಂಚರಿಸಿ, ಸಾರ್ವಜನಿಕರಿಗೆ ಎದುರಾಗುತ್ತಿರುವ ಮೂಲಭೂತ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಶೀಲಿಸಬೇಕಾಗಿದೆ. ಚೆಂಡೆ ಬಸದಿ ರಸ್ತೆಯಂತಹ ಜನಸಂಚಾರವಿರುವ ಪ್ರಮುಖ ರಸ್ತೆಯಲ್ಲಿ ಬೀದಿ ದೀಪಗಳ ಕೊರತೆ ಹಾಗೂ ದಾರಿದೀಪಗಳು ಕಾರ್ಯನಿರ್ವಹಿಸದಿರುವುದನ್ನು ಕೇವಲ ಸಣ್ಣ ಸಮಸ್ಯೆಯೆಂದು ನಿರ್ಲಕ್ಷಿಸದೆ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ತುರ್ತಾಗಿ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಹಾಗೂ ಮೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆಯಲ್ಲಿರುವ ಬೀದಿ ದೀಪಗಳನ್ನು ಪರಿಶೀಲಿಸಿ, ಕೆಟ್ಟುಹೋಗಿರುವ ದೀಪಗಳನ್ನು ದುರಸ್ತಿಪಡಿಸುವುದರ ಜತೆಗೆ ಅಗತ್ಯವಿರುವ ಕಡೆ ಹೊಸ ದಾರಿದೀಪಗಳನ್ನು ಅಳವಡಿಸಬೇಕು. ರಸ್ತೆ ಬದಿಯಲ್ಲಿ ಬೆಳೆದಿರುವ ಕುರುಚಲು ಗಿಡಗಳನ್ನು ತೆರವುಗೊಳಿಸಿ, ರಾತ್ರಿ ವೇಳೆಯಲ್ಲಿ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ—ಸಾರ್ವಜನಿಕರ ಮೂಲಭೂತ ಅಗತ್ಯಗಳ ಕಡೆ ನಿರಂತರ ಗಮನ ಹರಿಸಿದಾಗ ಮಾತ್ರ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಸಾಧ್ಯ. ಚೆಂಡೆ ಬಸದಿ ರಸ್ತೆಯ ಕತ್ತಲಿನ ಸಮಸ್ಯೆಗೆ ಸಂಬಂಧಪಟ್ಟವರು ಇನ್ನಾದರೂ ಶಾಶ್ವತ ಪರಿಹಾರ ಕಲ್ಪಿಸಬೇಕಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top