ಕೊಕ್ಕರ್ಣೆ, ಜು.06: ಕೊಕ್ಕರ್ಣೆ ಪ್ರದೇಶದಲ್ಲಿ 108 ಆಂಬುಲೆನ್ಸ್ ಸೇವೆಯ ಮೂಲಕ ಮತ್ತೊಂದು ಮಾನವೀಯ ಹಾಗೂ ಯಶಸ್ವಿ ಕಾರ್ಯ ನಡೆದಿದೆ.
ಜುಲೈ 06ರ ಬೆಳಿಗ್ಗೆ ಸುಮಾರು 09:25ರ ವೇಳೆಯಲ್ಲಿ ಘಟನೆ ನಡೆದಿದೆ. ಕುಂದಾಪುರ ತಾಲೂಕಿನ ಶಂಕರನಾರಾಯಣ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಕರೆ ಬಂದ ತಕ್ಷಣ 108 ಆಂಬುಲೆನ್ಸ್ ತಂಡ ಸ್ಥಳಕ್ಕೆ ಧಾವಿಸಿತು. ಸುಮಾರು 30 ವರ್ಷದ ಗರ್ಭಿಣಿ ಸರೋಜ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿಯಲ್ಲೇ ಹೆರಿಗೆ ನೋವು ಹೆಚ್ಚಾಗಿ, ಆಂಬುಲೆನ್ಸ್ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದರು. 108 ಸಿಬ್ಬಂದಿ ಪರಮೇಶ್ವರ್ ಛಲವಾದಿ ಅವರು ತಕ್ಷಣ ಸೂಕ್ತ ವೈದ್ಯಕೀಯ ನೆರವು ನೀಡಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದರು. ಚಾಲಕ ಬಾಲಪ್ಪ ಕೂಡ ಈ ಸಂದರ್ಭದಲ್ಲಿ ಸಹಕರಿಸಿದರು. ನಂತರ ತಾಯಿ ಹಾಗೂ ಮಗುವನ್ನು ಕುಂದಾಪುರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ 108 ಆಂಬುಲೆನ್ಸ್ ಸೇವೆಯ ತ್ವರಿತ ಸ್ಪಂದನೆ ಮತ್ತೊಮ್ಮೆ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.