ಬನ್ನಡ್ಕ ಸಮೀಕ್ಷೆಗೆ ಥರ್ಡ್ ಅಂಪಾಯರ್ : ಸಂಸದ

Picture of RB NEWS

RB NEWS

Bureau Report

ಭಾರೀ ಸುದ್ದಿ ಮಾಡಿ ಪ್ರಚಾರಕ್ಕೆ ಸಿಲುಕಿದ್ದ ರಾಷ್ಟ್ರೀಯ ಹೆದ್ದಾರಿ 169ರ ಬನ್ನಡ್ಕ ಎಂಬಲ್ಲಿನ ಕೆಲವೊಂದು ಸಮಸ್ಯೆಗಳ ವೀಕ್ಷಣೆ ಮತ್ತು ಅಲ್ಲಿನ ನಿವಾಸಿಗಳ ಜೊತೆ ಮಾತುಕತೆಗೆ ಸಂಸದ ಬೃಜೇಶ್ ಚೌಟ ಅವರು ಬನ್ನಡ್ಕಕ್ಕೆ ಆಗಮಿಸಿ ಜನರಲ್ಲಿ ಮನೆಮಾಡಿದ್ದ ಆಕ್ರೋಶವನ್ನು ಶಮನಗೊಳಿಸಿದ್ದಾರೆ. ಜೊತೆಗೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಕೂಡಾ ಆಗಮಿಸಿದ್ದರು.

ಸಂಸದರ ಆಗಮನದ ನಿರೀಕ್ಷೆಯಲ್ಲಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಸ್ಥಳೀಯರು ಮುಖ್ಯವಾಗಿ ಪಡುಮಾರ್ನಾಡು ಗ್ರಾಮಸ್ಥರು ಈ ರಸ್ತೆಯಿಂದ ಉಂಟಾಗಿರುವ ಮತ್ತು ಉಲ್ಬಣಿಸಿರುವ ಸಂಚಾರ ಸಮಸ್ಯೆಗಳನ್ನು ಒಬ್ಬೊಬ್ಬರಾಗಿ ಹೇಳತೊಡಗಿದರು.
ರಸ್ತೆ ದಾಟುವಲ್ಲಿ ಹೆಚ್ಚಿನವರು ಶಾಲಾ ಮಕ್ಕಳು ತಾಯಂದಿರಿರುವುದರಿಂದ ಈ ರಸ್ತೆಗೆ ಅಡ್ಜವಾಗಿ ಸ್ಕೈ ವಾಕ್ ನಿರ್ಮಿಸಬೇಕೆಂದು ಜನರು ಮನವಿ ಮಾಡಿದರು. ರಸ್ತೆಯಲ್ಲಿ ಯೂ ಟರ್ನ್ ತೆಗೆದುಕೊಂಡು ಮತ್ತೊಂದು ಮಗ್ಗಲುಗೆ ಪ್ರವೇಶಿಸಬೇಕಾದರೆ ಸುಮಾರು ಒಂದೂವರೆ ಕಿ. ಮೀ. ದೂರ ಕ್ರಮಿಸಬೇಕಾಗಿರುವುದರಿಂದ ಬನ್ನಡ್ಕದಲ್ಲಿಯೆ ಇದ್ದು ಸಧ್ಯಕ್ಕೆ ತಡೆಮಾಡಿರುವ ಪ್ರವೇಶ ದಾರಿಯನ್ನೆ ಪುನಃ ಒದಗಿಸಬೇಕೆಂದು ಜನರು ತಿಳಿಸಿದರು. ಇನ್ನು ಕೆಲವರು ಝಿಗ್ ಝಾಗ್ ಮಾದರಿಯಲ್ಲಿ ಬೇರಿಕೇಡ್ ಇಡಬೇಕು ಎನ್ನುವ ಸಲಹೆಯನ್ನೂ ನೀಡಿದರು. ಜನರು ಸಂಸದ,ಶಾಸಕ ಇಬ್ಬರನ್ನು ಸುತ್ತುವರಿದುಕೊಂಡೇ ತನ್ನದೊಂದು, ತನ್ನೊದೊಂದು ಎನ್ನುವಂತೆ ಸ್ಪರ್ಧಾತ್ಮಕವಾಗಿ ಪ್ರಶ್ನೆಗಳನ್ನು,ಸಲಹೆಗಳನ್ನು ನೀಡತೊಡಗಿದರು.ಈ ಸಂದರ್ಭದಲ್ಲಿ ರಾ. ಹೆದ್ದಾರಿ ರಚನೆಯ ಯೋಜನಾ ನಿರ್ದೇಶರೂ ಆಗಮಿಸಿದ್ದು ಅವರಲ್ಲಿಯೂ ಜನರು ತಮ್ಮ ಮುಖ್ಯ ಸಮಸ್ಯೆ ಇದುವೇ ಎಂದು ವಿವರಿಸಿದರು. ಕೆಲವು ಪ್ರಸ್ತುತವಾಗಿದ್ದರೆ ಇನ್ನು ಕೆಲವರದು ಅಧಿಕ ಪ್ರಸಂಗವೂ ಆಗಿತ್ತು ಮತ್ತು ಕೆಲವರದ್ದು ಎಸ್ ಕೆ ಎಫ್ ಕಂಪನಿಯ ಮೇಲಿರುವ ಅಸಮಾಧಾನಕ್ಕೂ ಎಂಬಂತೆ ಸಮಸ್ಯೆಯನ್ನು ತಾಳೆ ಹಾಕಲಾಗುತ್ತಿತ್ತು.
ಒಟ್ಚಿನಲ್ಲಿ ಸಂಸದ ಮತ್ತು ಶಾಸಕರ ಭೇಟಿ ಕಾರ್ಯಕ್ರಮವು ಬಹಳ ಶಿಸ್ತುಬದ್ಧವಾಗಿಯೆ ಮುಗಿದಿದೆ. ಕೆಲವು ದಿನಗಳಿಂದ ದಿನಾಂಕ ಮುಂದೂಡುತ್ತಲೆ ಇದ್ದ ಸಂಸದರ ಮೇಲಿನ ಏನೇ ಅಸಮಾಧಾನ ಬಗ್ಗೆ ಕೂಡಾ ಮಾತುಗಳಲ್ಲಿ ವ್ಯಕ್ತವಾಗದೆ ಹೆಚ್ಚು ಸಂತಸದಿಂದಲೇ ಸುತ್ತುವರಿದು ಮಾತಾಡಿದರು. ಗೆದ್ದು ಸಂಸತ್ತಿಗೆ ಹೋದ ಸಂಸದ ತಡವಾಗಿ ಬಂದರೂ ಮಾತಿನಲ್ಲಿ ಯಾವುದೇ ತಡವರಿಕೆ ,ಮುಜುಗರವಿರಲಿಲ್ಲ. ಬಹಳ ತಾಳೆಮೆಯಿಂದಲೇ ಜನರೊಡನೆ ಮಾತುಕತೆಗೆ ತೊಡಗಿದರು.

ಥರ್ಡ್ ಅಂಪಾಯರ್ !

ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಗತ್ಯ ಆಗಬೇಕಾದ ಸುಮಾರು ಆರುನೂರು ಮೀಟರ್ ಉದ್ದದ ಸರ್ವೀಸ್ ರಸ್ತೆಯ ನಿರ್ಮಾಣಕ್ಕೆ ಅವಕಾಶ ಮೊದಲೇ ಇಡಲಾಗಿದೆ. ಸಂಬಂಧಪಟ್ಟಂತೆ ಕೆಲವು ಕಡತಗಳ ವಿಲೇವಾರಿ ಮತ್ತು ಅನುದಾನ ಮೊತ್ತ ವಿತರಣೆಯಿಂದ ತಡವಾಗಿದೆ.ಸಧ್ಯದಲ್ಲಿಯೆ ಆ ಬಗ್ಗೆ ಬಾಕಿ ಇರುವ ಎಲ್ಲ ಕೆಲಸಗಳನ್ನು ರಾಷ್ಟ್ರೀಯ ಹೆದ್ದಾರಿ ಸಚಿವಾಲಯದಲ್ಲಿ ಪೂರ್ಣಗೊಳಿಸಲಾಗುವುದು.
ರಸ್ತೆಯಲ್ಲಿ ಏರು ತಗ್ಗುಗಳು ಹಾಗೂ ಇನ್ನು ಮುಂತಾದ ವ್ಯತ್ಯಾಸಗಳಿವೆ ಎನ್ನುವುದನ್ನು ಆಲಿಸಿದ ಸಂಸದರು,ತಾನು ಸಿವಿಲ್ ಇಂಜಿನೀಯರ್ ಅಥವಾ ರಸ್ತೆ ನಿರ್ಮಾಣ ತಂತ್ರಜ್ಞನೂ ಅಲ್ಲ. ಅದಕ್ಕೊಂದು ಬಲಿಷ್ಠ ತಂಡವೇ ಬೇಕಾಗುವುದು. ಹಾಗಾಗಿ ಮೂರನೆಯವರಿಂದ ಸಮೀಕ್ಷೆ ಮಾಡಿಸ ಬೇಕಾಗುತ್ತದೆ. ಮಂಗಳೂರಿನ ಮುಗ್ರೋಡಿ ನಿರ್ಮಾಣ ಸಂಸ್ಥೆಯವರಿಂದ ಆ ಕೆಲಸ ಮಾಡಿಸುವುದಾಗಿ,ಅವರ ಸಮೀಕ್ಷಾ ವರದಿಯನ್ನು ನೋಡಿ ಆ ನಂತರ ಈ ಹೆದ್ದಾರಿ ನಿರ್ಮಾಣ ಸಂಸ್ಥೆ ಡಿಬಿಎಲ್ ಜೊತೆ ಮಾತುಕತೆ ಮಾಡಬಹುದು ಎಂದು ಸಂಸದರು ತನ್ನ ಅಭಿಪ್ರಾಯ ವ್ಯಕ್ತಪಡಿಸಿದರು.ಶಾಸಕ ಉಮಾನಾಥ ಕೋಟ್ಯಾನ್ ಕೂಡಾ ಅದನ್ನು ಸ್ವಾಗತಿಸಿದರು.
ಬನ್ನಡ್ಕ ಪ್ರದೇಶ ರಾಷ್ಟ್ರೀಯ ಹೆದ್ದಾರಿ ಸರಿಪಡಿಸಬೇಕೆನ್ನುವ ವಿಚಾರದಲ್ಲಿ ಮುಂಚಾಣಿಯಲ್ಲಿದ್ದು ನಾಯಕತ್ವವನ್ನು ವಹಿಸಿಕೊಂಡಿದ್ದ ಸೂರಜ್ ಜೈನ್ ಮಾರ್ನಾಡು ,ಅಮರ್ ಕೋಟೆ ಹಾಗೂ ಅಕ್ಷಯ ಬನ್ನಡ್ಕ,ಸಂತೋಷ್ ನಾಯಕ್,ಪ್ರೀತಂ,ಉದಯ ಬನ್ನಡ್ಕ,ರೋಷನ್ ಕರ್ಕೇರ, ನಿತಿನ್ ಕೋಟ್ಯಾನ್, ದಯಾನಂದ ಹೆಗ್ಡೆ, ಟೆಸ್ಲಿನಾ ರಾಡ್ರಿಗಸ್ ಮುಂತಾದವರೊಂದಿಗೆ ಹಿರಿಯರು,ಕಿರಿಯವರು ಭಾಗವಹಿಸಿದ್ದರು.


ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top