ಕಾಂತಾವರದಲ್ಲಿ ‘ಮಹಾಭಾರತ ಭಾವದೀಪ’ ಉಪನ್ಯಾಸಮಾಲೆ – ಪುರುಷಾರ್ಥಗಳ ಸಮಗ್ರ ವಿವರಣೆ
RB NEWS
Bureau Report
ಕಾಂತಾವರದಲ್ಲಿ ‘ಮಹಾಭಾರತ ಭಾವದೀಪ’ ಉಪನ್ಯಾಸಮಾಲೆ – ಪುರುಷಾರ್ಥಗಳ ಸಮಗ್ರ ವಿವರಣೆ
ಕಾರ್ಕಳ : ಕಾಂತಾವರದಲ್ಲಿ ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ತಾಲೂಕು ಘಟಕಗಳ ಸಹಭಾಗಿತ್ವದಲ್ಲಿ ೨೦೨೬ರ ವರ್ಷಪೂರ್ತಿ ಪ್ರತೀ ತಿಂಗಳು ನಡೆಯುತ್ತಿರುವ ‘ಮಹಾಭಾರತ ಭಾವದೀಪ’ ಉಪನ್ಯಾಸಮಾಲೆಯ ದ್ವಿತೀಯ ಸೋಪಾನವು ಫೆಬ್ರವರಿ ೨೮ರಂದು ನೆರವೇರಿತು. ‘ವಂಶಾವಾರಿಧಿ ರತ್ನ – ವಿಧುವಂಶ ವಾರಿಧಿ’ ಎಂಬ ವಿಷಯದ ಕುರಿತು ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆ ಉಪನ್ಯಾಸ ನೀಡಿದರು. ತಮ್ಮ ಭಾಷಣದಲ್ಲಿ ಅವರು ಮಹಾಭಾರತದಲ್ಲಿ ಪ್ರತಿಪಾದಿತವಾದ ಪುರುಷಾರ್ಥಗಳ ಸಮಗ್ರ ತತ್ತ್ವವನ್ನು ವಿಶ್ಲೇಷಿಸಿದರು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳಲ್ಲಿ ಧರ್ಮ–ಅರ್ಥ–ಕಾಮಗಳನ್ನು ‘ತ್ರಿವರ್ಗ’ವೆಂದು, ಮೋಕ್ಷವನ್ನು ‘ಅಪವರ್ಗ’ವೆಂದು ಪರಿಗಣಿಸಲಾಗುತ್ತದೆ ಎಂದು ವಿವರಿಸಿದರು. ಸಾಮಾನ್ಯವಾಗಿ ತ್ರಿವರ್ಗಗಳ ಸಾಧನೆಯನ್ನೇ ಜೀವನದ ಮುಖ್ಯ ಗುರಿಯೆಂದು ಭಾವಿಸುವ ಪ್ರವೃತ್ತಿ ನಮ್ಮಲ್ಲಿ ಕಾಣಿಸಿಕೊಂಡರೂ, ಮಹಾಭಾರತವು ಬಂಧನಗಳಿಂದ ಮುಕ್ತಿ ಪಡೆದು ಮೋಕ್ಷವನ್ನು ಸಾಧಿಸುವುದೇ ಶ್ರೇಷ್ಠವಾದ ಗುರಿಯೆಂದು ಸ್ಪಷ್ಟಪಡಿಸುತ್ತದೆ ಎಂದು ಅವರು ತಿಳಿಸಿದರು. ಜೀವನದಲ್ಲಿ ಧರ್ಮದ ಆಧಾರದಿಂದ ಅರ್ಥ ಮತ್ತು ಕಾಮಗಳನ್ನು ಸಾಧಿಸಿ, ಅಂತಿಮವಾಗಿ ಮೋಕ್ಷಪ್ರಾಪ್ತಿಯತ್ತ ಸಾಗುವುದೇ ಸಮಗ್ರ ಪುರುಷಾರ್ಥ ಸಾಧನೆ ಎಂಬ ಸಂದೇಶವನ್ನು ಮಹಾಭಾರತ ನೀಡುತ್ತದೆ ಎಂದು ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ವೇದಿಕೆಯಲ್ಲಿ ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ಹಾಗೂ ಶ್ರೀಮತಿ ಮಿತ್ರಪ್ರಭಾ ಹೆಗ್ಡೆ ಉಪಸ್ಥಿತರಿದ್ದರು. ಶ್ರೀಮತಿ ಗೀತಾ ಮಲ್ಯ ಪ್ರಾರ್ಥಿಸಿದರು. ಶ್ರೀಮತಿ ಸುಲೋಚನಾ ಬಿ.ವಿ. ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಜಗದೀಶ ಗೋಖಲೆ ವಂದಿಸಿದರು.