ಮೀನುಗಾರಿಕಾ ದಕ್ಕೆಯ ಕಾರ್ಮಿಕ ಮುರುಗನ್ ಸಾವು – ನ್ಯಾಯಕ್ಕಾಗಿ ಹಾಗೂ ರೂ.25 ಲಕ್ಷ ಪರಿಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

Picture of RB NEWS

RB NEWS

Bureau Report

ಮೀನುಗಾರಿಕಾ ದಕ್ಕೆಯ ಕಾರ್ಮಿಕ ಮುರುಗನ್ ಸಾವು – ನ್ಯಾಯಕ್ಕಾಗಿ ಹಾಗೂ ರೂ.25 ಲಕ್ಷ ಪರಿಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ

ಮಂಗಳೂರು: ಮೀನುಗಾರಿಕಾ ದಕ್ಕೆಯ ಕಾರ್ಮಿಕ ಮುರುಗನ್ ಸಾವು – ನ್ಯಾಯಕ್ಕಾಗಿ ಹಾಗೂ ರೂ.25 ಲಕ್ಷ ಪರಿಹಾರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ
ಮಂಗಳೂರು: ಮಂಗಳೂರು ಮೀನುಗಾರಿಕಾ ದಕ್ಕೆ ಪ್ರದೇಶದಲ್ಲಿ ದುಡಿಯುತ್ತಿದ್ದ ವೇಳೆ ತುಕ್ಕು ಹಿಡಿದ ದಾರಿದೀಪದ ಕಂಬ ಬಿದ್ದ ಪರಿಣಾಮ ತಮಿಳುನಾಡು ಮೂಲದ ಕಾರ್ಮಿಕ ಮುರುಗನ್ ಸ್ಥಳದಲ್ಲೇ ಮೃತಪಟ್ಟ ಘಟನೆಗೆ ಸಂಬಂಧಿಸಿ, ಈ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮೃತ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ Centre of Indian Trade Unions (CITU) ಹಾಗೂ Democratic Youth Federation of India (DYFI) ಸಂಘಟನೆಗಳ ಜಂಟಿ ನೇತೃತ್ವದಲ್ಲಿ ಇಂದು ದಕ್ಕೆ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲಾಯಿತು.
300ಕ್ಕೂ ಹೆಚ್ಚು ಮೀನುಗಾರಿಕಾ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ, ಮೀನುಗಾರಿಕಾ ಇಲಾಖೆ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯವನ್ನು ತೀವ್ರವಾಗಿ ಖಂಡಿಸಿದರು. ಆಕ್ರೋಶಭರಿತ ಘೋಷಣೆಗಳನ್ನು ಕೂಗಿದ ಕಾರ್ಮಿಕರು, ಕಾರ್ಮಿಕರ ಜೀವಕ್ಕೆ ಬೆಲೆ ನೀಡದ ಆಡಳಿತದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ CITU ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಅವರು, ದಿನವೊಂದಕ್ಕೆ ಕೋಟ್ಯಾಂತರ ರೂಪಾಯಿ ವ್ಯಾಪಾರ ವಹಿವಾಟು ನಡೆಯುವ ಮೀನುಗಾರಿಕಾ ದಕ್ಕೆ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಆಡಳಿತದ ಬೇಜವಾಬ್ದಾರಿತನವನ್ನು ತೋರಿಸುತ್ತದೆ ಎಂದರು. ಸಾವಿರಾರು ಕಾರ್ಮಿಕರು ಜಿಲ್ಲೆಯ ಆರ್ಥಿಕ ಚಟುವಟಿಕೆಗಳಿಗೆ ಶಕ್ತಿ ತುಂಬುತ್ತಿದ್ದರೂ, ಅವರ ಸುರಕ್ಷತೆ ಹಾಗೂ ಸಾಮಾಜಿಕ ಭದ್ರತೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಕಾರ್ಮಿಕರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಸೌಕರ್ಯಗಳಿಲ್ಲವೆಂದೂ, ಘಟನೆ ನಡೆದು ವಾರ ಕಳೆದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದಿರುವುದು ಅಮಾನುಷ ನಡೆ ಎಂದು ಟೀಕಿಸಿದರು.
DYFI ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಅವರು ಮಾತನಾಡಿ, ತಮಿಳುನಾಡು ಮೂಲದ ಕಾರ್ಮಿಕರು ಮಂಗಳೂರಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಆದರೆ ಮೃತ ಕಾರ್ಮಿಕ ತಮಿಳುನಾಡು ಮೂಲದವರಾಗಿದ್ದರಿಂದ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿರುವುದು ಖೇದಕರ ಎಂದರು. ಧಕ್ಕೆಯಲ್ಲಿ ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ ಕಾರ್ಮಿಕರು ದುಡಿಯುತ್ತಿದ್ದಾರೆ. ಪ್ರವೇಶಿಸುವ ವಾಹನಗಳಿಂದ ಲಕ್ಷಾಂತರ ರೂಪಾಯಿ ಸುಂಕ ವಸೂಲಿ ಮಾಡಲಾಗುತ್ತಿದ್ದರೂ ಸಮರ್ಪಕ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಟ್ರಾಫಿಕ್ ಸಮಸ್ಯೆ ಹಾಗೂ ಡ್ರೈನೇಜ್ ಅವ್ಯವಸ್ಥೆಯಿಂದಾಗಿ ಪ್ರದೇಶ ದುರ್ಗಂಧದಿಂದ ಬಳಲುತ್ತಿದೆ ಎಂದು ಹೇಳಿದರು. ಮುರುಗನ್ ಸಾವಿಗೆ ಕಾರಣರಾದ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
CITU ಜಿಲ್ಲಾ ನಾಯಕ ಯೋಗೀಶ್ ಜಪ್ಪಿನಮೊಗರು ಹಾಗೂ DYFI ಜಿಲ್ಲಾ ಮುಖಂಡ ಸಂತೋಷ್ ಬಜಾಲ್ ಸೇರಿದಂತೆ ಇತರರು ಮಾತನಾಡಿ, ಘಟನೆಯ ಗಂಭೀರತೆಯನ್ನು ವಿವರಿಸಿ ಜನಪ್ರತಿನಿಧಿಗಳ ನಿರ್ಲಕ್ಷ್ಯತೆಯನ್ನು ಖಂಡಿಸಿದರು.
ಪ್ರತಿಭಟನೆಯಲ್ಲಿ CITU ಮತ್ತು DYFI ಜಿಲ್ಲಾ ನಾಯಕರು, ಜನವಾದಿ ಮಹಿಳಾ ಸಂಘಟನೆ, ಹಸಿ ಮೀನು ಕಾರ್ಮಿಕರ ಸಂಘದ ಮುಖಂಡರು ಹಾಗೂ ನೂರಾರು ಕಾರ್ಮಿಕರು ಭಾಗವಹಿಸಿದ್ದರು.
ಪರಿಹಾರ ಘೋಷಣೆಗೆ ವಾರದ ಗಡುವು
ಮೀನುಗಾರಿಕಾ ಇಲಾಖೆಯ ನಿರ್ಲಕ್ಷ್ಯದಿಂದ ಮುರುಗನ್ ಅವರು ಮೃತಪಟ್ಟಿದ್ದು, ಜಿಲ್ಲಾಡಳಿತವು ಒಂದು ವಾರದೊಳಗೆ ಮೃತ ಕುಟುಂಬಕ್ಕೆ ರೂ.25 ಲಕ್ಷ ಪರಿಹಾರ ಘೋಷಿಸಬೇಕು. ಇಲ್ಲವಾದಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲಾಗುವುದು. ಮೀನುಗಾರಿಕಾ ಸಚಿವರು ಜಿಲ್ಲೆಗೆ ಆಗಮಿಸಿದರೆ ಘೇರಾವ್ ಮೂಲಕ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು DYFI ಜಿಲ್ಲಾಧ್ಯಕ್ಷ ಬಿ.ಕೆ. ಇಮ್ತಿಯಾಜ್ ಎಚ್ಚರಿಸಿದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top