ಕೂರ್ಶೆಗುಡ್ಡೆ ಮೀಸಲು ಅರಣ್ಯದಲ್ಲಿ ಮರಗಳನ್ನು ಕಡಿದ ಆರೋಪಿಗಳಿಗೆ ಶಿಕ್ಷೆ
RB NEWS
Bureau Report
ಕೂರ್ಶೆಗುಡ್ಡೆ ಮೀಸಲು ಅರಣ್ಯದಲ್ಲಿ ಮರಗಳನ್ನು ಕಡಿದ ಆರೋಪಿಗಳಿಗೆ ಶಿಕ್ಷೆ
ಬೈಂದೂರು: ವಲಯ ಅರಣ್ಯ ಇಲಾಖೆಯ ಅಪರಾಧ ಸಂಖ್ಯೆ 07/2014-15 ಪ್ರಕರಣದಲ್ಲಿ ಕೂರ್ಶೆಗುಡ್ಡೆ ಮೀಸಲು ಅರಣ್ಯದಲ್ಲಿ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡಿದ್ದ ನಾಲ್ವರು ಆರೋಪಿಗಳಿಗೆ ಬೈಂದೂರಿನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ.9. ನ್ಯಾಯಾಲಯ ಶಿಕ್ಷೆ ವಿಧಿಸಿದೆ. 1ನೇ ಆರೋಪಿ ರವಿಚಂದ್ರ (ನಾಗರಾಜ ಪುತ್ರ, ನಂದನವನ ಗ್ರಾಮ), 2ನೇ ಆರೋಪಿ ಚಂದ್ರ ಅಲಿಯಾಸ್ ನಿತ್ಯಾನಂದ (ಪದ್ಮನಾಭ ಪುತ್ರ, ಮರ್ಣೆ ಗ್ರಾಮ), 3ನೇ ಆರೋಪಿ ಸತೀಶ (ಸೀನ ಆಚಾರಿ ಪುತ್ರ, ಮುಡೂರು ಗ್ರಾಮ), 4ನೇ ಆರೋಪಿ ಮಹೇಶ (ನಾರಾಯಣ ಆಚಾರಿ ಪುತ್ರ, ಗುಳ್ಳಿ, ಬೆಳಲ್ ಕಂದ ಗ್ರಾಮ) ಇವರು ದಿನಾಂಕ 01-07-2014ರಂದು ಬೈಂದೂರು ವ್ಯಾಪ್ತಿಯ ಕೂರ್ಶೆಗುಡ್ಡೆ ಮೀಸಲು ಅರಣ್ಯದಲ್ಲಿ ಬೀಟೆ ಹಾಗೂ ಹೊನ್ನೆ (ಸಾಗುವಾನಿ) ಜಾತಿಯ ಮರಗಳನ್ನು ಅಕ್ರಮವಾಗಿ ಕಡಿದು, ಮರದ ದಿಮ್ಮಿಗಳನ್ನು 1ನೇ ಆರೋಪಿಯ ಮನೆಯಲ್ಲಿ ಸಂಗ್ರಹಿಸಿದ್ದರೆಂದು ಆರೋಪಿಸಲಾಗಿತ್ತು. ಈ ಕುರಿತು ವಿಚಾರಣೆ ನಡೆಸಿದ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದ ನ್ಯಾಯಾಧೀಶರಾದ ಕು. ವಿದ್ಯಾ ಎ.ಎಸ್. ಅವರು ಆರೋಪಿತರನ್ನು ದೋಷಿಗಳೆಂದು ತೀರ್ಮಾನಿಸಿ, ಪ್ರತಿ ಆರೋಪಿಗೆ 1 ವರ್ಷ 6 ತಿಂಗಳ ಸಾಧಾರಣ ಜೈಲು ಶಿಕ್ಷೆ ಹಾಗೂ ರೂ.12,000/- ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ವಿಫಲವಾದಲ್ಲಿ 9 ತಿಂಗಳ ಹೆಚ್ಚುವರಿ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಲಾಗಿದೆ. ಇದಲ್ಲದೆ, ಮೀಸಲು ಅರಣ್ಯದಲ್ಲಿ ಮರಗಳನ್ನು ಕಡಿದಿರುವುದಕ್ಕೆ ಅರಣ್ಯ ಇಲಾಖೆಗೆ ರೂ.50,000/- ಪರಿಹಾರವನ್ನು ಪಾವತಿಸಲು ನ್ಯಾಯಾಲಯ ತೀರ್ಪು ನೀಡಿದೆ.
4ನೇ ಆರೋಪಿ ಆನಂದ ಅವರು ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಮೃತಪಟ್ಟಿರುತ್ತಾರೆ. ಈ ಪ್ರಕರಣದ ಸಾಕ್ಷಿ ವಿಚಾರಣೆಯ ಸಂದರ್ಭದಲ್ಲಿ ಬೈಂದೂರು ಉಪ ವಲಯ ಅರಣ್ಯಾಧಿಕಾರಿ ಚಿದಾನಂದ ಪರಿಟ್ ಸರ್ಕಾರಿ ಅಭಿಯೋಜಕರಿಗೆ ಸಹಕರಿಸಿದ್ದರು. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕರಾದ ರಾಜಶೇಖರ್ ಪಿ ಶಾಮರಾವ್ ಸಾಕ್ಷಿ ವಿಚಾರಣೆ ನಡೆಸಿ ವಿವಾದ ಮಂಡಿಸಿರುತ್ತಾರೆ.