ಕಾರ್ಕಳ, ಫೆ. 23: ಮಧ್ಯರಾತ್ರಿ ಸಾಮಾಜಿಕ ಜಾಲತಾಣ ಫೇಸ್ಬುಕ್ನಲ್ಲಿ ಅವಹೇಳನಕಾರಿ ಹಾಗೂ ದ್ವೇಷ ಪ್ರಚೋದಕ ಬರಹ ಪ್ರಕಟಿಸಿದ ಆರೋಪದಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಪೊಲೀಸರ ಪ್ರಕಾರ, ಫೆಬ್ರವರಿ 23ರ ಬೆಳಗಿನ ಜಾವ ಸುಮಾರು 12:30ರ ವೇಳೆಗೆ ಆರ್. ಉಲ್ಲಾಸ್ ಶೆಣೈ (45) ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ಕೆಲವು ಸಂಘಟನೆಗಳು ಹಾಗೂ ಅವರ ಬೆಂಬಲಿಗರನ್ನು ಗುರಿಯಾಗಿಸಿಕೊಂಡು ಅವಮಾನಕಾರಿ ಪದಗಳನ್ನು ಬಳಸಿರುವ ಪೋಸ್ಟ್ ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಈ ಬರಹದಿಂದ ಬೇರೆ ಬೇರೆ ಗುಂಪುಗಳ ನಡುವೆ ವೈರತ್ವ ಮತ್ತು ದ್ವೇಷ ಉಂಟಾಗುವ ಸಾಧ್ಯತೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 31/2026 ದಾಖಲಿಸಿ, Bharatiya Nyaya Sanhita (BNS) 2023ರ ಕಲಂ 196 ಮತ್ತು 353(2) ಅನ್ವಯ ಪ್ರಕರಣ ದಾಖಲಿಸಲಾಗಿದೆ. ಪಿಎಸ್ಐ ಮುರುಳೀಧರ ನಾಯ್ಕ (ಕಾ&ಸು) ಅವರ ದೂರಿನ ಮೇರೆಗೆ 23.02.2026 ರಂದು 01:30 ಗಂಟೆಗೆ ಪ್ರಕರಣ ದಾಖಲಾಗಿದ್ದು, ಆರೋಪಿತನಾದ ಉಲ್ಲಾಸ್ ಶೆಣೈ, ಕಸಬಾ ಗ್ರಾಮದಲ್ಲಿ ವೆಂಕಟರಮಣ ದೇವಸ್ಥಾನದ ಸಮೀಪ ವಾಸವಾಗಿರುವುದಾಗಿ ತಿಳಿದುಬಂದಿದೆ. ಸಾಮಾಜಿಕ ಜಾಲತಾಣಗಳ ದುರುಪಯೋಗದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಕುರಿತು ಮುಂದಿನ ತನಿಖೆ ಮುಂದುವರಿದಿದೆ.