ಉಡುಪಿ : ಪಕ್ಷದ ರಾಜ್ಯ ಸಮಿತಿ ನಿರ್ಧಾರದಂತೆ, ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಸೋಲಿಸುವುದಕ್ಕಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಲು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ನಿರ್ಧರಿಸಿದೆ.
ಭಾರತೀಯ ಜನತಾ ಪಕ್ಷವು ದಿನದಿಂದ ದಿನಕ್ಕೆ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ನಾಶ ಮಾಡುತ್ತಾ ಸರ್ವಾಧಿಕಾರದತ್ತ ಸಾಗುತ್ತಿದೆ. 146 ಸಂಸತ್ ಸದಸ್ಯರನ್ನು ಅಮಾನತು ಮಾಡಿ, 19 ಕಾಯಿದೆಗಳನ್ನು ಪಾಸು ಮಾಡಿರುತ್ತಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಸುಳ್ಳು ಹೇಳಿ ಯುವಜನರಿಗೆ ವಂಚನೆ ಮಾಡಿದೆ. ಅಗತ್ಯ ವಸ್ತುಗಳ ಬೆಲೆ ವಿಪರೀತ ಹೆಚ್ಚಳವಾಗಿದೆ. ಚುನಾವಣೆ ಪ್ರಣಾಳಿಕೆಯಲ್ಲಿ, ರೈತರಿಗೆ ಬೆಂಬಲ ಬೆಲೆ ನೀಡುವುದಾಗಿ ಹೇಳಿದ್ದರೂ, ಜಾರಿ ಮಾಡಿಲ್ಲ. ಇದಕ್ಕಾಗಿ ಹೋರಾಟ ನಡೆಸಿದ ರೈತರ ಮೇಲೆ ದಬ್ಬಾಳಿಕೆ ನಡೆಸಿದೆ.
ಬಿಜೆಪಿ ನೇತೃತ್ವದ ಎನ್ ಡಿಎ ಇನ್ನೊಮ್ಮೆ ಅಧಿಕಾರದ ಗದ್ದುಗೆ ಹಿಡಿದರೆ ನೂತನ ಕಾರ್ಮಿಕ ಸಂಹಿತೆಗಳು ಜಾರಿಯಾಗಿ ಕಾರ್ಮಿಕರು ಎಲ್ಲಾ ಸೌಲಭ್ಯಗಳನ್ನೂ ಕಳೆದು ಕೊಳ್ಳುತ್ತಾರೆ.ದೇಶದ ಜನರು ತಮ್ಮ ಬೆವರಿನ ತೆರಿಗೆಯಿಂದ ಕಟ್ಟಿ ಬೆಳೆಸಿದ ವಿದ್ಯುತ್ ,ರೈಲು, ಬ್ಯಾಂಕ್,ವಿಮೆ ಮೊದಲಾದ ಸಾರ್ವಜನಿಕ ಸಂಸ್ಥೆಗಳು ಬಂಡವಾಳಗಾರರ ಪಾಲಾಗಲಿದೆ.
ಒಟ್ಟಾರೆಯಾಗಿ, ಕಾರ್ಮಿಕರು, ರೈತರು, ಜನಸಾಮಾನ್ಯರ ವಿರೋಧಿ ನೀತಿಯನ್ನು ಬಿಜೆಪಿ ಹರಿಬಿಟ್ಟಿದೆ.
ಕಳೆದ ಹತ್ತು ವರ್ಷಗಳಲ್ಲಿ ಇಲ್ಲಿಂದ ಆಯ್ಕೆಯಾದ ಬಿಜೆಪಿ ಸಂಸತ್ ಸದಸ್ಯರು ಇಲ್ಲಿನ ಅಭಿವೃದ್ಧಿ ಬಗ್ಗೆ ಗಮನ ನೀಡಿಲ್ಲ. ಇಎಸ್ಐ ಆಸ್ಪತ್ರೆಯೂ ಸೇರಿದಂತೆ ಕೇಂದ್ರ ಸರಕಾರದ ಹೂಡಿಕೆಗಳನ್ನು ತರಲು ಪ್ರಯತ್ನಿಸಿಲ್ಲ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಜಯಪ್ರಕಾಶ ಹೆಗ್ಡೆಯವರು ನಾಮಪತ್ರ ಸಲ್ಲಿಸುವ ಸಮಾರಂಭದಲ್ಲಿ ಪಕ್ಷದ ಪರವಾಗಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮತ್ತು ಜಿಲ್ಲಾ ಸಮಿತಿ ಸದಸ್ಯರಾದ ಶಶಿಧರ್ ಅವರು ಶುಭಕೋರಿ ಬೆಂಬಲ ವ್ಯಕ್ತ ಪಡಿಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪಕ್ಷವು ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರ ಗೆಲುವಿಗಾಗಿ ಶ್ರಮಿಸುವುದು.
ಈ ನಿಟ್ಟಿನಲ್ಲಿ ಪಕ್ಷವು ಸ್ವತಂತ್ರವಾಗಿ ರಾಜಕೀಯ ಸಮಾವೇಶ ಹಾಗೂ ಮನೆ ಮನೆ ಪ್ರಚಾರ ನಡೆಸಲು ನಿರ್ಧರಿಸಿದೆ. ಸ್ವತಂತ್ರ ಪ್ರಚಾರ ನಡೆಸುವಾಗ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷಗಳನ್ನು ಸೋಲಿಸುವ ಮಹತ್ವವನ್ನು ವಿವರಿಸಲಾಗುವುದು. ಎಂದು ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






































