ರಚನೆಯಾಯಿತು ಹೀಗೊಂದು ವಿಶಿಷ್ಠವಾದ ಮಣ್ಣಿನ ಪರಿಮಳದ ರೈತಪೀಠ!

Picture of RB NEWS

RB NEWS

Bureau Report

ಡಾ.ಜಿ. ರಾಮಕೃಷ್ಣ ಆಚಾರ್ ಅವರೆದುರು ಕುಳಿತುಕೊಂಡು , ನಾವೇನೊ ಕೆಲವೆಲ್ಲ ಓದಿದ್ದೇವೆ,ಟಿವಿ ನೋಡಿದ್ದೇವೆ ,ಗೂಗಲ್ ಸರ್ಚ್ ಮಾಡುತ್ತಿದ್ದೇವೆ ಅಂತ ವಿಶ್ವದ ಬದಲಾವಣೆಯ ಕತೆಗಳನ್ನು ಸಮರ್ಥಿಸಿದೆವೆಂದರೆ , ನಾವಿನ್ನೂ ಅಜ್ಞಾನಿಗಳಾಗಿಯೇ ಇದ್ದೇವೆ ಅಂತ ನಾವೇ ಅರಿತುಕೊಳ್ಳುವ ರೀತಿಯಲ್ಲಿ ಸ್ವದೇಶ ಮತ್ತು ಸ್ವಾವಲಂಬತನದ ಲಾಭಗಳ ಬಗ್ಗೆ ಅರಳು ಹುರಿದಂತೆ ವಿವರಿಸುತ್ತಾರೆ. ಯೂನಿವರ್ಸಿಟಿಯ ತರಗತಿಯೊಂದರಲ್ಲಿ ಕುಳಿತು ಉಪಾನ್ಯಾಸ ಕೇಳುತ್ತಿದ್ದೇವೆ ಅನಿಸುವಂತಾಗುತ್ತದೆ.
ಪ್ರಾಥಮಿಕ ಶಾಲಾ ಶಿಕ್ಷಣವನ್ನಷ್ಟೇ ಅರಗಿಸಿಕೊಂಡು ಮುಂದೆ ತಾನೊಬ್ಬ ನಿಜವಾದ #ವಿಶ್ವಕರ್ಮ ಆಗಬೇಕು,ಅದಕ್ಕೆ ನಾನು ಅರ್ಹ ಅನ್ನುವ ಗಟ್ಟಿ ನಿರ್ಧಾರದಲ್ಲಿ ಸಾಧಿಸಲು ತೊಡಗಿಸಿಕೊಂಡು ಇಂದು ವಿಶ್ವದ ಕೆಲವು ರಾಷ್ಟ್ರಗಳೊಡನೆ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟು ಮಾಡಿ ದೇಶಕ್ಕೆ ಕೋಟಿ ಲೆಕ್ಕಗಳಲ್ಲಿ ಆರ್ಥಿಕ ವಿನಿಮಯ ಕೊಡುವ ನಂಬರ್ ವನ್ ಉದ್ಯಮಿಯಾಗಿದ್ದಾರೆ. ಸಾವಿರಗಳ ಸಂಖ್ಯೆಯಲ್ಲಿ ಉದ್ಯೋಗ ನೀಡಿದ ಉದ್ಯೋಗಪತಿಯಾಗಿದ್ದಾರೆ. ಲಾಭಾಂಶದಲ್ಲಿನ ಶೇಕಡಾವಾರು ನಿಧಿಯನ್ನು ಗ್ರಾಮೀಣಾಭಿವೃದ್ಧಿ ನಿಧಿಯನ್ನಾಗಿ ಖರ್ಚು ಮಾಡುತ್ತಿದ್ದಾರೆ. ಸೇವಾ ಟ್ರಸ್ಟ್ ಅನ್ನು ರಚಿಸಿದ್ದು ತನ್ನ ಹುಟ್ಚೂರಾದ ಗುಂಡ್ಮಿಗೆ ವಿಶೇಷ ಅನುದಾನ ನೀಡುವ ಪ್ರಸ್ತಾವನೆಗಳನ್ನು ಕೈಗೊಳ್ಳುತ್ತಿರುತ್ತಾರೆ.

ಯಾಕೆ ನಮ್ಮ ರೈತರು ವಿದೇಶಿ ತಳಿಯ ದನಗಳನ್ನು ಸಾಕಬೇಕು? ಅಲ್ಲಿ ಮಾಂಸಕ್ಕಾಗಿಯಷ್ಟೇ ದಪ್ಪ ಗಾತ್ರದ ದೇಹ ಬೆಳೆಯುವ ದನಗಳನ್ನು ಸೃಷ್ಠಿಸಿದ್ದಾರೆ. ಭಾರತದಲ್ಲಿ ದೇಶೀಯ ಊರ ತಳಿಯ ದನಗಳನ್ನು ಸಾಕಿದರೂ ಅಷ್ಟೇ ಹಾಲಿನಿಂದ ತಾವೇ ಎಲ್ಲ ಉತ್ಪನ್ನಗಳನ್ನು ಪಡೆದು ಮಾರುಕಟ್ಟೆಗೆ ಹಂಚಿದರೆ ಜೀವನಮಟ್ಟಕ್ಕೆ ಸಾಕಾಗುತ್ತದೆ. ಹೈಬ್ರೀಡ್ ತಳಿಯ ದನಗಳನ್ನು ಸಾಕಿ ಹಾಲನ್ನು ಡೈರಿಗೆ ಕೊಡುವ ಜೀವನ ಕ್ರಮ ಸರಿಯಲ್ಲ. ಅದರಿಂದ ನಮ್ಮ ರೈತ ಕುಟುಂಬ ಸೋಮಾರಿಯಾಗಿದೆ. ತನ್ನ ಸಂಜೀವಿನಿ ಗೋಧಾಮದಲ್ಲಿ ಸಾಕುವ ದನಗಳ ಹಾಲನ್ನು ಡೈರಿಗೆ ಕೊಡದೆ ಮೊಸರು,ಮಜ್ಜಿಗೆ ,ಬೆಣ್ಣೆ ,ತುಪ್ಪ ಎಲ್ಲ ಉತ್ಪನ್ನಗಳನ್ನು ಪಡೆದು ಮಾರುಕಟ್ಟೆಗೆ ಕೊಡುತ್ತಿದ್ದೇನೆ.
ನಮ್ಮ ರೈತರಿಗೆ ಹಾಲಿನ ಬಹುಉತ್ಪನ್ನಗಳನ್ನು ಪಡೆದು ಅದರಿಂದ ಹಣ ಸಂಪಾದಿಸುವುದಕ್ಕೆ ಗೊತ್ತಿಲ್ಲ , ಅದಕ್ಕೂ ಮುಖ್ಯ ಕಾರಣ ಶೃದ್ದೆ ಮತ್ತು ಆಸಕ್ತಿ ಇಲ್ಲದಿರುವುದು ಎಂದು ವಿಷಾದಿಸುತ್ತಾರೆ.ಹಾಲು ಹಿಂಡಿ ಡೈರಿಗೆ ಮಾರಾಟ ಮಾಡಿ ಸಿಕ್ಕಷ್ಟೇ ಹಣವನ್ನು ದೊಡ್ಡ ಲಾಭ ಎಂದು ಸುಮ್ಮನಾಗುತ್ತಿದ್ದಾರೆ. ಅವರ ಮನೆಯಲ್ಲಿಯ ವಿದ್ಯಾವಂತರು ಕೆಲಸವಿಲ್ಲದೆ ಕಲ್ಲಾಗಿದ್ದಾರೆ ಆದರೆ,ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಿ ಸಂಪಾದನೆಯ ಮಾರ್ಗವನ್ನು ಮಾಡಿಕೊಳ್ಳುವುದಿಲ್ಲ. ಒಂದು ಕುಡ್ತೆ ತುಪ್ಪ ಮಾರುತ್ತ ಮುಂದುವರಿದವನು ಮುಂದಿನ ದಿನದಲ್ಲಿ ದೇಶಕ್ಕೆ ತುಪ್ಪ ವಿತರಸುವ ಉದ್ಯಮಿಯಾಗಬಹುದೆನ್ನುವ ಕನಸು ಕಟ್ಟಿಕೊಂಡಿರುವುದಿಲ್ಲವಾದುದೇ ನಮ್ಮ ರೈತರ ಮಕ್ಕಳು ಸಂಪಾದನೆಯಿಲ್ಲದೆ ಬದುಕಿನಲ್ಲಿ ಹತಾಶೆ ಕಾಣುತ್ತಿದ್ದಾರೆ. ಅದು ಡಾ।ಜಿ. ರಾಮಕೃಷ್ಣ ಆಚಾರ್ ಅವರ ನೋವಿನ ನುಡಿಗಳು. ಪುಟ್ಚ ಕೆಲಸವನ್ನು ಮಾಡುತ್ತಲೇ ಅದರೆಟ್ಟಿಗೆ ತನ್ನಲ್ಲಿನ ಮಹತ್ವಾಕಾಂಕ್ಷೆಗೆ ಪುಟವಿಡುತ್ತಲೇ ಮುಂದುವರಿದು ಬಹುದೊಡ್ಡ ಸಾಧಕನಾದವನ ಅನುಭವದ ಬೋಧನೆ.
ಉಡುಪಿ ಜಿಲ್ಲೆಯ ಮುನಿಯಾಲಿನಲ್ಲಿ ಸುಮಾರು ಇಪ್ಪತೆರಡು ಎಕ್ರೆ ವಿಸ್ತೀರ್ಣದಲ್ಲಿ ಸಂಜೀವಿನಿ ಗೋಧಾಮ ನಿರ್ಮಿಸಿರುವ ಡಾ। ಕೆ. ರಾಮಕೃಷ್ಣ ಆಚಾರ್ ,ತಾನು ಹೈನುದ್ಯಮಿಯೆಂದುಕೊಳ್ಳುವುದಲ್ಲದೆ ಹೈನುಗಾರರಿಗೆ ಇದೊಂದು ಪಾಠ ಶಾಲೆ, ರೈತರಿಗೆ ಗೋಕುಲ(ಗುರುಕುಲ)ವನ್ನಾಗಿಸಿದ್ದಾರೆ.ಅಷ್ಟೇ ಅಲ್ಲ ,ವಿವಿಧ ಬಗೆಯ ಹಣ್ಣು,ಫಸಲು ನೀಡುವ ಗಿಡಗಳನ್ನು ಬೆಳೆಸುವ ಕೃಷಿವಿಧಾನವನ್ನೂ ತಿಳಿಯುವುದಕ್ಕೆ ,ಆಸಕ್ತಿ ಹೆಚ್ಚಿಸುವುದಕ್ಕೆ ಈ ಸಂಜೀವಿನಿ ಗೋಧಾಮವು ಆಸಕ್ತ ರೈತನಿಗೆ ಅಕ್ಷರಶಃ ಸಂಜೀವಿನಿಯಾಗಿದೆ. ಹಣ್ಣು ಕೊಡುವ ಹತ್ತಾರು ಬಗೆಯ ಮರ ಗಿಡಗಳ ತೋಟ,ಅಡಿಕೆ ತೋಟ ಮಾಡಿ ಬೆಳೆಸಲಾಗಿದೆ.

ಪ್ರಕೃತಿಯ ರಕ್ಷಣೆಗೆ ಮತ್ತು ಆರಾಧನೆಗಾಗಿಯೇ ನಾಗಬನ ನಿರ್ಮಾಣವಾಗಿರುತ್ತದೆ. ನಾಗನನ್ನು ಭೂಮಿಪುತ್ರ ಎಂತಲೂ ಭೂಮಿಯನ್ನು ಮಹಾಶೇಷನೇ ಹೊತ್ತುಕೊಂಡಿದ್ದಾನೆ ಎನ್ನುವ ನಂಬಿಕೆಯಿಂದಾಗಿಯೂ ನಾಗಾರಾಧನೆಗೆ ಮಹತ್ವ ದೊರಕಿದೆ. ಅದರ ಕಾರಣದಿಂದಾಗಿ ಬನಗಿಡದ ಮರಗಳನ್ನು ಬೆಳೆಸುವುದಕ್ಕೆ ಕೆ. ರಾಮಕೃಷ್ಣಾಚಾರ್ ಶ್ರದ್ಧಾಪೂರ್ವಕವಾಗಿಯೇ ಆಸಕ್ತರಾಗಿದ್ದವರು ಅನ್ನುವುದಕ್ಕೆ ಮೂಡುಬಿದಿರೆ -ಕಾರ್ಕಳ ರಾಷ್ಟ್ರೀಯ ಹೆದ್ದಾರಿಯ ಬನ್ನಡ್ಕದಲ್ಲಿನ ಅವರ ಎಸ್ ಕೆ ಎಫ್ ಪ್ಯಾಕ್ಟರಿಯ ಮಧ್ಯೆ ನಾಗಬನವನ್ನು ವೃದ್ಧಿಸಿದ್ದಾರೆ. ಇನ್ನೊಂದು ಮಗ್ಗುಲಿನಲ್ಲಿರುವ ಘಟಕದ ಸುಮಾರು ಮೂರು ಎಕ್ರೆ ಜಾಗದಲ್ಲಿ ಮರಗಿಡಗಳ ಬನವನ್ನೇ ನಿರ್ಮಿಸಿದ್ದಾರೆ. ಮುನಿಯಾಲಿನಲ್ಲಿರುವ ಸಂಜೀವಿನಿ ಗೋಧಾಮದಲ್ಲಿಯೂ ಆ ಜಾಗದ ಮೂಲ ನಾಗಬನವನ್ನು ಉಳಿಸಿ ಅಭಿವೃದ್ಧಿಪಡಿಸಿದ್ದಾರೆ.

“ #ರೈತಪೀಠ” ಆ ಪರಿಕಲ್ಪನೆ ಯಾರದು ಅಂತ ತಲೆಕೆಡಿಸಿಕೊಳ್ಳಬೇಕೆಂದಿಲ್ಲ. ಡಾ।ಜಿ. ಆರ್. ಆಚಾರ್ ಅವರ ಯೋಚನೆಗಳಲ್ಲಿ ಬರುವ ಅನೇಕ ಸಂಗತಿಗಳು ಅಂತಿಂಥದ್ದಲ್ಲ.
ದೇಶ/ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಸ್ವದ್ಯೋಗಗಳು ಹೇಗೆ ಪರಿಣಾಮಬೀರುತ್ತದೆ ಹಾಗೆನೇ ಅನೇಕ ಉದ್ಯೋಗಗಳ ಯಾಕೆ ಮುಗ್ಗರಿಸುತ್ತವೆ ಅನ್ನುವುದಕ್ಕೆ ಅಷ್ಟೇ ಕರಾರುವಕ್ಕಾಗಿ ಮಾತನ್ನಾಡುವ ,ಸಲಹೆ , ಸ್ಪಷ್ಟೀಕರಣಗಳನ್ನು ನೀಡುವ ಅಪೂರ್ವ ಬುದ್ಧಿವಂತಿಕೆಯ ಡಾ।ಜಿ. ರಾಮಕೃಷ್ಣ ಆಚಾರ್ ದೇಶದ ಯುವ ಉದ್ಯಮಿಗಳು ಮತ್ತು ಉದ್ಯಮಾಸಕ್ತರಿಗೆ ಅತ್ಯದ್ಭುತ ಶಿಕ್ಷಕನಾಗುತ್ತಾರೆ ಎಂದರೆ ಅತಿಶಯೋಕ್ತಿಯಲ್ಲ.
ರೈತನ ಮೂಲ ಬೆಳೆಯಾಗಿರುವ ಭತ್ತವನ್ನು ಅಕ್ಕಿ ಮಾಡುವುದಕ್ಕೆ ಯಂತ್ರೋಪಕರಣಗಳನ್ನು ತಯಾರಿಸುವ ಅವರ ಎಸ್. ಕೆ. ಎಫ್. ರೈತನನ್ನೇ ಅತಿಯಾದ ಅಭಿಮಾನದಿಂದ ಗೌರವಿಸಬೇಕು ಅನ್ನುವ ಯೋಚನೆಯನ್ನು ಕಾರ್ಯಗರೂಪಗೊಳಿಸಿದೆ. ಅದರೊಡನೆ ನಾಗಮಂಡಲವನ್ನೇ ಹೊಸ ಶೀರ್ಷಿಕೆಯಲ್ಲಿ ಆಚರಿಸುವುದಕ್ಕೆ ಮುಂದಾಗಿ ಅಂದೇ ರೈತಪೀಠ ಪ್ರಶಸ್ತಿ ಪ್ರದಾನವನ್ನೂ ಮಾಡಲಾಗುತ್ತಿದೆ. ಕಾರ್ಕಳದ ಶಾಸಕ ,ಮಾಜಿ ಸಚಿವ ವಿ. ಸುನಿಲ್ ಕುಮಾರ್ , ಮೂಡುಬಿದಿರೆ ಆಳ್ವಾಸ್ ವಿದ್ಯಾ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಅವರು ಸಹಿತ ಇನ್ನು ಕೆಲವರು ಗೌರವಾಧ್ಯಕ್ಷರಾಗಿರುವ “ಏಕಪವಿತ್ರ ಶ್ರೀಮನ್ನಾಗಮಂಡಲ ಸಮಿತಿ”ಯನ್ನೂ ರಚಿಸುವದರೊಂದಿಗೆ ರೈತನುಳುಮೆಯ ಈ ಪುಣ್ಯಭೂಮಿಯ ಆರಾಧನೆಯಲ್ಲಿ ಪ್ರಮುಖ ವ್ಯಕ್ತಿಗಳನ್ನು ಮುಂದಿಟ್ಟುಕೊಂಡೇ ರಾಮಕೃಷ್ಣ ಆಚಾರ್ ಅವರು ಮುಂದಡಿಯಿಟ್ಟಿರುವುದರಲ್ಲಿ ಅವರು ತನ್ನ ಸದುದ್ದೇಶವನ್ನು ಯಾವ ರೀತಿಯಲ್ಲಿ ವಿಶ್ವಕ್ಕೇ ಪರಿಚಯಿಸಬೇಕು ,ಮಾದರಿಯನ್ನಾಗಿ ಮಾಡಬೇಕು ಅನ್ನುವುದು ಅರ್ಥವಾಗುತ್ತದೆ.
ತನ್ನ ಈ ಒಂದು ಪರಿಕಲ್ಪನೆಯನ್ನು ಯಾವ ರೀತಿಯಲ್ಲಿ ಅನಾವರಣಗೊಳಿಸಬೇಕು ಅಂತ ಮಾಡಿಕೊಂಡ ಅವರ ಹೊಸಬಗೆಯ ಸಿದ್ಧತೆಯೂ ಕೂಡಾ ಶ್ಲಾಘನೀಯವಾಗಿದೆ.

ಗೋಧಾಮದಲ್ಲಿ ನಡೆಯುವ ಶ್ರೀಮನ್ನಾಗಮಂಡಲದ ಪ್ರಮುಖ ಹೆಜ್ಜೆಗಳು:
•ಶುದ್ಧ ಭೂಮಿ ಸೃಷ್ಠಿ•ರಾಸಾಯನಿಕರಹಿತ ಬಣ್ಣಗಳ ತಯಾರಿ•ದೊಂದಿ ಬೆಳಕಿನ ಅಲಂಕಾರ•ಶಬ್ಧಮಾಲಿನ್ಯ ರಹಿತ ಸಂಗೀತ •ಅನ್ನದಾನ •ಬೀಜದುಂಡೆ ಪ್ರಸಾದ
ಅಲ್ಲಿ ಒಂದು ಅನುಕರಣೀಯ ಆಚರಣೆಯೆಂದರೆ,ನಾಗನಿಗೆ ಪ್ರಿಯವಾಗಿರುವ ಅಡಿಕೆ ಹೂ(ಹಿಂಗಾರ)ವಿನ ಬಳಕೆಯನ್ನು ಮಿತಿಮೀರಿ ಬಳಸುವುದಿಲ್ಲ. ಬರೇ ಒಂದು ಸಾವಿರ ಹಿಂಗಾರ ಬಳಸಿ ಅದಕ್ಕೆ ಪ್ರತಿಫಲವಾಗಿ ಒಂದು ಸಾವಿರದಷ್ಟು ಅಡಿಕೆ ಸಸಿಗಳನ್ನು ಗೋಧಾಮದಲ್ಲಿ ರೈತರಿಗೆ ವಿತರಿಸಲಾಗುವುದು.
ರೈತನ ಗೌರವ ,ಪ್ರಕೃತಿಯ ಸಂರಕ್ಷಣೆ ಮತ್ತು ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಒಂದೇ ವೇದಿಕಯಲ್ಲಿ ಜೋಡಿಸುವುದೇ ರೈತಪೀಠ ಮತ್ತು ನಾಗಮಂಡಲ ಸೇವೆಯ ಮೂಲ ಉದ್ದೇಶವಾಗಿದೆ ಎನ್ನುತ್ತಾರೆ ಯಜಮಾನ ಡಾ। ಜಿ. ರಾಮಕೃಷ್ಣ ಆಚಾರ್.

ರೈತಪೀಠ

ಬಿ. ಕೆ. ದೇವರಾಯ ,ಮಿತ್ತಬಾಗಿಲು ಅವರಿಗೆ ಈ ಬಾರಿಯ ಮೊದಲ ರೈತಪೀಠ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಅವರು ಸುಮಾರು 240ಕ್ಕೂ ಅಧಿಕ ಭಾರತೀಯ ತಳಿಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ ಅಪರೂಪದ ಕೃಷಿಋಷಿಯಾಗಿದ್ದಾರೆ.
ದಿನಾಂಕ 19-02-2026 ಗುರುವಾರದಿಂದ 21-02-2026 ಶನಿವಾರ ತನಕ ಮೂರು ದಿನಗಳ ಕಾರ್ಯಕ್ರಮ ನಡೆಯಲಿರುವುದು. ರೈತ ಕುಟುಂಬದವರೇ ಆಗಿರುವ ನಾವೆಲ್ಲ ಆ ಮೂರು ದಿನಗಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಾವು ಅನುಸರಿಸಬೇಕಾದ್ದೆಲ್ಲವನ್ನೂ ಸ್ವೀಕರಿಸುವವರಾಗಬೇಕು.

“

-ವಿ. ಕೆ. ವಾಲ್ಪಾಡಿ

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top