



ಮದುವೆಯ ಭರವಸೆಯಲ್ಲಿ ಮಹಿಳೆಯರಿಗೆ ವಂಚನೆ : ಸರಣಿ ವೈವಾಹಿಕ ವಂಚಕ ಬಂಧನ

ಸುಶಾಂತ್ ಪೂಜಾರಿ
ಮಂಗಳೂರು, ಫೆ. 11: ಆನ್ಲೈನ್ ಮ್ಯಾಟ್ರಿಮೋನಿಯಲ್ ವೇದಿಕೆಗಳ ಮೂಲಕ ಹಲವಾರು ಮಹಿಳೆಯರನ್ನು ಮದುವೆಯಾಗುವ ನೆಪದಲ್ಲಿ ಲಕ್ಷಾಂತರ ರೂಪಾಯಿ ವಂಚಿಸಿದ್ದ ಆರೋಪದ ಮೇಲೆ ಸರಣಿ ವೈವಾಹಿಕ ವಂಚಕನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ವಂಚನೆಗೆ ಸಹಕರಿಸಿದ್ದ ಸಹಚರನನ್ನೂ ವಶಕ್ಕೆ ಪಡೆಯಲಾಗಿದೆ.
ಬಂಧಿತನನ್ನು ಸುಶಾಂತ್ ಪೂಜಾರಿ ಅಲಿಯಾಸ್ ಸುಶಾಂತ್ ಅಂಕುಶ ಪೂಜಾರಿ ಅಲಿಯಾಸ್ ಸುಶಾಂತ್ ಜಿ. ಕರ್ಕೇರ (32) ಎಂದು ಗುರುತಿಸಲಾಗಿದೆ. ವಂಚನೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಮೂಲ್ಕಿ ನಿವಾಸಿ ಭಾಸ್ಕರ್ನನ್ನೂ ಪೊಲೀಸರು ಬಂಧಿಸಿದ್ದಾರೆ.
ಆನ್ಲೈನ್ ಮ್ಯಾಟ್ರಿಮೋನಿಯಲ್ ಪ್ಲಾಟ್ಫಾರ್ಮ್ ಮೂಲಕ ಪರಿಚಯವಾದ ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ಬೆಳಕಿಗೆ ಬಂದಿದೆ. ದೂರಿನ ಪ್ರಕಾರ, ಸುಶಾಂತ್ ಫೆಬ್ರವರಿ 2, 2025ರಂದು ನವಿ ಮುಂಬೈನಲ್ಲಿ ತನ್ನನ್ನು ಮದುವೆಯಾಗಿದ್ದಾನೆ. ಮದುವೆಯ ಬಳಿಕ ವಿವಿಧ ಕಾರಣಗಳನ್ನು ಮುಂದಿಟ್ಟು ಹಂತ ಹಂತವಾಗಿ ಒಟ್ಟು ₹6.60 ಲಕ್ಷ ಹಣವನ್ನು ಪಡೆದುಕೊಂಡಿದ್ದಾನೆ. ನಂತರ ನವೆಂಬರ್ 15, 2025ರಂದು ನಾಪತ್ತೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಪೊಲೀಸರ ತನಿಖೆಯಲ್ಲಿ ಆರೋಪಿ ಈ ಹಿಂದೆ ಕೂಡ ಮದುವೆಯಾಗಿದ್ದು, ಇದೇ ರೀತಿಯಲ್ಲಿ ಇತರ ಮಹಿಳೆಯರನ್ನೂ ವಂಚಿಸಿರುವುದು ಬಹಿರಂಗವಾಗಿದೆ. ಫೆಬ್ರವರಿ 5, 2026ರಂದು ಬಂಧನಕ್ಕೊಳಗಾದ ಸುಶಾಂತ್ ವಿಚಾರಣೆಯ ವೇಳೆ ಹಲವು ವಂಚನೆ ಪ್ರಕರಣಗಳಲ್ಲಿ ತನ್ನ ಭಾಗವಹಿಸುವಿಕೆಯನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. 2021ರಲ್ಲಿ ಉಡುಪಿಯ ಮಹಿಳೆಯೊಬ್ಬರನ್ನು ಮದುವೆಯಾಗಿದ್ದ ಮಾಹಿತಿ ಸಹ ಲಭ್ಯವಾಗಿದೆ.
ಉಡುಪಿ, ಮುಂಬೈ ಹಾಗೂ ಬೆಂಗಳೂರಿನ ತಲಾ ಇಬ್ಬರು ಮಹಿಳೆಯರು ಮತ್ತು ಕಾರ್ಕಳದ ಒಬ್ಬ ಮಹಿಳೆಗೆ ಮದುವೆಯ ಭರವಸೆ ನೀಡಿ ಹಣ ಸುಲಿಗೆ ಮಾಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.































