ಎಲ್ ಡಿ ಎಫ್ , ಯುಡಿಎಫ್ ಹೋರಾಟಕ್ಕೆ ಸಂದ ಜಯ: ಕುಂಬಳೆ ಅರಿಕ್ಕಾಡಿ ಟೋಲ್ ಸಂಗ್ರಹಕ್ಕೆ ತಡೆ : ಕೇಂದ್ರ ಸಾರಿಗೆ ಸಚಿವಾಲಯದಿಂದ ಆದೇಶ

Picture of RB NEWS

RB NEWS

Bureau Report

ಎಲ್ ಡಿ ಎಫ್ , ಯುಡಿಎಫ್ ಹೋರಾಟಕ್ಕೆ ಸಂದ


ಕಾಸರಗೋಡು : ಕುಂಬಳೆ ಅರಿಕ್ಕಾಡಿಯಲ್ಲಿ ಆರಂಭಿಸಿದ್ದ ಟೋಲ್ ಸಂಗ್ರಹಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ತಡೆ ನೀಡಿದ್ದು, ಮುಂದಿನ 24 ಗಂಟೆಗಳೊಳಗೆ ಟೋಲ್ ಗೇಟ್ ಮುಚ್ಚಲಾಗುವುದು ಎಂದು ಭರವಸೆ ನೀಡಲಾಗಿದೆ.
ಟೋಲ್ ಸಂಗ್ರಹ ವಿರೋಧಿಸಿ ಕಳೆದ ಒಂದು ತಿಂಗಳಿನಿಂದ ಸ್ಥಳೀಯರ ನೇತೃತ್ವದಲ್ಲಿ ತೀವ್ರ ಹೋರಾಟ ನಡೆಯುತ್ತಿತ್ತು. ಹೋರಾಟ ಸಮಿತಿಯನ್ನು ರಚಿಸಿ ಪ್ರತಿಭಟನೆ ನಡೆಸಲಾಗಿದ್ದು, ಜೊತೆಗೆ ಕಾನೂನು ಹೋರಾಟವೂ ಮುಂದುವರಿದಿತ್ತು. ಟೋಲ್ ಶುಲ್ಕ ಸಂಗ್ರಹ ಸ್ಥಗಿತಗೊಳಿಸುವಂತೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ.
ಒಂದು ಟೋಲ್ ಗೇಟ್‌ನಿಂದ ಮತ್ತೊಂದು ಟೋಲ್ ಗೇಟ್‌ಗೆ ಕನಿಷ್ಠ 60 ಕಿ.ಮೀ ಅಂತರ ಇರಬೇಕೆಂಬ ಕೇಂದ್ರ ಸಾರಿಗೆ ಸಚಿವಾಲಯದ ನಿಯಮವನ್ನು ಉಲ್ಲಂಘಿಸಿ, ಕೇವಲ 23 ಕಿ.ಮೀ ದೂರದಲ್ಲಿರುವ ಕುಂಬಳೆ ಅರಿಕ್ಕಾಡಿಯಲ್ಲಿ ಟೋಲ್ ಸಂಗ್ರಹ ಆರಂಭಿಸಲಾಗಿತ್ತು. ಇದನ್ನು ವಿರೋಧಿಸಿ ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಅವರ ನೇತೃತ್ವದಲ್ಲಿ ಹೋರಾಟ ಆರಂಭಗೊಂಡಿತ್ತು. ಬಿಜೆಪಿ ಹೊರತುಪಡಿಸಿ ಇತರೆ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಟೋಲ್ ವಿರೋಧಿ ಹೋರಾಟ ಸಮಿತಿ ರಚಿಸಿ ನಿರಂತರ ಪ್ರತಿಭಟನೆ ನಡೆಸಲಾಗುತ್ತಿತ್ತು.
ಹೋರಾಟವು ಕೆಲ ಹಂತಗಳಲ್ಲಿ ಹಿಂಸಾತ್ಮಕ ಸ್ವರೂಪವನ್ನೂ ಪಡೆದಿದ್ದು, ಟೋಲ್ ಗೇಟ್ ಮೇಲೆ ದಾಳಿ ನಡೆದು ಕ್ಯಾಮೆರಾ, ಬ್ಯಾರಿಕೇಡ್, ಗಾಜು ಸೇರಿದಂತೆ ಸಾರ್ವಜನಿಕ ಆಸ್ತಿಗಳಿಗೆ ಹಾನಿಯುಂಟಾಗಿತ್ತು. ಶಾಸಕರು ಅಹೋರಾತ್ರಿ ಧರಣಿ ನಡೆಸಿದ್ದು, ಪರಿಸ್ಥಿತಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿತ್ತು. ಅಂತಿಮವಾಗಿ ಪೊಲೀಸರು ಧರಣಿ ಸ್ಥಳವನ್ನು ತೆರವುಗೊಳಿಸಿ, ಶಾಸಕ ಎ.ಕೆ.ಎಂ. ಅಶ್ರಫ್ ಸೇರಿದಂತೆ ಹೋರಾಟ ಸಮಿತಿ ಮುಖಂಡರನ್ನು ಬಂಧಿಸಿದ್ದರು. ಸಿಪಿಎಂ ಮುಖಂಡ ಸಿ.ಎ. ಝುಬೈರ್, ಕಾಂಗ್ರೆಸ್ ಮುಖಂಡ ಲಕ್ಷ್ಮಣ ಪ್ರಭು, ಅಶ್ರಫ್ ಕಾರ್ಲೆ ಸೇರಿದಂತೆ ಹಲವರು ಹೋರಾಟದ ಮುಂಚೂಣಿಯಲ್ಲಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top