


ಶ್ರೀ ಮುಜಿಲ್ನಾಯ ದೈವ ಮತ್ತು ಬ್ರಹ್ಮ ಸಾನಿಧ್ಯಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ತುಳುನಾಡಿನ ದೈವ ಪರಂಪರೆಯ ಜೀವಂತ ಸಾಕ್ಷಿ: ಶ್ರೀ ಈದು ಮುಜಿಲ್ನಾಯ ಸಹಿತ ಸಪ್ತದೈವಗಳ ನಾಡಿ ಕ್ಷೇತ್ರ
ಮೂಡಣದ ಕಿರೀಟಪ್ರಾಯವಾಗಿರುವ ಘಟ್ಟದ ಸಾಲುಗಳು ಮತ್ತು ಪಡುವಣದ ಅಂಚಿನಲ್ಲಿ ಅಗಾಧ ಜಲರಾಶಿಯ ಕಡಲಿನ ನಡುವೆ ನಾಗಮಣಿಯಂತೆ ಶೋಭಿಸುತ್ತಿರುವ ಪಂಚವರ್ಣದ ನೆಲೆ ಎಂದೇ ಖ್ಯಾತವಾದುದು ನಮ್ಮ ತುಳುನಾಡು. ನೂರಾರು ವರ್ಷಗಳಿಂದ ಇಲ್ಲಿನ ಸಾಂಸ್ಕೃತಿಕ ಬದುಕನ್ನು ದಿಕ್ಕುನಿರ್ದೇಶಿಸುತ್ತಾ ಬಂದಿರುವ ಭೂತಾರಾಧನಾ ಸಂಪ್ರದಾಯವು ಧಾರ್ಮಿಕತೆ, ಸಾಮಾಜಿಕ ಬದ್ಧತೆ ಮತ್ತು ಜನಪದ ಸಂಸ್ಕೃತಿಯ ಅಪೂರ್ವ ಮಿಳಿತವಾಗಿದೆ.
ಭೂತಾರಾಧನೆ ಕೇವಲ ಪೂಜಾ ಕ್ರಮವಲ್ಲ; ಅದು ಒಂದು ಧಾರ್ಮಿಕ ರಂಗಭೂಮಿ. ಆರಾಧನೆ, ನೃತ್ಯ, ಸಂಗೀತ, ಶಿಲ್ಪ, ಸಾಹಿತ್ಯ, ನ್ಯಾಯವಿತರಣೆಯಂತಹ ಅನೇಕ ಆಯಾಮಗಳನ್ನು ತನ್ನೊಳಗೆ ಹೂಡಿಕೊಂಡಿರುವ ಈ ಸಂಪ್ರದಾಯವು ಕಾಲಕ್ರಮೇಣ ಅತ್ಯಂತ ವ್ಯವಸ್ಥಿತ ಹಾಗೂ ಸಂಕೀರ್ಣ ರೂಪವನ್ನು ಪಡೆದುಕೊಂಡಿದೆ. ಅನಾದಿಕಾಲದಿಂದಲೂ ಇದು ತುಳುವರ ಬದುಕಿಗೆ ಭದ್ರತೆ, ರಕ್ಷಣೆ ಮತ್ತು ಆತ್ಮವಿಶ್ವಾಸವನ್ನು ನೀಡುತ್ತಾ ಸಮಷ್ಟಿಯ ಸೌಹಾರ್ದಯುತ ಬದುಕಿಗೆ ದಾರಿದೀಪವಾಗಿದೆ.
ವಿಜಯನಗರ ಕಾಲದಿಂದಲೇ ಪ್ರಸಿದ್ಧಿಯಲ್ಲಿರುವ ಈದು ಕ್ಷೇತ್ರ
ಇಂತಹ ಅಪೂರ್ವ ಇತಿಹಾಸ ಹೊಂದಿರುವ ದೈವಾರಾಧನಾ ಕ್ಷೇತ್ರವೆಂದರೆ ಕಾರ್ಕಳ ತಾಲೂಕಿನ ಈದು ಗ್ರಾಮದಲ್ಲಿರುವ ಶ್ರೀ ಮುಜಿಲ್ನಾಯ ಸಹಿತ ಸಪ್ತದೈವಗಳ ನಾಡಿ ಕ್ಷೇತ್ರ. ವಿಜಯನಗರ ಅರಸರ ಕಾಲದಿಂದಲೇ ಜನಮಾನಸದಲ್ಲಿ ಉಲ್ಲೇಖವಾಗಿರುವ ಈ ಕ್ಷೇತ್ರವು ಪ್ರಶಾಂತ ಪ್ರಕೃತಿ ಸೌಂದರ್ಯದ ನಡುವೆ ಶತಮಾನಗಳ ಪರಂಪರೆಯನ್ನು ಇಂದಿಗೂ ಜೀವಂತವಾಗಿ ಉಳಿಸಿಕೊಂಡಿದೆ. ವಿಶಿಷ್ಟ ಆಚಾರ–ಅನುಷ್ಠಾನಗಳನ್ನು ಸಂಪ್ರದಾಯಬದ್ಧವಾಗಿ ಪಾಲಿಸಿಕೊಂಡು ಬಂದಿರುವುದು ತುಳುನಾಡಿಗರ ಅಭಿಮಾನದ ವಿಷಯ.
ಈದು ಕ್ಷೇತ್ರವನ್ನು ಇಡೀ ದೈವಸಾಮ್ರಾಜ್ಯದ ಕಿರೀಟವೆಂದೇ ಕರೆಯಬಹುದು. ಇಲ್ಲಿ ಜನಪದ ಆರಾಧನೆಯ ಗೌರವ, ಸರಳತೆ, ಸಮಾನತೆ, ಸೌಹಾರ್ದತೆ ಮತ್ತು ಸಾಮಾಜಿಕ ಜವಾಬ್ದಾರಿತನವನ್ನು ಒಂದೇ ಸಮಯದಲ್ಲಿ ಕಾಣಬಹುದು.
ಉಪದೇಶಿ ಕೋಟ್ಟಣ್ಣ ಬಾಳೊಳ್ಳಿ ಮತ್ತು ದೈವಗಳ ಉದ್ಭವ
ಶತಮಾನಗಳ ಹಿಂದೆ ತುಳುನಾಡನ್ನು ಆಳಿದ ಬಂಗಾಡಿ ಸೀಮೆಯ ಆಡಳಿತ ಪ್ರದೇಶವಾದ ಪಡು ಬಂಗಾಡಿ (ಇಂದಿನ ಪಡಂಗಡಿ) ಬೀಡಿನ ಯಜಮಾನ ಉಪದೇಶಿ ಕೋಟ್ಟಣ್ಣ ಬಾಳೊಳ್ಳಿ ಭೂತಾರಾಧನೆಯ ಇತಿಹಾಸದಲ್ಲಿ ಅಚ್ಚಳಿಯದ ಗುರುತು ಮೂಡಿಸಿದವರು. ಅವರ ಅಪಾರ ಸಾಧನೆ, ಪಾಂಡಿತ್ಯ ಮತ್ತು ದೈವೀ ತಂತ್ರಸಾಧನೆಯ ಫಲವಾಗಿ ಉದ್ಭವಿಸಿದ ಶಕ್ತಿಗಳೇ ಶ್ರೀ ಮುಜಿಲ್ನಾಯ ಮತ್ತು ಪಿಲಿಚಾಮುಂಡಿ ದೈವಗಳು. ಪಾಡ್ಡನಗಳಲ್ಲಿ ಇಂದಿಗೂ ಅವರ ಅಸಾಧಾರಣ ಸಾಧನೆಯ ವಿವರಗಳು ಜೀವಂತವಾಗಿ ದೊರೆಯುತ್ತವೆ.
ಈ ದೈವಗಳು ಮುಂದಾಗಿ ತುಳುನಾಡಿನ ವಿವಿಧ ಭಾಗಗಳಲ್ಲಿ ತಮ್ಮ ಕ್ಷೇತ್ರವನ್ನು ವಿಸ್ತರಿಸುತ್ತಾ, ನೆರೆಯ ಅಳದಂಗಡಿ ಅಜಿಲ ಸೀಮೆಯನ್ನು ಪ್ರವೇಶಿಸಿ, ಅಲ್ಲಿನ ಪಟ್ಟದ ಆನೆಗಳಿಗೆ ಹುಚ್ಚು ಹಿಡಿಸಿ, ಕೊನೆಗೆ ಅಜಿಲ ಅರಸರ ಪಟ್ಟದ ದೈವಗಳಾಗಿ ಆರಾಧನೆಗೆ ಒಳಪಟ್ಟ ಇತಿಹಾಸವೂ ಇದೆ.
ಸಪ್ತದೈವಗಳಾಗಿ ಈದು ನಾಡಿಗೆ ಪ್ರವೇಶ
ನಂತರ ಮುಜಿಲ್ನಾಯ ದೈವದ ಪ್ರವೇಶ ಕಾರ್ಕಳ ಭೈರವ ಅರಸರ ನೆಲೆವೀಡಾದ ಈದು ಗ್ರಾಮಕ್ಕೆ ನಡೆಯಿತು. ಅಲ್ಲಿದ್ದ ಪಂಚದೈವಗಳು ಸಪ್ತದೈವಗಳಾಗಿ ರೂಪುಗೊಂಡು ಈದು ನಾಡನ್ನು ಪ್ರವೇಶಿಸಿದವು. ವಿಶೇಷವೆಂದರೆ, ಇಡೀ ಈದು ಗ್ರಾಮದಲ್ಲಿ ದೇವಸ್ಥಾನವಿಲ್ಲ.
“ಊರಿಗೆ ದೇವರೂ ತಾನೇ, ದೈವೂ ತಾನೇ” ಎಂಬ ಅಭಯವಾಕ್ಯದ ಮೂಲಕ ಈ ಕ್ಷೇತ್ರವು ಸತ್ಯಪ್ರಮಾಣ, ರೋಗರುಜಿನ, ಕಷ್ಟಕಾರ್ಪಣ್ಯಗಳಿಗೆ ಅಂತಿಮ ತೀರ್ಪು ನೀಡುವ ನಾಡಿ ಕ್ಷೇತ್ರವಾಗಿ ರೂಪುಗೊಂಡಿದೆ.
ಇಲ್ಲಿ ಎಲ್ಲ ದೈವಗಳ ನಾಯಕನಾಗಿ ಆದಿ ದರ್ಮರ ಸಾನ್ನಿಧ್ಯ ಸ್ಥಾಪಿತವಾಗಿದ್ದು, ಅದು ಕ್ಷೇತ್ರದ ಪ್ರಮುಖ ಕಾರಣಿಕತೆಯಾಗಿದೆ. ತುಳುನಾಡಿನ ಸೃಷ್ಟಿಕರ್ತನೆಂದು ಕರೆಯಲ್ಪಡುವ ಬಿರ್ಮೆರ ಅಧಿವಾಸವಾಗಿರುವ ಅಪರೂಪದ ಬ್ರಹ್ಮಸ್ಥಾನವೂ ಇದಾಗಿದೆ. ದೈವಗಳು ಇಂದಿಗೂ “ಪೆರ್ನಾದಿ ಬಿರ್ಮೆರೆನ” ಎಂಬ ಹೆಸರಿನಲ್ಲಿ ಅಭಯ ನೀಡುವುದು ಇದರ ಪುರಾತನತೆಗೆ ಸಾಕ್ಷಿ.
ಮೂರು ಸಂಸ್ಥಾನಗಳ ತ್ರಿವೇಣಿ ಸಂಗಮ
ಕಾರ್ಕಳ ಭೈರವ ಅರಸರು, ಬಂಗಾಡಿಯ ಬಂಗರಸರು ಹಾಗೂ ಅಳದಂಗಡಿ ಅಜಿಲ ಅರಸರು—ಈ ಮೂರು ಮಹಾನ್ ಸಂಸ್ಥಾನಗಳ ರಾಜಮರ್ಯಾದೆಯನ್ನು ಪಡೆದ ದೈವವೆಂದರೆ ಅದು ಶ್ರೀ ಮುಜಿಲ್ನಾಯ ದೈವ. ಈ ಮೂರೂ ಸಂಸ್ಥಾನಗಳ ಪರಂಪರೆಯ ತ್ರಿವೇಣಿ ಸಂಗಮವಾಗಿ ಶ್ರೀ ಕ್ಷೇತ್ರ ಈದು ಪಾವನಗೊಂಡಿದೆ.
ಚಾಂದ್ರಮಾನ ಯುಗಾದಿಯ ಒಂಬತ್ತನೇ ದಿನದಂದು ಸಪ್ತದೈವಗಳ ವೈಭವಯುತ ಜಾತ್ರೆ ಅನೂಚಾನವಾಗಿ ನಡೆಯುತ್ತಿದ್ದು, ಮಕರ ಮಾಸದ ಹುಣ್ಣಿಮೆಗೆ ಪೂರ್ವ ಪದ್ಧತಿಯಂತೆ ಹರಕೆಯ ಬಲಿಯೂ ನೆರವೇರುತ್ತಿದೆ.
ಪುನರುತ್ಥಾನ ಮತ್ತು ಭವ್ಯ ಭವಿಷ್ಯ
2016ರಲ್ಲಿ ಊರ–ಪರವೂರ ಆಸ್ತಿಕ ಮಹಾಜನರ ಸಹಕಾರದಿಂದ ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಈ ಪ್ರಧಾನ ದೈವಸ್ಥಾನ ಜೀರ್ಣೋದ್ಧಾರಗೊಂಡು, ಇಂದು ಶಿಲಾಮಯ ಭಕ್ತಿ ಸಮುಚ್ಚಯವಾಗಿ ಭಕ್ತರಿಗೆ ಇಂಬು ನೀಡುತ್ತಿದೆ.
ಪಡಂಗಡಿ ಬೀಡಿನಿಂದ ಈದು ನಾಡಿಸ್ಥಾನಕ್ಕೆ ದೈವಗಳು ಬರುವಾಗ ಐದು ಸ್ಥಳಗಳಲ್ಲಿ—ಬೊಳ್ಕೊಟ್ಟು, ಬಟ್ಟೇಣಿ, ಕೇರ, ಬಡೆಕ್ಕಿಲ ಹಾಗೂ ಕಾಲು—ಕಾರಣಿಕ ತೋರಿಸಿ ನೆಲೆಸಿರುವುದು ಇತಿಹಾಸದ ಮಹತ್ವದ ಅಧ್ಯಾಯ. ಈ ಪೈಕಿ ಬೊಳ್ಕೊಟ್ಟು ಪ್ರಧಾನ ಭಂಡಾರದ ಸ್ಥಾನವಾಗಿದ್ದು, ಇದೀಗ ಅಲ್ಲಿ ಸುಮಾರು ಒಂದು ಕೋಟಿ ಮೂವತ್ತು ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ನೂತನ ಅಧಿವಾಸ ನಿರ್ಮಾಣಕ್ಕೆ ಯೋಜನೆ ರೂಪುಗೊಂಡಿದೆ.
ಸೀಮೆಯ ಶ್ರೀ ಕೃಷ್ಣ ತಂತ್ರಿಗಳ ನೇತೃತ್ವದಲ್ಲಿ, ದೈವಜ್ಞ ವಿದ್ವಾನ್ ಶ್ರೀ ಮಹೇಶ ಭಟ್ ಅಲಂಗಾರು ಇವರ ಮೂಲಕ ಅಷ್ಟಮಂಗಲ ಪ್ರಶ್ನಾಚಿಂತನೆ ನಡೆಸಿ, ದೋಷ ನಿವಾರಣಾರ್ಥ ಪೌಷ್ಟಿಕ ಯಾಗ–ಯಜ್ಞಗಳು ನಡೆಯುತ್ತಿವೆ. ನೂತನ ಬ್ರಹ್ಮಸ್ಥಾನ ನಿರ್ಮಾಣದ ಪೂರ್ವ ತಯಾರಿಗಳು ಭರದಿಂದ ಸಾಗುತ್ತಿವೆ.
ಭಕ್ತರಿಗೆ ವಿನಂತಿ
ನಮ್ಮ ಜೀವಮಾನದಲ್ಲಿ ಒಮ್ಮೆ ನಡೆಯುವ ಈ ಅಭೂತಪೂರ್ವ ಸುಲಗ್ನಕ್ಕೆ ಎಲ್ಲ ಭಕ್ತಾದಿಗಳು ತ್ರಿಕರಣಪೂರ್ವಕವಾಗಿ ಸಹಕರಿಸಿ, 2026ರ ಹರಕೆ ಜಾತ್ರೆಯೊಳಗೆ ನಡೆಯಲಿರುವ ಭವ್ಯ ಬ್ರಹ್ಮಕಲಶೋತ್ಸವವನ್ನು ಯಶಸ್ವಿಗೊಳಿಸಿ, ಶ್ರೀದೈವಗಳ ಕೃಪೆಗೆ ಪಾತ್ರರಾಗಬೇಕೆಂದು ವಿನಮ್ರ ವಿನಂತಿ.
ಶ್ರೀ ಮುಜಿಲ್ನಾಯ ದೈವ ಮತ್ತು ಬ್ರಹ್ಮ ಸಾನಿಧ್ಯಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ಸ್ವಸ್ತಿ ಶ್ರೀ ವಿಶ್ವಾವಸು ನಾಮ ಸಂವತ್ಸರ
ಮಕರ ಮಾಸ ದಿನ ೨೪, ಸಲುವ ಮಾಘ ಬಹುಳ ಷಷ್ಠಿ
ತಾ. 07-02-2026 (ಶನಿವಾರ) ರಿಂದ
ಮಕರ ಮಾಸ ದಿನ ೨೫, ಸಲುವ ಮಾಘ ಬಹುಳ ಸಪ್ತಮಿ
ತಾ. 08-02-2026 (ಆದಿತ್ಯವಾರ) ರವರೆಗೆ
ಕಾರ್ಕಳ ತಾಲೂಕು, ಈದು ಬೊಳ್ಕೊಟ್ಟು ಗ್ರಾಮದ ನವೀಕೃತಗೊಂಡ ಶ್ರೀ ಮುಜಿಲ್ನಾಯ ದೈವಸ್ಥಾನದಲ್ಲಿ
ಶ್ರೀ ಮುಜಿಲ್ನಾಯ ದೈವ ಮತ್ತು ಬ್ರಹ್ಮ ಸಾನಿಧ್ಯಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಭಕ್ತಿಪೂರ್ವಕವಾಗಿ ಜರುಗಲಿರುತ್ತದೆ.
ದಿನಾಂಕ: 08-02-2026, ಆದಿತ್ಯವಾರ
ಸಮಯ: ಬೆಳಿಗ್ಗೆ ಗಂಟೆ 8.30ಕ್ಕೆ
ಲಗ್ನ: ಕುಂಭ ಲಗ್ನ
ಶ್ರೀ ಕ್ಷೇತ್ರ ಆಸ್ರಣ್ಣರಾದ ಶ್ರೀ ವಿ. ಕೃಷ್ಣ ತಂತ್ರಿಯವರ ನೇತೃತ್ವದಲ್ಲಿ, ಶಾಸ್ತ್ರೋಕ್ತ ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ಈ ಮಹಾ ಪುಣ್ಯಪ್ರದ ಕಾರ್ಯಕ್ರಮ ನಡೆಯಲಿದೆ.
ಈ ಅತಿ ಪವಿತ್ರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಗವದ್ಭಕ್ತರಾದ ತಾವೆಲ್ಲರೂ ಬಂಧು–ಮಿತ್ರರೊಡಗೂಡಿ ಭಾಗವಹಿಸಿ ಶ್ರೀ ದೈವಾನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಮ್ರವಾಗಿ ಅಪೇಕ್ಷಿಸುತ್ತೇವೆ.
ಆಹ್ವಾನಕರು
ಡಾ. ಎಂ. ಎನ್. ರಾಜೇಂದ್ರ ಕುಮಾರ್
ಅಧ್ಯಕ್ಷರು, ಎಸ್.ಡಿ.ಸಿ.ಸಿ. ಬ್ಯಾಂಕ್, ಮಂಗಳೂರು
ಗೌರವಾಧ್ಯಕ್ಷರು – ಬ್ರಹ್ಮಕಲಶೋತ್ಸವ ಸಮಿತಿ
ಭಾಸ್ಕರ ಎಸ್. ಕೋಟ್ಯಾನ್, ಕೊಳಕೆ ಇರ್ವತ್ತೂರು
ಅಧ್ಯಕ್ಷರು – ಬ್ರಹ್ಮಕಲಶೋತ್ಸವ ಸಮಿತಿ
ವಸಂತ್ ಭಟ್
ಶ್ರೀ ಸರಸ್ವತಿ ನಾರಾವಿ
ಅಧ್ಯಕ್ಷರು – ಜೀರ್ಣೋದ್ಧಾರ ಸಮಿತಿ
ಶ್ರೀ ವಿ. ಕೃಷ್ಣ ತಂತ್ರಿ
ಪ್ರಧಾನ ಅರ್ಚಕರು, ಶ್ರೀ ಮುಜಿಲ್ನಾಯ ದೈವಸ್ಥಾನ, ಈದು
ಅಶೋಕ ಕುಮಾರ್ ಜೈನ್
ಪಡ್ಯಾರ ಮನೆ, ಈದು
ಆಡಳಿತ ಮೊಕ್ತಸರರು






























