ಹೆದ್ದಾರಿ ಇಲಾಖೆಯಿಂದ ಕಟ್ಟಡದ ತಳಪಾಯಕ್ಕೆ ಸಿಮೆಂಟ್ ಕಾಂಕ್ರೀಟ್ ಬ್ಲಾಕ್ ತಂತ್ರಜ್ಞಾನ !

Picture of RB NEWS

RB NEWS

Bureau Report

ಕಾರ್ಕಳ : ಸಾಣೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಪುಲ್ಕೇರಿ ಬೈಪಾಸ್ ಸರ್ಕಲ್ ನಿಂದ ಮಂಗಳೂರಿನ ಬಿಕರ್ನಕಟ್ಟೆಯವರೆಗೆ ಕಳೆದ 4 ವರ್ಷಗಳಿಂದ ರಾ.ಹೆ._ 169 ಚತುಷ್ಪಥ ಹೆದ್ದಾರಿ ಕಾಮಗಾರಿಯು ಆಮೆನಡುಗೆ ಯತ್ತ‌ ಸಾಗುತ್ತಿದೆ.

ರಸ್ತೆ ಅಗಲೀಕರಣದ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಇಲಾಖೆ ಈ ಹಿಂದೆ ವಿನೂತನ ಟಾರ್ಪಾಲ್ ತಂತ್ರಜ್ಞಾನವನ್ನು ಹೆದ್ದಾರಿ ನಿರ್ಮಾಣ ಕಾರ್ಯದಲ್ಲಿ ಪರಿಚಯಿಸಿತ್ತು.

ಟಾರ್ಪಲ್ ತಂತ್ರಜ್ಞಾನ!?

ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಸಂದರ್ಭವನ್ನು ಗುಡ್ಡಗಳನ್ನು ಕಡಿದು ರಸ್ತೆ ನಿರ್ಮಾಣ ಕಾರ್ಯ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ಗುಡ್ಡದ ಮಣ್ಣು ಜರಿದು ರಸ್ತೆಗೆ ಬೀಳುತ್ತಿತ್ತು.

ಸುರಕ್ಷತೆಯ ದೃಷ್ಟಿಯಿಂದ ಗುಡ್ಡಜರಿದ ಭಾಗಕ್ಕೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರ ನಿರಂತರ ಒತ್ತಡಕ್ಕೆ ಮಣಿದು ಮಳೆಗಾಲದಲ್ಲಿ ಗುಡ್ಡ ಜರಿಯುತ್ತಿರುವ ಭಾಗಕ್ಕೆ ಭಾರೀ ಗಾತ್ರದ ಟಾರ್ಪಾಲನ್ನು ಅಳವಡಿಸಿ ಹೆದ್ದಾರಿ ಇಲಾಖೆ ವಿನೂತನ ತಂತ್ರಜ್ಞಾನವನ್ನು ಜಗತ್ತಿಗೆ ಪರಿಚಯಿಸಿತ್ತು.

ವಿಪರೀತ ಗಾಳಿ ಮಳೆಗೆ ತಾರ್ಪಾಲು ಹರಿದು ಹೋಗಿ ಹೆದ್ದಾರಿ ಇಲಾಖೆಯ ತಂತ್ರಜ್ಞಾನವನ್ನು ಅಣಕಿಸುವಂತಹ ಸನ್ನಿವೇಶ ನಿರ್ಮಾಣವಾಗಿತ್ತು.

ತದ ಬಳಿಕ ಸಾರ್ವಜನಿಕರ ಒತ್ತಡಕ್ಕೆ ಮಣಿದು ಸುಭದ್ರವಾದ ತಡೆಗೋಡೆಯನ್ನು ನಿರ್ಮಾಣ ಮಾಡಿದ್ದರು.

ಇದೀಗ ಮತ್ತೊಂದು ವಿನೂತನ ತಂತ್ರಜ್ಞಾನವನ್ನು ಹೊಸ ಬಸ್ಸು ನಿಲ್ದಾಣದ ನಿರ್ಮಾಣ ಕಾರ್ಯದಲ್ಲಿ ಪರಿಚಯಿಸಿದೆ.

ಅದುವೇ ಕಟ್ಟಡದ ತಳಪಾಯಕ್ಕೆ ಸಿಮೆಂಟ್ ಕಾಂಕ್ರೀಟ್ ಬ್ಲಾಕ್ ತಂತ್ರಜ್ಞಾನ

ಹೆದ್ದಾರಿ ಕಾಮಗಾರಿ ಸಂದರ್ಭದಲ್ಲಿ ಸಾಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಬಸ್ಸು ತಂಗುದಾಣಗಳನ್ನು ಹೆದ್ದಾರಿ ಗುತ್ತಿಗೆದಾರ ಕಂಪನಿ ಕೆಡವಿ ಹಾಕಿತ್ತು.

ಇದೀಗ ಸಾರ್ವಜನಿಕರ ನಿರಂತರ ಒತ್ತಾಯದ ಬಳಿಕ ಗ್ರಾಮದ 4 ಕಡೆಗಳಲ್ಲಿ ಹೊಸ ಬಸ್ಸು ತಂಬುದಾಯದ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಗುತ್ತಿಗೆದಾರ ಕಂಪನಿ ಮುಂದಾಗಿದ್ದು ಕಳೆದ ತಿಂಗಳು ಡಿಸೆಂಬರ್ 3 ರಂದು ಸಾಣೂರು ಮತ್ತು ಮುರತಂಗಡಿಯಲ್ಲಿ ತಲಾ 2 ಬಸ್ಸು ತಂಗುದಾಣ ಗಳ ಕಟ್ಟಡ ನಿರ್ಮಾಣಕ್ಕೆ 15 ಅಡಿ ಉದ್ದ 10 ಅಡಿ ಅಗಲ ಮತ್ತು 8 ಅಡಿ ಆಳದ ಗುಂಡಿಯನ್ನು ತೋಡಲಾಗಿತ್ತು .

ಗುಂಡಿಯ ಅಡಿ ಭಾಗದಿಂದ 3 ಬದಿಗೆ ಸಿಮೆಂಟ್ ಕಾಂಕ್ರೀಟ್ ಬ್ಲಾಕ್ ಕಟ್ಟಿಕೊಂಡು ಭೂಮಿಯ ಮೇಲ್ಭಾಗದ ವರೆಗೆ ಮಧ್ಯದಲ್ಲಿ ಮಣ್ಣು ತುಂಬಿಸಿ ತಳಪಾಯವನ್ನು ನಿರ್ಮಾಣ ಮಾಡಿರುತ್ತಾರೆ.

ಸಾಂಪ್ರದಾಯಿಕವಾಗಿ ಶಿಲೆಕಲ್ಲುಗಳಿಂದ ಅಥವಾ ಕಾಂಕ್ರೀಟ್ ಪಿಲ್ಲರ್ ಗಳಿಂದ ತಳಪಾಯ ನಿರ್ಮಾಣ ಮಾಡುವುದು ಸರ್ವೇ ಸಾಮಾನ್ಯ.

ಆದರೆ ಹೆದ್ದಾರಿ ಇಲಾಖೆ ಸಿಮೆಂಟ್ ಕಾಂಕ್ರೀಟ್ ಬ್ಲಾಕ್ ಗಳಿಂದ ತಳಪಾಯ ನಿರ್ಮಾಣ ಮಾಡಿ ಹೊಸ ತಂತ್ರಜ್ಞಾನವನ್ನು ಪರಿಚಯಿಸಿದೆ.

ಬಸು ನಿಲ್ದಾಣದ ಕಟ್ಟಡದ ಮುಂದಿನ ಭಾಗದಲ್ಲಿ ಇನ್ನು ಯಾವ ರೀತಿಯ ತಂತ್ರಜ್ಞಾನದ ಅಳವಡಿಕೆ ಇರಬಹುದು ಎಂಬ ಬಗ್ಗೆ ಸಾರ್ವಜನಿಕರು ಕುತೂಹಲದಿಂದ ಕಾದು ನೋಡುತ್ತಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top