




“ಆರ್.ಬಿ.ನ್ಯೂಸ್ “ವರದಿಯ ಫಲಶ್ರುತಿ
ಮಣಿದ ಹೆದ್ದಾರಿ ಪ್ರಾಧಿಕಾರ: ನಿರ್ಮಾಣವಾಯಿತು ಸಂಪರ್ಕ ರಸ್ತೆ
ಕಾರ್ಕಳ : ಸಾಣೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಗೋದಾಮಿಗೆ ಹೋಗಲು ರಾ.ಹೆ -169 ಮುರತಂಗಡಿ ಸರ್ವಿಸ್ ರಸ್ತೆಯಿಂದ ಸಂಪರ್ಕ ರಸ್ತೆ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ.
ಸದ್ಯಕ್ಕೆ ತಾತ್ಕಾಲಿಕವಾಗಿ ವಾಹನಗಳಿಗೆ ಮತ್ತು ಗ್ರಾಹಕರಿಗೆ ಸರಾಗವಾಗಿ ಸಂಚರಿಸಲು ಅನುಕೂಲವಾಗಿದೆ.
ಸಾಣೂರು ಸೊಸೈಟಿ ಕಟ್ಟಡದ ಮುಂಭಾಗದಲ್ಲಿ ಬೃಹತ್ ಗಾತ್ರದ ಆಲದ ಮರದ ಪಕ್ಕದಲ್ಲಿ ಮುರತಂಗಡಿ ಸರಕಾರಿ ಶಾಲೆಗೆ ಹೋಗುವ ಅಗಲಕಿರಿದಾದ ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಗಳನ್ನು ಸುರಕ್ಷಿತ ಅಂತರಕ್ಕೆ ಸ್ಥಳಾಂತರಿಸಿ ರಸ್ತೆ ಅಗಲೀಕರಣ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದರು ಕೂಡಾ ಹೆದ್ದಾರಿ ಇಲಾಖೆ ವಿಳಂಬ ಗತಿಯ ಧೋರಣೆಗೆ ಜೋತು ಬಿದ್ದಿರುತ್ತದೆ ಈ ಕುರಿತು ಸಾಮಾಜಿಕ ಹೋರಾಟಗಾರ ಸಾಣೂರು ನರಸಿಂಹ ಕಾಮತ್ ನೇತೃತ್ಬದಲ್ಲಿ ಹೋರಾಟ ನಡೆಯುತ್ತಿತ್ತು.
ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರಸ್ತೆಯನ್ನು ಸಂಪರ್ಕಿಸುವ ಈ ಅಗಲ ಕಿರಿದಾದ ರಸ್ತೆಯಲ್ಲಿ ಸಾಣೂರು ಮುದ್ದಣ್ಣ ನಗರ ಕಡೆಯಿಂದ ನೂರಾರು ಜನ ಮತ್ತು ವಾಹನಗಳು ಪ್ರತಿನಿತ್ಯ ಸಂಚರಿಸುತ್ತಿದ್ದು , ರಸ್ತೆಯ ಅಗಲೀಕರಣವಾಗದಿದ್ದರೆ ಸರ್ವೀಸ್ ರಸ್ತೆಯಲ್ಲಿ ವೇಗವಾಗಿ ಸಂಚರಿಸುವ ವಾಹನಗಳಿಗೆ ಅಡ್ಡರಸ್ತೆಯಿಂದ ಬರುವ ವಾಹನಗಳ ಅರಿವಿಲ್ಲದೆ ದಿನನಿತ್ಯ ಅಪಘಾತಗಳು ಸಂಭವಿಸುವ ಅಪಾಯ ಎದುರಾಗಿತ್ತು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅರೆಬರೆ ಕಾಮಗಾರಿಯಿಂದಾಗಿ ಜನರ ಸುರಕ್ಷತೆಗೆ ತೊಂದರೆ ಆಗದಂತೆ ಸ್ಥಳೀಯ ಜನಪ್ರತಿನಿಧಿಗಳು ಹೆದ್ದಾರಿ ಇಲಾಖೆ ಮೇಲೆ ಒತ್ತಡವನ್ನು ತರಬೇಕೆಂದು ಪರಿಸರದ ನಾಗರಿಕರ ಅಭಿಪ್ರಾಯವಾಗಿದೆ.








































