ಕಾರ್ಕಳ : ಶಿವಮೊಗ್ಗದಿಂದ ಮಂಗಳೂರು ಕಡೆಗೆ ಸೇಬು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಶನಿವಾರ ನಸುಕಿನ ಜಾವದಲ್ಲಿ ಬೆಂಕಿಗಾಹುತಿಯಾಗಿ ಭಾರೀ ನಷ್ಟ ಉಂಟಾಗಿದೆ. ಶನಿವಾರ ನಸುಕಿನ ಜಾವ 2.30ರ ವೇಳೆಗೆ ಈ ಘಟನೆ ಮಾಳ ಎಸ್.ಕೆ ಬಾರ್ಡರ್ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿದೆ. ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಕಳ ಅಗ್ನಿಶಾಮಕ ದಳವು ಬೆಂಕಿ ನಂದಿಸುವ ಕಾರ್ಯಚರಣೆ ನಡೆಸಿದೆ. ಅದಾಗಲೇ ಲಾರಿ ಸಂಪೂರ್ಣ ಹೊತ್ತಿ ಭಸ್ಮವಾಗಿದೆ. ಇದರಿಂದ ಲಕ್ಷಾಂತರ ಮೌಲ್ಯದ ಲಾರಿ ಹಾಗೂ ಇತರ ಪರಿಕರಗಳು ನಷ್ಟವಾಗಿದೆ. ಕಾರ್ಕಳ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಚಂದ್ರಶೇಖರ್, ಸಿಬ್ಬಂದಿಗಳಾದ ಅಚ್ಚತ ಕರ್ಕೇರಾ, ಹರಿಪ್ರಸಾದ್ ಶೆಟ್ಟಿಗಾರ್, ಮಹಮ್ಮದ್ ಮುಜಾಂಬಿಲ್, ದಿನೇಶ್, ನಿತ್ಯಾನಂದ ಇವರು ಕಾರ್ಯಚರಣೆಯಲ್ಲಿ ಪಾಲ್ಗೊಂಡರು.
ಎಸ್.ಕೆ.ಬಾರ್ಡರ್ ಎಲ್ಲಿ ಇದೆ ಗೊತ್ತಾ? 1997ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಬೇರ್ಪಟ್ಟು ಉಡುಪಿ ಜಿಲ್ಲೆ ರೂಪುಗೊಂಡಿದೆ. ಹೀಗಿದ್ದರೂ ಪ್ರಸ್ತುತ ದಿನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗ ಉಡುಪಿ ಜಿಲ್ಲಾ ವ್ಯಾಪ್ತಿಯಲ್ಲಿ ಇರುವುದು ಗಮನಾರ್ಹ. ಅದುವೇ ಎಸ್.ಕೆ.ಬಾರ್ಡರ್…! ಎಸ್.ಕೆ. ಅಂದರೆ ಸೌತ್ ಕೆನರಾ ಇದರ ಬಾರ್ಡರ್ ಇರುವುದು ಮಾತ್ರ ಉಡುಪಿ ಜಿಲ್ಲೆಯ ಮಾಳ ಗ್ರಾಮದ ಸನ್ನಿಹದಲ್ಲಿ. ಇದರ ಮತ್ತೊಂದು ಗಡಿ ಭಾಗವೇ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ. ಈ ಗಡಿಭಾಗದಲ್ಲಿ ಏನಾದರೂ ಅಪಘಾತ ಸಂಭವಿಸಿದರೆ ಇಲಾಖೆಗಳು ಮಾತ್ರ ಇಂದಿಗೂ ಎಸ್.ಕೆ.ಬಾರ್ಡರ್ ಅಂತ ಗುರುತಿಸುತ್ತಿರುವುದು ಗಮನಾರ್ಹ.