ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ, ನ್ಯಾಯವಾದಿಗಳ ಸಂಘ (ರಿ.), ಕಾರ್ಕಳ, ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ಹಾಗೂ ಎಂ.ಪಿ.ಎಂ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳ ಇದರ ಸಂಯುಕ್ತ ಆಶ್ರಯದಲ್ಲಿ ಎಂ.ಪಿ.ಎಂ. ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕಾರ್ಕಳದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯ ಸಲುವಾಗಿ ಉಚಿತ ಕಾನೂನು ಅರಿವು ಮಾಹಿತಿ ಹಾಗೂ ಮಾನಸಿಕ ಸ್ವಾಸ್ತ್ರ ಕುರಿತು ಮಾಹಿತಿ ಕಾರ್ಯಕ್ರಮ ಅ.10ರಂದು ಜರುಗಿತು
ಸಮಾರಂಭವನ್ನು ಉದ್ಘಾಟಿಸಿದ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಕೋಮಲ ಆರ್.ಸಿ.ಯವರು ಮಾತನಾಡಿ, ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯದ ಕಾಳಜಿ ವಹಿಸಬೇಕು. ಮಾನಸಿಕ ಸದೃಢತೆಗೆ ಯೋಗ ಸಹಕಾರಿಯಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ತಾಲೂಕು ಆರೋಗ್ಯಾಧಿಕಾರಿ ಡಾ. ಸಂದೀಪ್ ಕುಡ್ವ ಮಾತನಾಡಿ, ಮಾನಸಿಕ ಆರೋಗ್ಯದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು.
ಇನ್ನೋರ್ವ ಮುಖ್ಯ ಅತಿಥಿ ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ಕೆ. ಹರೀಶ್ ಅಧಿಕಾರಿ ಮಾತನಾಡಿ, ನಿತ್ಯ ಧ್ಯಾನ, ಯೋಗ, ವ್ಯಾಯಾಮ ಜೊತೆಗೆ ಸರಿಯಾದ ಸಮಯದಲ್ಲಿ ನಿದ್ದೆ, ಗುಣಮಟ್ಟದ ಆಹಾರ ಸೇವನೆ ಆರೋಗ್ಯ ಹೆಚ್ಚಿಸಿಕೊಳ್ಳಲು ಪ್ರಯೋಜನವಾಗುತ್ತದೆ. ಮೊಬೈಲ್, ಕಂಪ್ಯೂಟರ್ ಹಾಗೂ ಸಾಮಾಜಿಕ ಮಾಧ್ಯಮಗಳ ಬಳಕೆಯ ನಿಯಂತ್ರಣದಿಂದಾಗಿ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬಹುಗ ದೆಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ಪ್ರೊ. ಸುರೇಶ್ ರೈ ಕೆ.ಯವರು ಮಾನಸಿಕ ಆರೋಗ್ಯದ ಕುರಿತು ಮಾತನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಡಾ. ಟಿ.ಎಂ.ಎ. ಪೈ ಆಸ್ಪತ್ರೆ ಉಡುಪಿಯ ಮನೋವೈದ್ಯ ಶಾಸ್ತ್ರದ ರಿಜಿಸ್ಟರ್ ಡಾ. ಯು. ಗೌರವ್ ಕಿಣಿ, ಜೀವನದಲ್ಲಿ ಎದುರಾಗುವ ಹಲವಾರು ಸವಾಲುಗಳು ಮನಸ್ಸಿಗೆ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನ್ಯಾಯವಾದಿ ಲೋಲಾಕ್ಷ ಅವರು ಕಾನೂನನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಬೇಕೆಂಬುದರ ಬಗ್ಗೆ ತಿಳಿಸಿದರು.
ಪ್ರಾಧ್ಯಾಪಕರಾದ ಚಂದ್ರಕಾಂತ್ ಶೆಣೈ, ಭಾಗ್ಯಲಕ್ಷ್ಮಿ ಟಿ.ಎಂ, ವಿನಯ ಎಂ.ಸಿ., ರೇಣುಕಾ ಜಿ. ಉಪಸ್ಥಿತರಿದ್ದರು.