ವಿಶ್ವದರ್ಜೆಯ ಸ್ಥಾನಮಾನಕ್ಕೇರಿದ ಎಲಿಕ್ಸರ್ ಎಸ್. ಕೆ. ಎಫ್

ಮಧ್ಯ ಪ್ರದೇಶದ ಭೋಪಾಲದಲ್ಲಿ ಅನಾಮತ್ತು ಸಾವಿರದ ಇನ್ನೂರು ಟನ್ನು ಭತ್ತವನ್ನು ಬೇಯಿಸಿ ಅಕ್ಕಿಯಾಗಿಸುವ ಬೃಹತ್ ರೈಸ್ ಮಿಲ್ಲು ತಲೆಯೆತ್ತಿದೆ. ಭಾಸ್ಮತಿಯ ಸುಗಂಧ ಹರಡುವ ಈ ಅಕ್ಕಿ ಮಿಲ್ಲು ಏಷ್ಯಾದಲ್ಲೇ ಅತಿ ದೊಡ್ಡ ಅಕ್ಕಿ ಉತ್ಪಾದನೆಯ ಕೇಂದ್ರವಾಗಿದೆ. ಆದರೆ ಈ ತಂತ್ರಜ್ಞಾನವನ್ನು ಇವರಿಗೆ ಒದಗಿಸಿದ್ದು ಮಾತ್ರ ನಮ್ಮ ಮೂಡುಬಿದರೆಯ ಎಸ್ ಕೆ ಎಫ್ ಎಕ್ಸೈಲರ್ ಕಂಪನಿ! ಈ ಕಂಪನಿಯ ಮಾಲೀಕರು ನನ್ನ ಆತ್ಮೀಯ ಮಿತ್ರರಾದ ರಾಮಕೃಷ್ಣ ಆಚಾರ್ಯರು. ಶೂನ್ಯದಿಂದಲೇ ಸರ್ವಸ್ವವನ್ನು ಸಾಧಿಸುತ್ತೇನೆ ಎನ್ನುವ ಇವರ ಅಧಮ್ಯ ಛಲ ಕೇವಲ ಒಂದು ಪೈಸೆಯಿಂದ 800 ಕೋಟಿಯ ಸಾಮ್ರಾಜ್ಯವನ್ನು ಕಟ್ಟಲು ಪ್ರೇರಣೆ ಆಯಿತು. ಬಡತನವನ್ನೇ ಹೊದ್ದು ಮಲಗಿದ್ದ ಬಡಗಿಯೊಬ್ಬರ ಏಳು ಜನ ಮಕ್ಕಳಲ್ಲಿ ಒಬ್ಬನಾಗಿ ಹುಟ್ಟಿದ ರಾಮಕೃಷ್ಣ ಆಚಾರ್ಯರು ಕಡು ಡತನದ ಕರಾಳ ಮುಖವನ್ನು ಕಂಡವರು. ಅವರಿವರು ಕೊಟ್ಟ ಬಟ್ಟೆಯನ್ನೇ ತೊಟ್ಟು ಶಾಲೆ ಕಲಿತವರು. ಬದುಕಿನ ಹೆಜ್ಜೆ ಹೆಜ್ಜೆಯಲ್ಲೂ ಸ್ವಾಭಿಮಾನವನ್ನು ಇರಿಯುತ್ತಿದ್ದ ಕ್ರೂರ ಬಡತನವನ್ನು ಹೇಗಾದರೂ ಸರಿ ಬಗ್ಗು ಬಡಿಯಲೇಬೇಕು ಎಂದು ಪಣತೊಟ್ಟ ರಾಮಕೃಷ್ಣ ಆಚಾರ್ಯರು ಬಾಲ್ಯದ ದಿನದಲ್ಲೇ ನಾಲ್ಕು ಕಾಸು ಸಂಪಾದನೆಗೆ ಮುಂದಾದರು. ಏರಿನಲ್ಲಿ ಸೈಕಲ್ ತುಳಿಯಲು ಏಗುವ ಮೀನುಗಾರರಿಗೆ ಸೈಕಲ್ ದೂಡಿ ಕೊಟ್ಟು ಅವರು ಕೊಟ್ಟ ಒಂದು ಪೈಸೆ ಭಕ್ಷೀಸು ಇವರ ಜೀವನದ ಮೊದಲ ಸಂಪಾದನೆ! ಮೂರು ವರ್ಷಗಳ ಕಾಲ ಕಮ್ಮಾರನಾಗಿ ಕಬ್ಬಿಣ ಗುದ್ದಿದ್ದೂ ಆಯಿತು. ಗ್ಯಾರೇಜು ಸೇರಿ ಕೈ ಕಪ್ಪು ಮಾಡಿಕೊಂಡಿದ್ದಾಯಿತು. ಆದರೆ ಗೋಣಿಕೊಪ್ಪದಲ್ಲಿ ರೈಸು ಮಿಲ್ಲಿನ ಉಪಕರಣಗಳ ರಿಪೇರಿಗೆ ತೊಡಗಿಕೊಂಡ ದಿನವೇ ಆಚಾರ್ಯರ ಬದುಕಿನಲ್ಲಿ ಹೊಸ ಭರವಸೆಯ ಕಿರಣವೊಂದು ಮೂಡಿತು. ಅದರ ಮಾಲೀಕರಾಗಿದ್ದ ರಾಮಾಚಾರ್ಯರು, ರಾಮಕೃಷ್ಣನ ಕಠಿಣ ಪರಿಶ್ರಮವನ್ನು ಕಂಡು ಉನ್ನತ ವ್ಯಾಸಂಗಕ್ಕಾಗಿ ಮೈಸೂರಿಗೆ ಕಳುಹಿಸಿದರು.







































