ಅಕ್ರಮ ಗೋ ಸಾಗಾಟದ ವೇಳೆ ಪೊಲೀಸರ ಹತ್ಯೆಗೆ ಯತ್ನ:ಆರೋಪಿಗಳ ಬಂಧನ

Picture of RB NEWS

RB NEWS

Bureau Report

ಪಡುಬಿದ್ರಿ: ಕರ್ತವ್ಯ ನಿರತ ಪೊಲೀಸರ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಬ್ಬರನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.‌

ಆರೋಪಿಗಳಾದ ಮಹಮ್ಮದ್ ಅಜಿಮ್ ಕಾಪು ಮತ್ತು ಮಹಮ್ಮದ್ ರಾಜಿಕ್ ಬಜಪೆ ಬಂಧಿತ ಆರೋಪಿಗಳು.‌

ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್ಐ ಹಾಗೂ ಸಿಬ್ಬಂದಿಯವರು ಅಲ್ಲಿನ ದನ ಕಳವು ಪ್ರಕರಣ ಒಂದರಲ್ಲಿ ಆರೋಪಿಗಳ ಪತ್ತೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾಯುತ್ತಿರುವಾಗ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ KA53MH5847 ನೇ ಕಾಫಿ ಬಣ್ಣದ ಫಾರ್ಚುನರ್ ಕಾರು ಬಂದಿದೆ. ಅದನ್ನು ಪರಿಶೀಲಿಸಲಾಗಿ ಸದರಿ ಕಾರಿನ ಒಳಗಡೆ ಐದಾರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿದ್ದನ್ನು ಕಂಡಾಗ ಕಾರಿನ ಚಾಲಕ ಪೊಲೀಸರನ್ನು ಉದ್ದೇಶಿಸಿ ನಮ್ಮನ್ನು ಹುಡುಕಿಕೊಂಡು ಇಲ್ಲಿಯವರೆಗೆ ಬರುತ್ತೀರಾ ಎಂದು ಹೇಳಿ ಪೊಲೀಸರ ಮೇಲೆ ಕಾರನ್ನು ಚಲಾಯಿಸಿ ಕೊಲೆಗೆ ಪ್ರಯತ್ನಿಸಿದ್ದನು‌.

ಬಳಿಕ ಪೊಲೀಸರು ಕಾರಿನಲ್ಲಿದ್ದ ಶಾರೋಜ್ ಸುರತ್ಕಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು ಉಳಿದ ಆರೋಪಿಗಳು ಪೊಲೀಸ್ ಸಿಬ್ಬಂದಿಗಳ ಮೇಲೆ ಕಾರನ್ನು ಚಲಾಯಿಸಿ ಗಾಯಗೊಳಿಸಿ ಪರಾರಿಯಾಗಿರುತ್ತಾರೆ.

ಗಂಗೊಳ್ಳಿ ಪೊಲೀಸ್ ಠಾಣಾ ಪಿ ಎಸ್ ಐ ರವರು ನೀಡಿದ ದೂರಿನ ಮೇರೆಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಕಾರಿನಲ್ಲಿದ್ದ ಉಳಿದ ಆರೋಪಿಗಳಾದ ಸಫ್ವಾನ್ ಕಾಪು, ಅಜೀಂ ಕಾಪು ಮತ್ತು ರಾಜಿಕ್ ಬಜಪೆ ಎಂಬವರ ದಸ್ತಗಿರಿ ಬಗ್ಗೆ ಪಡುಬಿದ್ರಿ ಪೊಲೀಸರು ಪ್ರಯತ್ನದಲ್ಲಿದ್ದರು.

ಆರೋಪಿಗಳಾದ ಮಹಮ್ಮದ್ ಅಜಿಮ್ ಕಾಪು ಮತ್ತು ಮಹಮ್ಮದ್ ರಾಜಿಕ್ ಬಜಪೆ ಎಂಬವರು ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಿ ತಲೆಮರೆಸಿಕೊಂಡಿದ್ದರು.

ಆರೋಪಿಗಳು ಬಜಪೆ ಬಂದ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ನ್ಯಾಯಾಲಯವು ಆರೋಪಿಗಳಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.

  • ಆರೋಪಿ ಮೊಹಮ್ಮದ್ ರಾಜಿಕ್ ಬಜ್ಪೆ ಎಂಬತನ ಮೇಲೆ ಬಜಪೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಗೋ ಸಾಗಾಟದ ಬಗ್ಗೆ ಪ್ರಕರಣ ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಇರುತ್ತದೆ.
  • ಇನ್ನೋರ್ವ ಆರೋಪಿ ಮೊಹಮ್ಮದ್ ಅಜಿಮ್ ಕಾಪು ಎಂಬಾತನ ವಿರುದ್ಧ ಬಜಪೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಗೋಸಾಗಾಟದ ಬಗ್ಗೆ ಪ್ರಕರಣ ದಾಖಲಾಗಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುತ್ತದೆ,ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಸೆಂಟ್ರಿಂಗ್ ಸಾಮಗ್ರಿಗಳ ಕಳ್ಳತನ ಬಗ್ಗೆ ಪ್ರಕರಣ ದಾಖಲಾಗಿ ಮಾನ್ಯ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿ ಇರುತ್ತದೆ.
  • ಅಲ್ಲದೆ ಈತನು ಉತ್ತರ ಕನ್ನಡ ಜಿಲ್ಲೆಯ ಚಿತ್ತಾಕುಲ ಮತ್ತು ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ ಪ್ರಕರಣದಲ್ಲಿ ದಸ್ತಗಿರಿ ಆಗದೆ ತಲೆಮರೆಸಿಕೊಂಡಿದ್ದು ಅಲ್ಲಿನ ಪೊಲೀಸರು ಈತನ ದಸ್ತಗಿರಿಗೆ ಹುಡುಕಾಟದಲ್ಲಿ ಇರುತ್ತಾರೆ.

ಉಡುಪಿ ಜಿಲ್ಲಾ ಪೊಲೀಸ್ ಅಧಿಕ್ಷಕ ಹರಿರಾಮ್ ಶಂಕರ ಆದೇಶದಂತೆ, ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಸದಾನಂದ ಎಸ್ ನಾಯಕ್ ಮತ್ತು ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಡಾ. ಹರ್ಷ ಪ್ರಿಯಂವಧ ಮಾರ್ಗದರ್ಶನದಂತೆ ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ರವರ ನೇತೃತ್ವದಲ್ಲಿ ಪಡುಬಿದ್ರಿ ಪೊಲೀಸ್ ಠಾಣಾ ಪೋಲಿಸ್ ಉಪನಿರೀಕ್ಷಕರಾದ ಸಕ್ತಿವೇಲು ಇ ಮತ್ತು ಅನಿಲ್ ಕುಮಾರ್ ಸಿಬ್ಬಂದಿಗಳಾದ ಎ ಎಸ್ ಐ ರಾಜೇಶ್ ಪಿ, ಹೆಡ್ ಕಾನ್ಸ್‌ಟೇಬಲ್ ನಾಗರಾಜ ಕಾನ್ಸ್‌ಟೇಬಲ ಕೃಷ್ಣರಾಜ ಹೆಗಡೆ, ಸಂದೇಶ ಮಹಿಳಾ ಕಾನ್ಸ್‌ಟೇಬಲ ರುಕ್ಮಿಣಿ ರವರು ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಪತ್ತೆಗೆ ಸಹಕರಿಸಿರುತ್ತಾರೆ.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿ ,ಹೆಚ್ ಸಿ ದಿನೇಶ್ ರವರು ಸಹಕರಿಸಿರುತ್ತಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top