ಕರಾವಳಿಯ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕ ಸಮಸ್ಯೆ ಸ್ಪಂದಿಸಲು ಆಗ್ರಹಿಸಿ ಬೃಹತ್ ಪ್ರತಿಭಟನೆ
ಮೂಡುಬಿದಿರೆ : ಜು. 21 ರಂದು ಮೂಡುಬಿದಿರೆ ಮಿನಿ ವಿಧಾನ ಸೌಧದ ಮುಂದುಗಡೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು ಪ್ರತಿಭಟನಾ ಪ್ರದರ್ಶನ ನಡೆಸಿದರು.
ಕೆಂಪುಕಲ್ಲು ಮತ್ತು ಮರಳು ಲಭ್ಯವಿಲ್ಲದಿರುವುದರಿಂದ ಕಟ್ಟಡ ಕಾರ್ಮಿಕರಿಗೆ ಕೆಲಸವಿಲ್ಲದ ಸ್ಥಿತಿ ನಿರ್ಮಾಣ ವಾಗಿದೆ. ಈ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಬೇಕು. ಕೆಲಸವಿಲ್ಲದೆ ಕಂಗಾಲಾಗಿರುವ ಕಟ್ಟಡ ಕಾರ್ಮಿಕರಿಗೆ ಪರಿಹಾರ ಧನ ರೂ,10,000 ಮಾಸಿಕವಾಗಿ ಕಾರ್ಮಿಕ ಇಲಾಖೆಯಿಂದ ವಿತರಿಸಬೇಕು. ಕರಾವಳಿ ಮರಳು ನೀತಿ ಜಾರಿಯಾಗಬೇಕು ಎಂದು ಒತ್ತಾಯಿಸಲಾಗಿದೆ.
ಮೂಡುಬಿದ್ರಿ ಬೀದಿಯಲ್ಲಿ ಕಟ್ಟಡ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಸಲಾಯಿತು.
ಪ್ರದರ್ಶನಗಾರರನ್ನು ಉದ್ದೇಶಿಸಿ ಫೆಡರೇಷನ್ ಜಿಲ್ಲಾ ಅಧ್ಯಕ್ಷ ವಸಂತ ಆಚಾರಿ ಮಾತನಾಡುತ್ತಾ ಅಕ್ರಮ ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರಗಳಿಗೆ ನಮ್ಮ ಸಂಘಟನೆ ವಿರೋಧಿಸುವುದಿಲ್ಲ. ಆದರೆ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ , ಬಡಜನರಿಗೆ ತೊಂದರೆ ಆಗಿರುತ್ತದೆ. ಕೆಲಸವಿಲ್ಲದ ಕಾರ್ಮಿಕರಿಗೆ ಇಲಾಖೆಯಿಂದ ರೂ 10,000 ಪರಿಹರಿಸಬೇಕು. ಕರ್ನಾಟಕ ರಾಜ್ಯ ಸರಕಾರ ಆದಷ್ಟು ಬೇಗ ಕರಾವಳಿ ಮರಳು ನೀತಿಯನ್ನು ತರಬೇಕು. ಶಾಸಕರು,ಸಚಿವರು ಕೂಡಲೇ ಕಾರ್ಯಪ್ರವ್ರತ್ತರಾಗಬೇಕು ಎಂದು ಒತ್ತಾಯಿಸಿದರು.
ರೈತ ಮುಂದಾಳು ಕೆ ಯಾದವ ಶೆಟ್ಟಿ ಮಾತನಾಡುತ್ತಾ, ಕಟ್ಟಡ ಕಾರ್ಮಿಕರ ಹೋರಾಟಕ್ಕೆ ಸಂಪೂರ್ಣ ಬೆಂಬಲ ಇದೆ. ವಿಪರೀತ ಬೆಲೆ ಏರಿಕೆಯಿಂದ ಕಚ್ಚಾ ವಸ್ತುಗಳ ಕೊರತೆಯಿಂದ ಬಡವರು ಕಂಗಾಲಾಗಿದ್ದಾರೆ. ಇತರೆ ವ್ಯಾಪಾರಕ್ಕೆ ತೊಂದರೆ ಯಾಗಿದೆ. ಜಿಲ್ಲಾಡಳಿತ ಸ್ಫಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಪ್ರದರ್ಶನದ ನೇತೃತ್ವವನ್ನು ಸಮಿತಿಯ ಮುಂದಾಳುಗಳಾದ ಗಿರಿಜಾ,ಲಕ್ಷ್ಮಿ, ಶಂಕರ ವಾಲ್ಪಾಡಿ, ಕೃಷ್ಣಪ್ಪ ಪೂಜಾರಿ, ದಿವಾಕರ ನಿಡ್ಡೋಡಿ, ಜಯಾನಂದ ಮಾರೂರು, ವಾಸುದೇವ ಆಚಾರಿ, ಸುಂದರ, ಸುಧಾಕರ, ಅಬ್ದುಲ್ ಸಲೀಂ, ಸದಾನಂದ ಮುರಕೋಡಿ ಮುಂತಾದವರು ವಹಿಸಿದ್ದರು.
ಕಾರ್ಯದರ್ಶಿ ಶಂಕರ ವಾಲ್ಪಾಡಿ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ಕೃಷ್ಣಪ್ಪ ನಡಿಗುಡ್ಡೆ ಧನ್ಯವಾದವಿತ್ತರು.






























