ಕಾರ್ಕಳ : ತಾಲೂಕು ಕಾನೂನು ಸೇವೆಗಳ ಸಮಿತಿ ಕಾರ್ಕಳ ಮತ್ತು ವಕೀಲರ ಸಂಘ ಕಾರ್ಕಳ ಇವರ ಜಂಟಿ ಆಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಆಚರಿಸಲಾಯಿತು.
ಸಮಾರಂಭವನ್ನು ಉದ್ಘಾಟಿಸಿದ ಮಾತನಾಡಿದ ಸಂಚಾರಿ ನ್ಯಾಯಾಲಯ ಕಾರ್ಕಳ, ಉಡುಪಿ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ದಿನೇಶ್ ಹೆಗ್ಡೆ , ಮಹಿಳೆಯರಿಗೆ ಶೇ 33 ಮೀಸಲಾತಿ ನೀಡಿರುವುದು ಸಾಲದು ಮಹಿಳೆಯರು ಸಹ ಪುರುಷರಷ್ಟೇ ಸಮಾನರು ಮಹಿಳೆಯರಿಗೆ ಶೇಕಡಾ 50 ಮೀಸಲಾತಿ ನೀಡಬೇಕೆಂದು ಆಗ್ರಹಿಸಿದರು.
ಸಮಾರಂಭದಲ್ಲಿ ಹಿರಿಯ ಮಹಿಳಾ ನ್ಯಾಯವಾದಿ ರೇಖಾ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷ್ಯತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಸುನೀಲ್ ಕುಮಾರ್ ಶೆಟ್ಟಿ ಮಾತನಾಡಿ, ಕಾರ್ಕಳದ ನ್ಯಾಯಾಲಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಇದೇ ಪ್ರಥಮ ಬಾರಿಗೆ ಇಷ್ಟು ವಿಜೃಂಭಣೆಯಿಂದ ಆಚರಿಸಲಾಯಿತು ಎಂದು ತಿಳಿಸಿದರು.
ಗೌರವ ಉಪಸ್ಥಿತರಿದ್ದ ಕಾರ್ಕಳದ ಹಿರಿಯ ನ್ಯಾಯವಾದಿ ಎಂ. ಕೆ. ವಿಜಯಕುಮಾರ್ ಅವರು ಸನ್ಮಾನಿತರಾದ ತನ್ನ ಶಿಷ್ಯ ರೇಖಾ ಡಿ. ಹೆಗ್ಡೆಯವರು ಬಾಳನ್ನು ಮತ್ತು ವೃತ್ತಿಯನ್ನು ನಿಭಾಯಿಸಿದ ಬಗ್ಗೆ ಮಾತನಾಡಿದರು.
ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶೆ ಶರ್ಮಿಳಾ ಸಿ.ಎಸ್. ಮತ್ತು ಪ್ರಧಾನ ಸಿವಿಲ್ ನ್ಯಾಯಾಧೀಶೆ ಕೋಮಲ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನ್ಯಾಯವಾದಿ ಪರಿತೋಷ್ ಡಿ. ಜೈನ್ ವಂದಿಸಿದರು.






































