ಕೊನೆಗೂ ಭಯಪಟ್ಟ ಬಿಜೆಪಿ ಹೈಕಮಾಂಡ್
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದ ಮುಂದಿನ ಆರು ವರ್ಷಗಳ ಕಾಲ ಪ್ರಾಥಮಿಕ ಸದಸ್ಯತನದಿಂದಲೇ ಕಿತ್ತುಹಾಕುವುದರೊಂದಿಗೆ ಬಿಜೆಪಿಯ ಸಧ್ಯದ ಬೆಳವಣಿಗೆಗಳಿಂದ ಮುಂದಿನ ದಿನಗಳಲ್ಲಿ ಪಕ್ಷಕ್ಕೆ ಬಹುಮತಗಳ ಗೆಲುವು ಕೂಡ ಕಷ್ಟವಾಗಿದೆ ಎನ್ನುವುದನ್ನು ಅರ್ಥಮಾಡಿಕೊಂಡಿತು.
ತಾನು ಮುಖ್ಯಮಂತ್ರಿಯಾದರೆ ಒಂದು ಸಾವಿರ ಡೋಜರ್ ಗಳನ್ನು ತರಿಸಿಡುತ್ತೇನೆ ಎಂದಿದ್ದ ಬಿ ಜೆ ಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಹೇಳಿಕೆಯ ನಂತರದ ಇಪ್ಪತ್ತನಾಲ್ಕು ಘಂಟೆಗಳಲ್ಲೇ ಉಚ್ಛಾಟನೆಯ ಆದೇಶ ಕೈಸೇರಿತು. ಅದೊಂದು ಹಿಂದುತ್ವದ ಜೋರು ಘರ್ಜನೆಯಾಗಬಹುದೇನೋ ಎಂದು ಪರಿಗಣಿಸಬಹುದಾಗಿದ್ದರೂ, ಕರ್ನಾಟಕದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳೇನೇ ಇದ್ದರೂ ಸಿದ್ಧರಾಮಯ್ಯನವರ ಆಡಳಿತದ ನಿರ್ಣಯಗಳು,ಯೋಜನೆಗಳು ಬಿಜೆಪಿಯನ್ನು ಬಲವಾಗಿ ಹೆಜ್ಜೆಯೂರುವುದಕ್ಕೂ ಆಗದ ಸ್ಥಿತಿಗೆ ತಂದಿಟ್ಟಿದೆ ಅನ್ನುವ ಸತ್ಯ ಬಿಜೆಪಿಯ ಹೈಕಮಾಂಡಿಗೆ ಗೊತ್ತಾಗಿ ತಿಂಗಳುಗಳೇ ಮುಗಿದಿವೆ.
ಯತ್ನಾಳ್ ಮಾತು ,ನಡೆಗಳನ್ನು ಬೆಂಬಲಿಸುವ ರೀತಿಯಲ್ಲಿ ಸಿದ್ಧರಾಮಯ್ಯನವರ ಕಾಂಗ್ರೆಸ್ ವರ್ತಿಸಿಕೊಳ್ಳುವುದನ್ನೂ ಬಿಜೆಪಿ ಗಮನಿಸುತ್ತಲೇ ಬಂದಿದೆ. ಹಾಗಂತ ಯತ್ನಾಳ್ ಇನ್ನೇನು ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲವಂತೂ ಸ್ಪಷ್ಟ.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರೂ ಒಟ್ಟಾಗಿಯೇ ಇದ್ದಾರೆ.ಡಿ. ಕೆ. ಶಿವಕುಮಾರ್ ತಾನಾಗಿಯೇ ಒಮ್ಮೆ ಬುಸುಗುಟ್ಟುವ ನಾಗರಹಾವಾಗುವುದು ಮಗದೊಮ್ಮೆ ಕೇರೆ ಹಾವು ತರ ಬೇಲಿಸುತ್ತುವುದರ ದೌರ್ಬಲ್ಯ ಏನೇ ಇದ್ದರೂ ರಾಜ್ಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗುವುದಿಲ್ಲ. ಅದಕ್ಕಾಗಿ ಬಿಜೆಪಿ ತಾನು ಗಢಸಾಗುತ್ತದೆ ಅಂತ ತೋರಿಸಿಕೊಳ್ಳುವುದಕ್ಕಾಗಿ ಯತ್ನಾಳರನ್ನು
ಉಚ್ಛಾಟನೆ ಮಾಡಿದೆ. ಅವರು ಬಿ. ಎಲ್. ಸಂತೋಷರ ಕಟ್ಟಾ ಅನುಯಾಯಿಯಾಗಿದ್ದು, ಯೆಡ್ಯೂರಪ್ಪರಿಗೆ ಚುಚ್ಚಲು ಯತ್ನಾಳರ ಹರಕು ಬಾಯಿಯನ್ನು ಬಾಣದ ರೂಪದಲ್ಲಿ ಸಂತೋಷ್ ಬಳಸುತ್ತ ಬಂದಿದ್ದಾರೆ. ಯೆಡಿಯೂರಪ್ಪ ಮತ್ತವರ ಮಗನಿಗೆ ಕಡ್ಡಿ ಮುರಿದಂತೆ ವಿರೋಧ ಪದ ಬಳಸಿ ಮಾತಾಡಬೇಕಾದರೆ ಇತರ ಯಾರಿಗಿಂತಲೂ ಯತ್ನಾಳ್ ಯೋಗ್ಯ ಎಂದೇ ಬಿ. ಎಲ್. ಸಂತೋಷ್ ಆಯ್ಕೆ ಮಾಡಿಕೊಂಡಿದ್ದರು.
ರಾಜ್ಯ ಬಿಜೆಪಿಯಲ್ಲಿ ಏನೂ ಬಲವಿಲ್ಲ, ಕಾಂಗ್ರೆಸ್ ಕಾರ್ಯಕ್ರಮ,ಭ್ರಷ್ಟಾಚಾರ ಮುಂತಾದ್ದನ್ನು ಪ್ರಬಲವಾಗಿ ವಿರೋಧಿಸುವ ನಾಯಕತ್ವ ಇಲ್ಲ, ಸದನದೊಳಗೆ ಕೂಡ ಒಬ್ಬಿಬ್ಬರು ಮಾತಾಡಿದರೂ ವಿಪಕ್ಷ ನಾಯಕ ಆರ್. ಅಶೋಕ್, ಮಾತಿಗೆ ನಿಂತವರ ಅಂಗಿ ಹಿಡಿದೆಳೆದು ಕೂರಿಸುತ್ತಾರೆ. ಪಕ್ಷ ಬೆಳೆಯುವುದಿರಲಿ ಕಾಂಗ್ರೆಸ್ಸಿಗೆ ಬೈಯುವುದಕ್ಕೂ ಆಗದಷ್ಟು ಸವೆದಿದೆ ಎಂದು ಹೈಕಮಾಂಡಿಗೆ ಅರ್ಥವಾಗಿದೆ.
ಪಕ್ಷದ ಪ್ರಭಾವಿ ಹಿರಿಯರೊಬ್ಬರ ಬೆಂಬಲದಿಂದಲೇ ಅಷ್ಟೆಲ್ಲ ಖಡಕ್ ಮಾತುಗಳಿಂದ ವಿಜಯೇಂದ್ರ ಸಾರಥ್ಯವನ್ನು ವಾಚಾಮಗೋಚರವಾಗಿ ನಿಂದಿಸುತ್ತಿದ್ದ ಯತ್ನಾಳ್ ಅವರನ್ನು ನಿಷ್ಠೂರವಾಗಿ ಉಚ್ಛಾಟನೆ ಮಾಡಿದೆ. ಇನ್ನೇನಿದ್ದರೂ ಯತ್ನಾಳರದ್ದು ಒಂಟಿ ಕಾಗೆಯ ಧ್ವನಿ ಅಷ್ಟೆ.
-ವಿ. ಕೆ. ವಾಲ್ಪಾಡಿ






































