ವಿಷ್ಣುವಿನ ಸುದರ್ಶನ ಚಕ್ರದಿಂದ ಕತ್ತರಿಸಲ್ಪಟ್ಟ ಅಸುರನ ರುಂಡ ರಾಹು ಹಾಗೂ ಮುಂಡ ಕೇತುವಾಯ್ತು .ಹಾಗೂ ವಿಷ್ಣುವಿನ ವರ ಪ್ರಸಾದದಿಂದ ಅಮರತ್ವ ಹಾಗೂ ಗ್ರಹತ್ವ ಪ್ರಾಪ್ತಿಯಾಯ್ತು. ಪ್ರಶ್ನ ಶಾಸ್ತ್ರದಲ್ಲಿ ಈತನದ್ದು ಮಹತ್ವದ ಸ್ಥಾನ .ಈತನಿಂದ ಗಣಪತಿಯನ್ನು ಚಿಂತನೆ ಮಾಡುವ ಸಂಪ್ರದಾಯ ಬೆಳೆದು ಬಂದಿದೆ .ಈತನು ಕ್ಷುದ್ರ ಅಭಿಚಾರದ ಸಂಕೇತ .ಈತನ ದಶಾಕಾಲದಲ್ಲಿ ಕೇತುವು ಅನಿಷ್ಟಸ್ಥಾನ ಸ್ಥಿತನಾದರೆ [8, 12,1,,5, 7 ]ದೀನರು ವಿವೇಕ ಕಳೆದು ಕೊಳ್ಳುವವರೂ ,ನಾನಾ ರೋಗದಿಂದ ಹೆಚ್ಚಾದ ದೇಹ ತಾಪವುಳ್ಳವರೂ ,ಪಾಪಬುದ್ಧಿಯುಳ್ಳವರೂ ,ಚಾರಿತ್ರ್ಯ ಹೀನರೂ ,ಮೂರ್ಖರೂ ಆಗುವರು .ಅದೇ ಕೇತುವು ಶುಭ ಸ್ಥಾನ ಸ್ಥಿತನಾದರೆ ಬಂಧು ಮಿತ್ರರ ಸಂಯೋಗ ,ವಿದ್ಯಾಸುಖ ರಾಜಸ್ನೇಹ ,ಭೂಲಾಭ ,ಆಕಸ್ಮಿಕ ಧನಲಾಭ ,ವಿಪುಲ ಕೀರ್ತಿ ,ಆರೋಗ್ಯಭಾಗ್ಯ ,ಕೀರ್ತಿಯನ್ನು ನೀಡುತ್ತಾನೆ .
ಅಶ್ವಿನಿ,ಮಖಾ ,ಮೂಲ ನಕ್ಷತ್ರದಲ್ಲಿ ಕೇತು ದಶೆ ಆರಂಭವಾಗುವುದು .ಈ ಮೂರು ನಕ್ಷತ್ರಗಳಿಗೆ ಇವನು ಅಧಿಪನಾಗಿದ್ದಾನೆ .ಮಗುವಿನ ಜಾತಕದಲ್ಲಿ ಪಂಚಮದಲ್ಲಿರುವಾಗ ಅದು ಪಿತಾಮಹನಿಗೆ ದೋಷವಾಗಿದೆ. ಕೇತುವಿನಿಂದ ಫಲಚಿಂತನೆ ಮಾಡುವಾಗ ಕೇತುವಿನ ಫಲ,ಕೇತುವಿರುವ ರಾಶ್ಯಾಧಿಪತಿಯ ಫಲ ಹಾಗೂ ಕುಜನ ಫಲವನ್ನು ಚಿಂತಿಸಬೇಕು . ಕೇತುವಿನೊಂದಿಗೆ ಮಾಂದಿ ಸೇರಿದಾಗ ದೋಷಪ್ರದ .ದರ್ಭೆ ಈತನ ಸಮಿಧೆಯಾಗಿದೆ . ಕೇತುವು ಗೋಚಾರದಲ್ಲಿ ಮೂರು, ಆರು,ಹನ್ನೊಂದರ ಸ್ಥಾನದಲ್ಲಿ ಶುಭ ಫಲವನ್ನು ನೀಡುವನು .ಕೇತುವಿನ ಅನಿಷ್ಟ ಸ್ಥಾನದ ದೋಷಪರಿಹಾರಕ್ಕಾಗಿ ವೈಡೂರ್ಯ ಧಾರಣೆ –ದಾನ ಮಾಡಬಹುದು .17,000 ಕೇತು ಮಂತ್ರ ಜಪ ,ಗಣಪತಿಮಂತ್ರ ಜಪ ,ಗಣಹೋಮ ,ಗಣಪತಿ ಅಥರ್ವಶೀರ್ಷ ಪಠಣ ,ಹೋಮ ,ಕೇತು ಶಾಂತಿ ,ಗಣಪತಿಗೆ ಗರಿಕೆಯನ್ನು ಅರ್ಪಣೆ ಮಾಡುತ್ತಾ ಬರಬಹುದು . ಹುರುಳಿ ದಾನ ,ಕೆಂಪು ಬಣ್ಣದ ಅಥವಾ ನಾನಾ ವರ್ಣಮಯ ವಸ್ತ್ರದ ದಾನದಿಂದಲೂ ಶುಭವಾಗುವುದು .

1.ಕೇತು ಜನ್ಮ ರಾಶಿಯಲ್ಲಿ : -ಪಾಪ ಗ್ರಹರು ಜನ್ಮ ರಾಶಿಯಲ್ಲಿ ಸಂಚರಿಸುವಾಗ ದೇಹಾರೋಗ್ಯದಲ್ಲಿ ವ್ಯತ್ಯಾಸಗಳು ಉಂಟಾಗುವುದು.ಮನಸ್ಸಿಗೆ ಅಸಮಾಧಾನ ಹಾಗೂ ಇತರರೊಂದಿಗೆ ಅನಗತ್ಯವಾಗಿ ವಿವಾದಗಳು ಉಂಟಾಗುವುದು .ಕೆಲವು ಕಾರ್ಯಗಳಲ್ಲಿ ಅಪಜಯ,ಹಿನ್ನೆಡೆಗಳು ತೋರುವುದು .ಋಣಾತ್ಮಕವಾದ ಚಿಂತನೆಗಳನ್ನು ನೀವು ನಿವಾರಿಸಿ ಕೊಳ್ಳಬೇಕಾಗಿದೆ .
2.ಜನ್ಮ ರಾಶಿಯಿಂದ ದ್ವಿತೀಯಾದಲ್ಲಿ : ಎರಡನೇ ಮನೆಯು ಸಂಪತ್ತು ಹಾಗೂ ಕುಟುಂಬವನ್ನು ಸೂಚಿಸುವ ರಾಶಿಯಾಗಿದೆ .ಈ ರಾಶಿಯಲ್ಲಿ ಕೇತುವು ಸಂಚರಿಸುವಾಗ ನಿಮ್ಮ ಮಾತಿನಲ್ಲಿ ಹಾಗೂ ಚಟುವಟಿಕೆಯಲ್ಲಿ ಬದಲಾವಣೆ ಕಾಣುವುದು. ನಿಮ್ಮ ಮಾತುಗಳನ್ನು ಈ ಕಾಲದಲ್ಲಿ ಇತರರು ನಿಸ್ಸಾರವೆಂದು ಪರಿಗಣಿಸುವ ಸಾಧ್ಯತೆ ಇದೆ,.ಆಹಾರ ವಿಷಯದಲ್ಲಿ ,ಮಾತಿನ ವಿಷಯದಲ್ಲಿ ,ಹಣದ ವಿಷಯದಲ್ಲಿ ಎಚ್ಚರಿಕೆಯ ಹೆಜ್ಜೆ ಅಗತ್ಯವಾಗಿದೆ .
3.ಜನ್ಮ ರಾಶಿಯಿಂದ ತೃತೀಯಾದಲ್ಲಿ : ಈ ಕಾಲ ಘಟ್ಟದಲ್ಲಿ ನಿಮಗೆ ಅಭಿವೃದ್ಧಿಗಳು ಉಂಟಾಗುವುದು .ಧೈರ್ಯವು ಉಂಟಾಗುವುದು .ಸಕಲ ಕಾರ್ಯಗಳಲ್ಲಿಯೂ ಯಶಸ್ಸು ಉಂಟಾಗುವುದು. ನೂತನವಾದ ಯೋಜನೆಗಳು ಅಭಿವೃದ್ಧಿಯಾಗುವುದು .ಸಹೋದರರಿಂದಲೂ ಸುಖವನ್ನು ಹೊಂದ ಬಹುದು .ಉತ್ತಮವಾದ ಭೋಜನವನ್ನು ಸವಿಯುವ ಅವಕಾಶ ಸಿಗಲಿದೆ.
4.ನಿಮ್ಮ ಜನ್ಮ ರಾಶಿಯಿಂದ ಕೇತು ಚತುರ್ಥದಲ್ಲಿಇರುವಾಗ : ಈ ಕಾಲಘಟ್ಟದಲ್ಲಿ ನಿಮಗೆ ಶರೀರದಲ್ಲಿ ಕೆಲವೊಮ್ಮೆ ವೃಣಗಳು ಹಾಗೂ ಗಾಯಗಳು ಉಂಟಾಗುವುದು .ಶಾರೀರಿಕ ಹಾಗೂ ಮಾನಸಿಕ ಬಲವು ಕಡಿಮೆಯಾಗಲಿದ್ದು ಬೇಗನೆ ಹೆದರಿಕೊಳ್ಳುವಿರಿ . ದೃಷ್ಟಿ ದೋಷ ,ಕೃತ್ರಿಮ ದೋಷದ ಅರಿವು ಉಂಟಾಗಲಿದೆ . ಸಣ್ಣ ಮಕ್ಕಳು ಒಮ್ಮೆಲೇ ಬೆಚ್ಚಿ ಬೀಳುವರು ,ಪಂಚ ಲೋಹದ ಬಳೆ,ಉಂಗುರ ,ಕಪ್ಪು ಚುಕ್ಕಿ ಇಡುವ ,ಇಡಿಸೂಡಿ ಕಡ್ಡಿಯಿಂದ ಹೊಗೆ ಹಿಡಿಯುವ ಪದ್ಧತಿ ಇದೆ .
5.ನಿಮ್ಮ ಜನ್ಮ ರಾಶಿಯಿಂದ ಕೇತು ಪಂಚಮದಲ್ಲಿಇರುವಾಗ : ಈ ಕಾಲಘಟ್ಟದಲ್ಲಿ ನಿಮಗೆ ಮಾನಸಿಕವಾಗಿ ಸ್ವಲ್ಪಮಟ್ಟಿಗೆ ಖಿನ್ನತೆಯೂ ಉಂಟಾಗುವುದು.ಮಕ್ಕಳ ವಿಷಯದಲ್ಲಿ ಕೆಲವೊಮ್ಮೆ ಬೇಸರಗೊಳ್ಳುವಿರಿ .ಸಮಯಕ್ಕೆ ಸರಿಯಾಗಿ ಆಹಾರವನ್ನು ಸೇವಿಸದೆ ಇದ್ದಲ್ಲಿ ಪಿತ್ತ ಹಾಗೂ ಉದರ ಸಂಬಂಧಿ ಸಮಸ್ಯೆಗಳಿಗೆ ಕಾರಣವಾಗುವುದು.ಧನ ಆದಾಯ ಹಾಗೂ ಜನಸಂಪರ್ಕ ಉತ್ತಮವಿದ್ದರೂ ಕೆಲವೊಂದು ತೊಂದರೆಗಳಿಂದ ನಿಮಗೆ ಸಾಮೂಹಿಕವಾಗಿ ಉತ್ಸಾಹದಿಂದ ವರ್ತಿಸಲು ಕಷ್ಟವಾಗುವುದು . ಮಕ್ಕಳು ಓದುವುದರಲ್ಲಿಆಸಕ್ತಿಯನ್ನೂ ಕಳೆದುಕೊಳ್ಳುವರು ಸಂತಾನ ಸಮಸ್ಯೆ ಬಂದಲ್ಲಿ ಬಾಲಗಣಪತಿ ಹೋಮವನ್ನು ಮಾಡಬೇಕಾಗುತ್ತದೆ .
6.ನಿಮ್ಮ ಜನ್ಮ ರಾಶಿಯಿಂದ 6 ನೇ ಮನೆಯಲ್ಲಿದ್ದಾಗ ಕೇತು ಬಂದಾಗ : ಈ ಸಮಯದಲ್ಲಿ ರಾಹು ವ್ಯಯ ಸ್ಥಾನದಲ್ಲಿ ಇರುತ್ತಾನೆ .ಸ್ವಾಭಾವಿಕವಾಗಿಯೇ ಆಯವ್ಯಯ ಸಮನಾಗಿ ಇರುತ್ತದೆ .ಬಿದ್ದು ಅಪಾಯವಾಗುವ ಸಾಧ್ಯತೆ ಇರುವುದರಿಂದ ವೈರಿಗಳ ಕಿರಿ ಕಿರಿ ಇರುವುದರಿಂದ ಆರೋಗ್ಯದ ಸಮಸ್ಯೆ ಬರುವುದರಿಂದ ಎಚ್ಚರವಾಗಿರಬೇಕು. ನಾಗ ದೇವರ ಸ್ಮರಣೆ ಅಗತ್ಯವಾಗಿರುತ್ತದೆ . ರಾತ್ರಿ ಸಂಚಾರ ಬೆಳಕಿಲ್ಲದೆ ಹೋಗುವುದನ್ನು ನಿಲ್ಲಿಸಿರಿ .
7.ನಿಮ್ಮ ಜನ್ಮ ರಾಶಿಯಿಂದ ಕೇತು ಸಪ್ತಮದಲ್ಲಿ ಇದ್ದಾಗ : ಈ ಕಾಲ ಘಟ್ಟದಲ್ಲಿ ಹೊಕ್ಕಳಿನ ಕೆಳಭಾಗದಲ್ಲಿ ಹೊಟ್ಟೆ ಹಾಗೂ ಮೂತ್ರಾಶಯಕ್ಕೆ ಸಂಬಂಧಿಸಿದ ತೊಂದರೆಗಳು ಬರುವ ಸಾಧ್ಯತೆ ಇರುತ್ತದೆ. ಪತ್ನೀ /ಪತಿ ಸುಖವೂ ಅಲ್ಪವಾಗಿದ್ದು ದಾಂಪತ್ಯದಲ್ಲಿ ಸುಖವು ಅಲ್ಪವಾಗಿ ಕಂಡು ಬರುವುದು . ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದು ಕೊಳ್ಳುವಾಗ ತಮ್ಮ ಹಿತೈಷಿಗಳಿಂದ ಸಲಹೆ ತೆಗೆದು ಕೊಳ್ಳುವುದು ಅವಶ್ಯವಾಗಿದೆ “ಅಹಂ “ ಕಾರದಿಂದ ಹೊರಗೆ ಬರಬೇಕು .
8.ನಿಮ್ಮ ಜನ್ಮ ರಾಶಿಯಿಂದ ಅಷ್ಟಮದಲ್ಲಿಕೇತು ಇರುವಾಗ : “ಅಷ್ಟಮ ಎಂದರೆ ಕಷ್ಟಮ “ಎಂಬ ವಾಡಿಕೆ ಮಾತಿದೆ . ಮನೆಯವರೊಂದಿಗೆ ಹಾಗೂ ಇತರ ವ್ಯಕ್ತಿಗಳೊಂದಿಗೆ ಭಿನ್ನಾಭಿಪ್ರಾಯ ಮೂಡುವುದು .ಕಠಿಣ ಸ್ವಭಾವ ಪ್ರದರ್ಶಿಸುವಿರಿ . ಇತರರ ಮನಸ್ಸಿಗೆ ಇದು ನೋವಾಗುವುದು ಎಂಬ ಸಾಮಾನ್ಯ ಅರಿವು ನಿಮಗಿರಬೇಕು .ಯಾರೋ ಮಾಟ ,ಕೃತ್ರಿಮ ಮಾಡಿದ್ದಾರೆ ಎಂದು ಉಚ್ಚಾಟಣೆ ಮಾಡುವವರಲ್ಲಿ ಓಡುವಿರಿ.ಹೋಮ ಹವನಕ್ಕೆ ಒಂದಷ್ಟು ಸಾವಿರ, ಲಕ್ಷ ರೂಪಾಯಿ ಸುರಿಯುವಿರಿ .ಒಂದೂವರೆ ವರ್ಷಗಳ ಕಾಲ ಇರುವ ಈ ಕಾಲದಲ್ಲಿ ಗಣಪತಿಯ ಸೇವೆ ಮಾಡಿರಿ .
9.ನಿಮ್ಮ ಜನ್ಮ ರಾಶಿಯಿಂದ ನವಮದಲ್ಲಿ ಕೇತು ಇರುವಾಗ : ಪಾಪ ಗ್ರಹನಾದ ಕೇತು ನವಮದಲ್ಲಿ ಸಂಚಾರ ಮಾಡುವಾಗ ನಿಮ್ಮಲ್ಲಿ ಕತಣ ಸ್ವಭಾವ ಹಾಗೂ ಆಲಸ್ಯವು ಉಂಟಾಗುವುದು. ನಿಮ್ಮ ಹಿರಿಯರಲ್ಲಿ ಒಬ್ಬರಿಗೆ ಅನಾರೋಗ್ಯವು ಉಂಟಾಗುವುದು .ಧಾರ್ಮಿಕ ಕಾರ್ಯದಲ್ಲಿ ಭಾಗವಹಿಸುವ ಅವಕಾಶಗಳು ಇದ್ದರೂ ಸಕ್ರಿಯರಾಗಿ ಭಾಗವಹಿಸಲು ಕಷ್ಟವಾಗುವುದು. ಆರೋಗ್ಯದ ವಿಚಾರದಲ್ಲಿ ಎಚ್ಚರವಿರಬೇಕು .
10..ನಿಮ್ಮ ಜನ್ಮ ರಾಶಿಯಿಂದ ದಶಮದಲ್ಲಿ ಕೇತು ಬಂದಾಗ :ನಿಮ್ಮ ಸ್ತಾನಮಾನಗಳು ಅಭಿವೃದ್ಧಿಯಾಗುವುದು .ಮನಸ್ಸು ಸಂತೋಷದಿಂದ ಇರುವುದು .ನಿಮ್ಮ ಮಕ್ಕಳೂ ಸಾಂಪತ್ತಿಕ ಅಭಿವೃದ್ಧಿಯಿಂದ ಇರುವರು.ಮನೆಯಲ್ಲಿ ಮಂಗಳ ಕಾರ್ಯಗಳು ಸತ್ಕರ್ಮಗಳು ನಡೆಯುವುವು . ಕೆಲವೊಮ್ಮೆ ನೀವು ತೆಗೆದು ಕೊಳ್ಳುವ ಕಠಿಣ ನಿರ್ಧಾರಗಳು ಬಂಧುಗಳಿಗೆ ಇಷ್ಟವಾಗಲಾರದು .ಆ ಬಗ್ಗೆ ಎಚ್ಚರದಿಂದ ಮುಂದುವರಿಯಿರಿ .
11.ಕೇತುವು ನಿಮ್ಮ ಜನ್ಮ ರಾಶಿಯಿಂದ ಏಕಾದಶದಲ್ಲಿ ಬಂದಾಗ :ಇದು ಲಾಭ ಸ್ತಾನವೆಂದು ಕರೆಯಲ್ಪಡುವುದು .ನಿಮಗೆ ಅನೇಕ ಮೂಲಗಳಿಂದ ಲಾಭಗಳು ಉಂಟಾಗುವುದು .ಸತ್ಕರ್ಮಗಳಲ್ಲಿ ಆಸಕ್ತಿಯನ್ನೂ ಹೊಂದುವಿರಿ . ತುಂಬಾ ಶ್ರೀಮಂತಿಕೆ ಬಂದಾಗ ಅದರ ಜೊತೆಗೆ “ಅಹಂ “ಬಾರದಂತೆ ಎಚ್ಚರವಿರ;ಲಿ .ಗೃಹ ,ವಾಹನಾದಿಗಳಲ್ಲಿ ಸುಖವು ಅಲ್ಪವಾಗಿ ಕಾಣುವುದು . ಉದಾಸೀನತೆ ಬರದಂತೆ ಎಚ್ಚರವಹಿಸಿರಿ .
12.ಕೇತುವು ನಿಮ್ಮ ಜನ್ಮ ರಾಶಿಯಿಂದ ಹನ್ನೆರಡನೆ ಮನೆಯಲ್ಲಿ ಬಂದಾಗ :ಉತ್ತಮ ಫಲವನ್ನು ಕೊಡಲಾರನು . ಧನ ವ್ಯಯ ಹಾಗೂ ನಷ್ಟಗಳು ಉಂಟಾಗುವುದು,.ಮನಸ್ಸಿಗೆ ಬೇಸರ ಉಂಟಾಗುವುದು ,ಸತ್ಕರ್ಮಗಳಲ್ಲಿ ಆಸಕ್ತಿಯು ಈ ಕಾಲದಲ್ಲಿ ಕಡಿಮೆ ಇರುವುದು .ಬೆಂಕಿ,ನೀರು ಹಾಗೂ ಲೋಹದ ವಸ್ತುಗಳಿಂದ ಅಪಾಯವಾಗುವ ಸಾಧ್ಯತೆ ಇರುತ್ತದೆ ಶರೀರಕ್ಕೆ ಗಾಯ ಆಗುವ ಸಾಧ್ಯತೆ ಇರುತ್ತದೆ . ಇತರರಿಗೆ ಹಣ ನೀಡುವಾಗ ಎಚ್ಚರವಿರಲಿ .ಬೇರೆಯವರ ಸಾಲಕ್ಕೆ ಜಾಮೀನು ಸಹಿ ಹಾಕುವಾಗ ಎಚ್ಚರವಿರಲಿ . ಮೊಬೈಲ್ ನಲ್ಲಿ ಬರುವ ಸುಳ್ಳು ಮಾಹಿತಿಗಳನ್ನು ನಂಬಿ ಹಣ ಕಳೆದು ಕೊಳ್ಳುವ ಸಾಧ್ಯತೆ ಇದೆ .






































