ನವೀಕೃತ ಶಿಲಾಮಯ ಶ್ರೀ ಚತುರ್ಮುಖ ಬ್ರಹ್ಮ ದೇವಸ್ಥಾನ, ಲಾಡಿ, ಮೂಡುಬಿದಿರೆ; ಬ್ರಹ್ಮಕಲಶೋತ್ಸವ : ಫೆಬ್ರವರಿ 12-16

Picture of RB NEWS

RB NEWS

Bureau Report

  • ವರದಿ : ರಾಯಿ ರಾಜಕುಮಾರ ಮೂಡುಬಿದಿರೆ

ವೈಶಿಷ್ಟ್ಯತೆಯ ಕ್ಷೇತ್ರ: ನಾಡಿನ ಮಾತ್ರವಲ್ಲ ದೇಶದ ಅಪರೂಪದ ಬ್ರಹ್ಮ ದೇವರ ಸಾನಿಧ್ಯ ಎನ್ನಲಾದ
ಶ್ರೀ ಬ್ರಹ್ಮ ದೇವರ ಸನ್ನಿಧಿಯ ಶಿಲಾಮೂರ್ತಿ ಹಂಸವಾಹನ, ಜಪಮಾಲೆ, ಅಮೃತಕಲಶ, ವೇದ ಪುಸ್ತಕಧಾರಿ, ಅಭಯ ಹಸ್ತ ಹೊಂದಿದ್ದು ಧನ್ವಂತರಿಯ ಸ್ವರೂಪದ ಅಪೂರ್ವ ಬ್ರಹ್ಮಶಿಲ್ಪವೆಂದು ತಜ್ಞರ ಅಂಬೋಣ. ದೇವಳದ ಮುಂಭಾಗದಲ್ಲಿ ಚಿತ್ರಕೂಟ ನಾಗಬನವು ವಿಶಿಷ್ಟನಾಗಶಿಲ್ಪಗಳಿಂದ ಕೂಡಿದೆ. ಅಪರೂಪದ ಚತುರ್ಮುಖ ಬ್ರಹ್ಮನ ದೇವಸ್ಥಾನ, ಪುರಾತನ ನಾಗ ಬ್ರಹ್ಮ ಬನ, ದೈವ ಬ್ರಹ್ಮ ಬಲಾಂಡಿಯ ಉಗಮ ಸ್ಥಾನ. ಈ ಪವಿತ್ರ ತಾಣದ ಪೂರ್ವ ಭಾಗದ ಅಂಗಜಾಲ ಬರ್ಕೆಯಲ್ಲಿ ಉಗಮ ಸ್ಥಾನ ಹೊಂದಿರುವ ಶಾಂಭವಿ ನದಿ ಈ ಲಾಡಿ ದೇವಸ್ಥಾನದ ಪರಿಸರದ ವಿಶೇಷ.

ದೋಣಿಂಜೆಗುತ್ತಿನ ಮಂತ್ರಿ ಸತ್ಯ ಬನ್ನಾಯ -ಲಕ್ಷ್ಮೀ ದಂಪತಿ ಈ ಚತುರ್ಮುಖ ಬ್ರಹ್ಮ ದೇವರಿಗೆ ಹರಕೆ ಹೊತ್ತು ಜನಿಸಿದ ಮಗು ನಾಡು. ಹೆತ್ತವರನ್ನು ಕಳೆದುಕೊಂಡ ನೋವಿನಿಂದ ನಾಸ್ತಿಕನಾದ ನಾಡು ಮುಂದೆ ಇದೇ ಕ್ಷೇತ್ರದಲ್ಲಿ ದೇವರ ಕೋಪಕ್ಕೆ ತುತ್ತಾಗಿ ದೇವಸ್ಥಾನದ ಪೂರ್ವ ದಿಕ್ಕಿನಲ್ಲಿರುವ ನೀರಿನ ಗುಂಡಿಯಲ್ಲಿ ಕುದುರೆಯೊಂದಿಗೆ ಶಿಲೆಯಾದ ಇತಿಹಾಸವಿದೆ. ಮುಂದೆ ಪೆರಾರದಲ್ಲಿ ಬಲಾಂಡಿ ದೈವವಾಗಿ ಅವತರಿಸಿರುವುದು ಇದೇ ನಾಡು.

ಅಭಿವೃದ್ಧಿ: ಅರುವತ್ತರ ದಶಕದಲ್ಲಿ ಸ್ಥಳೀಯ ಹೊಟೆಲ್ ಉದ್ಯಮಿ ಬಾಬು ಭಟ್ ಯಾನೆ ಶ್ರೀನಿವಾಸ ಭಟ್ಟರ ಹಿರಿತನದಲ್ಲಿ ಈ ಸ್ಥಳವನ್ನು ಅಭಿವೃದ್ಧಿಪಡಿಸಿ 1964 ರಲ್ಲಿ ಕಲ್ಲು ಹಂಚಿನ ದೇವಾಲಯ ನಿರ್ಮಾಣದ ಅಭಿವೃದ್ಧಿ ನಡೆದಿತ್ತು. ಮುಂದೆ 2000 ದಲ್ಲಿ ಮತ್ತೆ ದೇವಳ ಅಭಿವೃದ್ಧಿಪಡಿಸಿ ಬ್ರಹ್ಮಕಶಲ ನಡೆದಿದೆ. ತಂತ್ರಿಗಳ ದಾಖಲೆಯ ಹಿನ್ನೆಲೆಯಲ್ಲಿ 225 ವರ್ಷಗಳ ಇತಿಹಾಸದ ಹಿನ್ನೆಲೆ ಮೇಲ್ನೋಟಕ್ಕೆ ಕಾಣಸಿಗುತ್ತದೆ. ಆದರೆ ಐತಿಹಾಸಿಕವಾಗಿ ಹದಿಮೂರು ಶತಮಾನಗಳ ಇತಿಹಾಸ ಕ್ಷೇತ್ರಕ್ಕೆ ಇದೆ ಎನ್ನುವ ಕುರುಹುಗಳು ಇವೆ.


ಪರಿವಾರ ದೇವರು, ನಾಗ ಬನದ ಜೀರ್ಣೋದ್ಧಾರ, ಗಣಪತಿ, ನಾಡು, ದೈವದ ಗುಡಿಗಳ ಸಹಿತ ಕೆರೆ, ಬಾವಿ, ಗೋಪುರ, ಆವರಣ ಹೀಗೆ ಒಟ್ಟು 5 ಕೋಟಿ ಅಂದಾಜು ವೆಚ್ಚದ ಕಾಮಗಾರಿಗಳು ಭಜಕರು ಮತ್ತು ದಾನಿಗಳ ನೆರವಿನಿಂದ ನಡೆದಿವೆ. ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ ನೇತೃತ್ವದಲ್ಲಿ ಪದ್ಮನಾಭ ಶಿಲ್ಪಿ ಬಳಗವು ಇಲ್ಲಿನ ಒಟ್ಟು 5 ಸಾವಿರ ಅಡಿ ವಿಸ್ತಾರದಲ್ಲಿನ ಸಂಪೂರ್ಣ ಶಿಲಾಮಯ ಛಾವಣಿಯ ವಿಶಿಷ್ಟ ಗುಡಿ ಗೋಪುರಗಳನ್ನು ರೂಪಿಸಿದೆ.

ಇದೇ ಸಂದರ್ಭದಲ್ಲಿ ಪವಿತ್ರ ಪಾಣಿ ರಾಘವೇಂದ್ರ ರಾವ್,ಉಪಾಧ್ಯಕ್ಷ ಗಣೇಶ್ ರಾವ್, ವ್ಯವಸ್ಥಾಪಕ ಸಮಿತಿ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಸದಾನಂದ ಪೂಜಾರಿ, ಅರ್ಚಕ ಸುಧಾಕರ ಭಟ್ , ಪ್ರತಾಪ್ ಕುಮಾರ್, ಪುರಸಭೆಯ ಸುರೇಶ್ ಪ್ರಭು ಹಾಗೂ ಇತರರು ಹಾಜರಿದ್ದರು.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top