






ಉಳ್ಳಾಲ ಕೋಟೆಕಾರು ಬ್ಯಾಂಕ್ ದರೋಡೆ : ಮತ್ತೊಬ್ಬ ಆರೋಪಿಗೆ ಗುಂಡೇಟು
ಮಂಗಳೂರು: ಉಳ್ಳಾಲ ಕೋಟೆಕಾರ್ ಸಹಕಾರಿ ಬ್ಯಾಂಕ್ನಲ್ಲಿ ಚಿನ್ನಾಭರಣ, ನಗದು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೊಬ್ಬ ಆರೋಪಿ ಮೇಲೆ ಪೊಲೀಸರು ಗುಂಡೇಟು ದಾಳಿ ನಡೆಸಿದ್ದಾರೆ.
ಪ್ರಕರಣದ ಮಹಜರು ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮುರುಗನ್ ಡಿ ದೇವರ್ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ಮಂಗಳೂರು ಹೊರವಲಯದ ಉಳ್ಳಾಲದ ಅಜ್ಜಿನಡ್ಕ ಎಂಬಲ್ಲಿ ನಡೆದಿರುವ ಈ ಘಟನೆಯಲ್ಲಿ ಗಾಯಗೊಂಡ ಆರೋಪಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರೋಪಿ ದರೋಡೆಗೆ ಬಳಸಿದ್ದ ಪಿಸ್ತೂಲ್ ಅನ್ನು ಬಚ್ಚಿಟ್ಟಿದ್ದನು. ಅದನ್ನು ವಶಪಡಿಸಲು ಮುಂದಾದ ಪೊಲೀಸರು ಆತನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿದ್ದರು.

ಅದೇ ವೇಳೆ ಪೊಲೀಸ್ ಕಾನ್ಸ್ಟೆಬಲ್ ಓರ್ವರ ಮರ್ಮಾಂಗಕ್ಕೆ ಒದ್ದು ತಪ್ಪಿಸಿಕೊಳ್ಳುವುದಕ್ಕೆ ಆರೋಪಿ ಪ್ರಯತ್ನ ನಡೆಸಿದ್ದಾನೆ. ಘಟನೆಯಲ್ಲು ಪೊಲೀಸ್ ಕಾನ್ ಸ್ಟೇಬಲ್ ಮಂಜುನಾಥ ಗಾಯಗೊಂಡಿದ್ದಾರೆ.
ಆರೋಪಿ ಮುರುಗನ್ ಡಿ ದೇವರ್ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ಆತನ ಕಾಲಿಗೆ ಫಯರ್ ಮಾಡಿದ್ದಾರೆ.
ಜನವರಿ 17ರಂದು ಘಟನೆ….
ಹಾಡಹಗಲೇ ಬ್ಯಾಂಕ್ಗೆ ನುಗ್ಗಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಜನವರಿ 17 ರಂದು ಮಂಗಳೂರಿನ ಕೋಟೆಕಾರು ಸಹಕಾರಿ ಬ್ಯಾಂಕ್ಗೆ ನುಗ್ಗಿದ ಗ್ಯಾಂಗ್, ಕಾರ್ನಲ್ಲೇ ಎಸ್ಕೇಪ್ ಆಗಿತ್ತು. ಅದೇ ಗ್ಯಾಂಗ್ನ್ನು ಪೊಲೀಸರ ಬಲೆಗೆ ಬಿದ್ದಿತ್ತು. ಕೇರಳ ಮೂಲಕ ತಮಿಳುನಾಡು ಸೇರಿದ್ದ ಮುರುಗನ್ ಡಿ. ದೇವರ್, ಯೋಶುವಾ ರಾಜೇಂದ್ರನ್, ಕಣ್ಣನ್ ಮಣಿಯನ್ನ ಇತ್ತೀಚೆಗೆ ತಮಿಳುನಾಡಿನ ತಿರುವನ್ವೇಲಿಯಲ್ಲಿ ಬಂಧಿಸಲಾಗಿತ್ತು.
ಒಂದೇ ಪ್ರಕರಣದಲ್ಲಿ ಇಬ್ಬರಿಗೆ ಗುಂಡೇಟು…
ಇದೇ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಕೆಲ ದಿನಗಳ ಹಿಂದೆ ಕರ್ನಾಟಕ- ಕೇರಳ ಗಡಿಭಾಗವಾಗಿರುವ ತಲಪಾಡಿ ಅಲಂಗಾರು ಗುಡ್ಡದ ಬಳಿ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡಲಾಗಿತ್ತು .





ಆ ಸಂದರ್ಭದಲ್ಲಿ ಪ್ರಕರಣದ ಪ್ರಮುಖ ಆರೋಪಿ ಕಣ್ಣನ್ ಮಣಿ ಬಿಯರ್ ಬಾಟಲಿಯಿಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದನು. ಪರಿಣಾಮವಾಗಿ ಪಿಐ ಬಾಲಕೃಷ್ಣ, ಪಿಸಿ ನಿತಿನ್, ಸಿಸಿಬಿ ಸಿಬ್ಬಂದಿ ಅಂಜನಪ್ಪ ಗಾಯಗೊಂಡಿದ್ದರು.
ಕಾರ್ಯಪ್ರವೃತ್ತರಾದ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ರಫೀಕ್, ಆರೋಪಿ ಕಣ್ಣನ್ ಮಣಿ ಮೇಲೆ ಗುಂಡಿನ ದಾಳಿ ನಡೆಸಿದ್ದರು.
ಆ ಮೂಲಕ ಇದೀಗ ಇಬ್ಬರು ಆರೋಪಿಗಳಿಗೆ ಪೊಲೀಸರು ತಕ್ಕ ಪಾಠಕಲಿಸಿದ್ದಾರೆ. ಪೊಲೀಸರ ಕ್ರಮಕ್ಕೆ ನಾಗರಿಕರಿಂದ ಪ್ರಶಂಸೆ ವ್ಯಕ್ತಗೊಂಡಿದೆ.





















