

ಚೌಟರ ಅರಮನೆಯ ಆನೆಬಾಗಿಲು ಸುಸ್ಥಿತಿಗೆ
ವರದಿ: ರಾಯಿ ರಾಜಕುಮಾರ ಮೂಡುಬಿದಿರೆ


ಮೂಡುಬಿದಿರೆ: ಪುತ್ತಿಗೆಯಿಂದ ಆಳ್ವಿಕೆಯನ್ನು ನಡೆಸಿ ತದನಂತರ ಮೂಡುಬಿದಿರೆಗೆ ಆಗಮಿಸಿ ಚೌಟರು ಇಲ್ಲೊಂದಯ ಅರಮನೆಯನ್ನು ನಿರ್ಮಿಸಿದರು.
ಹದಿನೆಂಟು ಬಸದಿಗಳಂತೆ, ಹದಿನೆಂಟು ಮಾಗಣೆಗಳು, ಹದಿನೆಂಟು ಕೆರೆಗಳು, ಹದಿನೆಂಟು ದೇವಾಲಯಗಳು ಮೂಡುಬಿದಿರೆಯಲ್ಲಿವೆ.
ಅಂತಹ ಪ್ರಸಿದ್ಧ ಮೂಡುಬಿದಿರೆಯ ಚೌಟ ಅರಮನೆಯ ಎದುರು ನಿರ್ಮಿಸಿದ ಆನೆ ಬಾಗಿಲು ನಾಲ್ಕಾರು ತಿಂಗಳ ಹಿಂದೆ ಲಾರಿಯ ಹೊಡೆತಕ್ಕೆ ಸಿಲುಕಿ ಜರ್ಝರಿತವಾಗಿತ್ತು.
ತನ್ನ ತಲೆ, ಕೈ, ಮೈ ಗಾಯಗೊಂಡ ಆನೆ ಬಾಗಿಲ ಪರಿಸ್ಥಿತಿ ಕಂಡು ಬೇಸರಗೊಂಡ ಅರಮನೆಯ ಕುಲದೀಪ್ ಎಂ ರವರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನೂತನವಾಗಿ ಹಳೆಯ ರೂಪಕ್ಕೆ ಮುಕ್ಕಾಗದಂತೆ ಆನೆ ಬಾಗಿಲನ್ನು ಸುಮನೋಹರವಾಗಿ ಸಿಂಗಾರಗೊಳಿಸಿರುವುದು ಮೂಡುಬಿದಿರೆಯ ನಾಗರಿಕರಿಗೆ ಹೆಮ್ಮೆಯ ಸಂಗತಿ.
2024 ಸೆ.24ರಂದು ಘಟನೆ….
ಇತಿಹಾಸ ಪ್ರಸಿದ್ದ ಮೂಡುಬಿದಿರೆ ಚೌಟರ ಅರಮನೆ ಬಳಿಯಿರುವ ಪ್ರಾಚೀನ ಸ್ಮಾರಕ ಅರಮನೆಯ ಆನೆ ಬಾಗಿಲುಗೆ 2024 ಸೆ.24ರ ಬೆಳಗ್ಗಿನ ಜಾವ ತಮಿಳುನಾಡು ನೋಂದಾಯಿತ ಟ್ರಕ್ ವೊಂದು ಡಿಕ್ಕಿ ಹೊಡೆದಿತ್ತು.

ಘಟನೆಯಿಂದ ಸ್ಮಾರಕವು ಭಾಗಶಃ ಹಾನಿಗೊಳಗಾಗಿದೆ. ಘಟನೆಗೆ ಸಂಬಂಧಿಸಿ ಟ್ರಕ್ ಚಾಲಕನ ವಿರುದ್ಧ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸುಮಾರು 700 ವರ್ಷಕ್ಕೂ ಹೆಚ್ಚು ಇತಿಹಾಸ ಹೊಂದಿರುವ ಪ್ರಾಚೀನ ಸ್ಮಾರಕವು ಚೌಟರ ಮನೆತನದ ಆಧೀನದಲ್ಲಿದೆ. ಈ ಪ್ರಾಚೀನ ಐತಿಹ್ಯಕ್ಕೆ ಹಾನಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅರಮನೆ ಆನೆ ಬಾಗಿಲಿನ ಮೇಲ್ಟಾವಣಿಗೆ ಹಾನಿಯಾಗಿತ್ತು. ಆ ಸಂದರ್ಭದಲ್ಲಿ ಮೂಡುಬಿದಿರೆಯಲ್ಲಿ ಮಳೆ ಸುರಿಯುತ್ತಿರುವುದರಿಂದ, ಐತಿಹಾಸಿಕ ಸ್ಮಾರಕಕ್ಕೆ ಹಾನಿಯಾಗುವ ಸಾಧ್ಯತೆಯ ಬಗ್ಗೆ ಕಳವಳ ವ್ಯಕ್ತವಾಗಿತ್ತು.























