ಕಾರ್ಕಳ: ಈಶಾವಾಸ್ಯ ಉಪನಿಷತ್ತು ಕೇವಲ ಹದಿನೆಂಟು ಮಂತ್ರಗಳಿರುವ ಚಿಕ್ಕದಾದ ಉಪನಿಷತ್ತಾದರೂ ಅದರ ಮೌಲ್ಯ ಹಿರಿದಾದುದು. ಜಗತ್ತನ್ನು ಭಗವಂತನ ಹಿನ್ನೆಲೆಯಲ್ಲಿ ನೋಡಬೇಕೆನ್ನುತ್ತಾ ಎಲ್ಲಾ ಜೀವಾತ್ಮರೂ ಪರಮಾತ್ಮನಿಂದಲೇ ಬಂದವರಾಗಿದ್ದು ಎಲ್ಲರಲ್ಲೂ ದೈವತ್ವವನ್ನು ಕಾಣಬೇಕೆನ್ನುತ್ತದೆ ಉಪನಿಷತ್ತು. ತ್ಯಾಗ, ಪರೋಪಕಾರದ ಮಹತ್ವದ ಜೊತೆ ಸಕಲ ಜೀವರಾಶಿಗಳಿಗೂ ಒಳಿತನ್ನೇ ಮಾಡಬೇಕೆಂಬುದನ್ನು ತಿಳಿಸುತ್ತಾ ಅಂತರಂಗವನ್ನು ಅರಳಿಸಿ ಜೀವನ ಪ್ರೀತಿಯನ್ನು ಕಟ್ಟಿಕೊಡುವ ಕೆಲಸವನ್ನು ಉಪನಿಷತ್ತು ಮಾಡುತ್ತದೆ ಎಂಬುದಾಗಿ ಕನ್ನಡ ಸಂಸ್ಕೃತ ವಿದ್ವಾಂಸ ಡಾ. ರಾಘವೇಂದ್ರ ರಾವ್ ಹೇಳಿದರು.

ಕನ್ನಡ ಸಂಘ ಕಾಂತಾವರ ಮತ್ತು ಅಖಿಲ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿ ಮತ್ತು ಅಲ್ಲಮಪ್ರಭು ಪೀಠ ಕಾಂತಾವರ ಇವುಗಳ ಸಹಯೋಗದಲ್ಲಿ ಮಾರ್ಚ್ ೯ ರಂದು ಕಾರ್ಕಳ ದ ಹೋಟೆಲ್ ಪ್ರಕಾಶ್ ಇದರ ಸಂಭ್ರಮ ಸಭಾಂಗಣದಲ್ಲಿ ನಡೆದ ತಿಂಗಳ ಉಪನ್ಯಾಸ ‘ಅರಿವು ತಿಳಿವು’ ಕಾರ್ಯಕ್ರಮದಲ್ಲಿ ಅವರು ‘ಈಶಾವ್ಯಾಸ ಉಪನಿಷತ್ತು’ ಇದರ ಕುರಿತು ಉಪನ್ಯಾಸ ನೀಡಿದರು.
ವೇದದ ತಿರುಳಿನ ರೂಪದಲ್ಲಿರುವ ಅತ್ಯಂತ ಸಾರಭೂತವಾದ ಅಂಶಗಳೇ ಉಪನಿಷತ್ತಗಳು. ಸಂಸಾರ ಸಾಗರದಲ್ಲಿದ್ದುಕೊಂಡೇ ಅದರಿಂದ ಬಿಡುಗಡೆ ಹೊಂದಿ ಅತ್ಯಂತ ಶ್ರೇಷ್ಠವಾದ ಬ್ರಹ್ಮಪದವನ್ನು ಏರಲು ಉಪನಿಷತ್ತುಗಳು ನಮಗೆ ಮಾರ್ಗದರ್ಶನ ನೀಡುತ್ತವೆ ಎಂದರು.
ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ, ಅ.ಭಾ.ಸಾ.ಪ ಕಾರ್ಕಳ ತಾಲೂಕು ಘಟಕದ ಮಿತ್ರ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ, ಉಪಾಧ್ಯಕ್ಷ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸುಧಾಕರ ಶ್ಯಾನುಭೋಗ್ ಪ್ರಾರ್ಥಿಸಿ ಮುರಾರಿ ಚಿಪ್ಲುಣ್ ಕರ್ ಉಪನ್ಯಾಸಕರನ್ನು ಪರಿಚಯಿಸಿದರು. ಮಾಲತಿ . ಜಿ. ಪೈ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿದರು. ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು.






































