ಭರವಸೆಯ ಯುವ ನಾಯಕ ಮಾಳ ಅಜಿತ್ ಹೆಗ್ಡೆ
ಕಾರ್ಕಳದ ಕಾಂಗ್ರೆಸ್ ಪಕ್ಷದಲ್ಲಿ ಅನೇಕ ಮಂದಿ ಉತ್ಸಾಹೀ ಕಾರ್ಯಕರ್ತರಿದ್ದಾರೆ. ಸ್ಥಳೀಯವಾಗಿ ಜನರೊಂದಿಗೆ ಬೆರೆತು ಕೆಲಸ ಮಾಡುವ ನಾಯಕತ್ವದ ಗುಣಲಕ್ಷಣ ಇರುವವರು ಇದ್ದಾರೆ. ಹಾಗೆ ಇದ್ದವರಲ್ಲಿಯೇ ಕೆಲವರು ಬಿಜೆಪಿಯನ್ನು ಸೇರಿಕೊಂಡದ್ದು ಇತಿಹಾಸ ಮಾತ್ರವಷ್ಚೇ ಅಲ್ಲ ಕಾಂಗ್ರೆಸ್ ಪಕ್ಷದ ಬೆಳವಣಿಗೆಯ ಬಿಕ್ಕಟ್ಟು ಅಷ್ಟೆ.
ರಾಜ್ಯ ಸರಕಾರದ ಐದು ಭರವಸೆ ಯೋಜನೆಗಳ ಅಭಿವೃದ್ಧಿಯ ಕಾರ್ಕಳ ತಾಲೂಕು ಘಟಕದ ಅಧ್ಯಕ್ಷರಾಗಿ ಅಜಿತ್ ಹೆಗ್ಡೆ ಅಧಿಕಾರ ಸ್ವೀಕರಿಸಿರುವುದು ಅವರು ಬೆಳೆಸಿಕೊಂಡು ಬಂದಿರುವ ಜನಸಂಪರ್ಕ ಹಾಗೂ ಪಕ್ಷ ಚಟುವಟಿಕೆಗಳನ್ನು ಯಶಸ್ವಿಯಾಗಿ ನೆರವೇರಿಸುತ್ತ ಬರುತ್ತಿದ್ದ ಶಕ್ತಿಗೆ ಸಂದ ಗೌರವವಾಗಿದೆ ಎನ್ನುತ್ತಾರೆ ಪಕ್ಷದ ಕಾರ್ಯಕರ್ತರು.
ಆತನ ತಂದೆ ಆಲಂಗಾರು ಸದಾನಂದ ಹೆಗ್ಡೆ ಯವರು ಕೂಡಾ ಕಾಂಗ್ರೆಸ್ಸಿನ ಪ್ರಭಾವೀ ನಾಯಕ. ಅವರ ತಂದೆ ಕೂಡಾ ಶಿರೂರಲ್ಲಿ ಪಂಚಾಯತ್ ಅಧ್ಯಕ್ಷರಾಗಿದ್ದರು.ಸದಾನಂದ ಹೆಗ್ಡೆ ಮಾಳ ಪಂಚಾಯತಲ್ಲಿ ಅಧ್ಯಕ್ಷರಾಗಿದ್ದರು,ನಂತರ ಮಗ ಅಜಿತ್ ಹೆಗ್ಡೆಯೂ ಮಾಳ ಪಂಚಾಯತು ಅಧ್ಯಕ್ಷನಾಗಿದ್ದು ಆ ಒಂದು ಪೀಳಿಗೆಯೇ ಸಾಮಾಜಿಕ ಹಾಗೂ ರಾಜಕೀಯ ಚಟುವಟಿಕೆಯಲ್ಲಿ ಬೆಳೆದು ಬಂದಿದೆ ಎನ್ನುವಂತಿದೆ.
ಮಾಳ ಅಜಿತ್ ಹೆಗ್ಡೆಯ ಹೆಸರು ಕಾಂಗ್ರೆಸ್ ಪಕ್ಷದಲ್ಲಿ ಒಂದು ಟ್ರೆಂಡ್ ಸೆಟ್ಟರ್ ನ ಹಾಗೆ ಇದೆ. ತಾಲೂಕಿನ ವಿವಿಧ ಕಡೆಗಳಲ್ಲೂ ಹೋಗಿ ಜನರ ಸಂಪರ್ಕವನ್ನು ಆಕರ್ಷಿಸಿಕೊಂಡು ಜನಸೇವೆಯನ್ನು ಮಾಡಿಕೊಂಡು ಅದೆಲ್ಲದರ ಕ್ರೆಡಿಟನ್ನು ಪಕ್ಷಕ್ಕೆ ಸಲ್ಲಿಸುತ್ತಿರುವುದು ವಿಶೇಷತೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದರೂ,ಕಾಂಗ್ರೆಸ್ ಸರಕಾರವಿದ್ದರೂ ಸ್ಥಳೀಯ ಅಧಿಕಾರಿಗಳೊಡನೆ ಉತ್ತಮ ಒಡನಾಟ,ಆತ್ಮೀಯತೆಯನ್ನು ಬೆಳೆಸಿಕೊಂಡು ಸಾರ್ವಜನಿಕ ಸೇವೆ ಮಾಡುವ ರಾಜಕೀಯ ತಂತ್ರಗಳೆಲ್ಲವೂ ತಿಳಿದಂತಿದೆ. ತಂದೆ ಸದಾನಂದ ಹೆಗ್ಡೆಯವರ ನಾಮ ಬಲವೂ ಕೂಡಾ ಕೆಲವು ಸಂದರ್ಭದಲ್ಲಿ ಬಳಕೆಗೆ ಬರುತ್ತಲೂ ಇರಬಹುದು.
ರಾಜಕೀಯ ನಡೆಗಳನ್ನು ಸರಿಯಾಗಿ ಕಲಿತಿರುವ ಈತನಲ್ಲಿ ಸಮಸ್ಯೆಗಳನ್ನಾಗಲಿ, ಸಂತೋಷಗಳನ್ನಾಗಲಿ ಸಂಭಾಳಿಸಿಕೊಳ್ಳುವ ಚಾಣಾಕ್ಷತನ ಕರಗತವಾದಂತಿದೆ. ಮುಖ್ಯವಾಗಿ , ಬೇರೆ ಪಕ್ಷದವರೊಂದಿಗೆ ಜಗಳಕ್ಕೆ ಕಾಲುಕೆರೆದು ನಿಲ್ಲುವುದಾಗಲಿ,ಅಂಥದ್ದೊಂದು ಹೊಸ ಗಲಾಟೆ ಮಾಡುವ ಸೋಲಿನ ತಂತ್ರಗಾರಿಕೆಯಾಗಲಿ ಆತನಲ್ಲಿಲ್ಲ ಎಂಬುದನ್ನು ಸಾರ್ವಜನಿಕರು ಗಮನಿಸುತ್ತಲೇ ಬಂದಿರುತ್ತಾರೆ. ನಾನು ಕೂಡಾ ಗಮನಿಸಿದ್ದೇನೆ.
ಸಾರ್ವಜನಿಕ ವೇದಿಕೆಯಲ್ಲೂ,ಪಕ್ಷದ ವೇದಿಕೆಯಲ್ಲೂ ಸ್ಪಷ್ಟ ಹಾಗೂ ಸಮಗ್ರ ಮಾಹಿತಿಯೊಂದಿಗೆ ಮಾತನ್ನಾಡುವ ಕಲೆಗಾರಿಕೆಯು ಕೂಡಾ ಕರಗತವಾಗಿ ಬಂದಿರುವುದು ರಾಜಕೀಯದಲ್ಲಿ ನಾಯಕತ್ವ ಬೆಳೆಸಿಕೊಳ್ಳುವುದಕ್ಕೆ ದೊಡ್ಡ ಪ್ಲಸ್ ಪಾಯಿಂಟ್.
ರಾಜಕಾರಣಿಯಾಗಿ ಸಾರ್ವಜನಿಕ ಸೇವೆ ಮಾಡುವವನಲ್ಲಿ ಅಗತ್ಯ ಮಾಹಿತಿಗಳ ಸಂಗ್ರಹ ಬೇಕು. ಕೇಳುಗರಿಗೆ ಪ್ರತಿಯೊಂದನ್ನೂ ಮನದಟ್ಟಾಗುವಂತೆ ಮಾತಾಡುವುದು ತುಂಬಾ ಅಗತ್ಯವಿದೆ. ಆ ನಿಟ್ಚಿನಲ್ಲಿ ಅಜಿತ್ ಹೆಗ್ಡೆಯ ಪರಿಶ್ರಮವು ಮಹತ್ವಪೂರ್ಣವಾಗಿದೆ. ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಲ್ಲಿ ಅಂಥವನೊಬ್ಬ ನಾಯಕ ಬೆಳೆಯುತ್ತಿರುವುದು ಶುಭ ಲಕ್ಷಣವೆನ್ನಬಹುದು.
ಪಕ್ಷದ ಹಿರಿಯ ಹಾಗೂ ಪ್ರಭಾವಿ ನಾಯಕ ಮುನಿಯಾಲು ಉದಯ ಕುಮಾರ್ ಶೆಟ್ಟಿಯವರ ಜೊತೆಗಾರನಾಗಿ ಇರಲು ಯೋಗ್ಯರಾದವರ ಸಾಲಿನಲ್ಲಿ ಅಜಿತ್ ಹೆಗ್ಡೆ ಸಮರ್ಥನಾಗುತ್ತಾರೆ.
ಹಲವು ವರ್ಷಗಳಿಂದ ಯುವನಾಯಕರನ್ನು ಗುರುತಿಸುವ ಕೆಲಸದಿಂದ ದೂರವಾಗಿದ್ದ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಜಿತ್ ಹೆಗ್ಡೆಯವರಂಥ ಇನ್ನೂ ಕೆಲವು ಯುವಕರನ್ನು ಪಕ್ಷದಲ್ಲಿ ಬೆಳೆಸುವುದಕ್ಕೆ,ಉಳಿಸಿಕೊಳ್ಳುವುದಕ್ಕೆ ಮುಂದಾದರೆ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿಯೆ ಕಾಂಗ್ರೆಸ್ ನಿರ್ಭೀತಿಯಿಂದ ಯಾವುದೇ ಚುನಾವಣೆಯನ್ನೂ ಎದುರಿಸಬಹುದು.
ಮುಂದೆ ನಡೆಯಲಿರುವ ಜಿಲ್ಲಾ ಪಂಚಾಯತು,ತಾಲ್ಲೂಕು ಪಂಚಾಯತು ಚುನಾವಣೆಯಲ್ಲಿ ಅಜಿತ್ ಹೆಗ್ಡೆಯಂತಹ ಉತ್ಸಾಹೀ ಯುವಕ,ಯುವತಿಯರನ್ನೇ ಕಣಕ್ಕಿಳಿಸಿ ಗೆಲುವು ಪಡೆಯುವ ಹೊಸ ಆವಿಷ್ಕಾರಕ್ಕೆ ಬುನಾದಿ ಹಾಕಲು ಕಾಂಗ್ರೆಸ್ಸಿಗೆ ಈ ಬಾರಿ ಒಳ್ಳೆಯ ಅವಕಾಶ.
-ವಿ. ಕೆ. ವಾಲ್ಪಾಡಿ





















