

ಪೊಲೀಸ್ ಜೀಪಿನಲ್ಲಿ ಹೋದ ಇಸ್ಮಾಯಿಲ್

ಭಾಗ-2
1976 ಸೆಪ್ಟಂಬರ್ 4ರಂದು ರಾತ್ರಿ ಸುಮಾರು 10.30ರ ಸಮಯ.
ಕಲ್ಲಡ್ಕ ಇಸ್ಮಾಯಿಲ್ ಅವರು ತನ್ನ ಅಂಗಡಿಯಲ್ಲಿ ಇದ್ದರು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಇರುವ ಅಂಗಡಿ ಅದು. ಒಂದು ರೀತಿಯಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಸಂಪರ್ಕ ಕೇಂದ್ರವೂ ಆಗಿತ್ತು. ದಿನಪತ್ರಿಕೆಯೊಂದರ ಏಜೆಂಟರೂ ಆಗಿದ್ದ ಇಸ್ಮಾಯಿಲ್ ಅವರು ಆ ಅಂಗಡಿಯಲ್ಲಿ ವಿದೇಶಿ ಮೂಲದ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಗೂ ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದರು.
ಅಂದು ಆ ಅಂಗಡಿಯಲ್ಲಿ ದಿನನಿತ್ಯದಂತೆ ಅವರ ಪರಿಚಿತರು ಸೇರಿದ್ದರು. ಪಕ್ಕದಲ್ಲಿದ್ದ ಕೆ.ಎನ್. ಲಾಂಡ್ರಿಯ ನರಸಿಂಹ ಮಡಿವಾಳ, ಸ್ವಾತಂತ್ರ್ಯ ಹೋರಾಟಗಾರ ಸದಾನಂದ ಪೈ, ಟೆಂಪೋ ಚಾಲಕ ಬಿ.ಕೆ. ಇದಿನಬ್ಬ ಇದ್ದರು. ಅವರೆಲ್ಲರೂ ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು.
ಇಸ್ಮಾಯಿಲ್ ಅವರು ಅಂಗಡಿಯ ಆ ದಿನದ ಲೆಕ್ಕಾಚಾರಗಳನ್ನು ನೋಡುತ್ತಿದ್ದರು. ಆ ವೇಳೆಯಲ್ಲಿ ಅವರ ಅಂಗಡಿಯ ರಸ್ತೆಯ ಎಡಭಾಗದಲ್ಲಿ ಪುತ್ತೂರು ಕಡೆಯಿಂದ ಪೊಲೀಸ್ ಜೀಪನ್ನು ಹೋಲುವಂತಹ ಜೀಪು ಬಂದು ನಿಂತಿತು.
ಆ ಜೀಪಿನಿಂದ ಪೊಲೀಸ್ ಸಮವಸ್ತ್ರ ಧರಿಸಿದ್ದ ಇಬ್ಬರು ಇಳಿದು ಅಂಗಡಿಯ ಎದುರು ಬಂದು ಇಸ್ಮಾಯಿಲ್ ಅವರನ್ನು ಕೇಳಿದರು. ಆಗ ಲೆಕ್ಕ ಬರೆಯುತ್ತಿದ್ದ ಇಸ್ಮಾಯಿಲ್ ಅವರು ಏನೆಂದು ವಿಚಾರಿಸಿದರು. ಆಗ ಆ ಪೊಲೀಸರಿಬ್ಬರು ಇಸ್ಮಾಯಿಲ್ ಅವರು ಅಂಗಡಿಯಲ್ಲಿ ಇದ್ದಾರೆ ಎಂಬುದನ್ನು ಖಚಿತಪಡಿಸಿಕೊಂಡು ಜೀಪಿನ ಹತ್ತಿರ ಹೋಗಿ ಜೀಪಿನಲ್ಲಿದ್ದ ಇತರರಿಗೆ ಮಾಹಿತಿ ನೀಡಿದರು. ಜೀಪು ಅಲ್ಲಿಂದ ಮುಂದಕ್ಕೆ ಚಲಿಸಿ ತಿರುವು ಪಡೆದುಕೊಂಡು ಇಸ್ಮಾಯಿಲ್ ಅವರ ಅಂಗಡಿಯಿಂದ ಕೇವಲ ಐದು ಅಡಿಗಳಷ್ಟು ದೂರದಲ್ಲಿ ನಿಂತುಕೊಂಡಿತು.
ಇಸ್ಮಾಯಿಲ್ ಅವರು ಅಂಗಡಿಯಿಂದ ಕೆಳಗಿಳಿದು ಜೀಪಿನತ್ತ ಹೋಗಿ ಎದುರು ಸೀಟಿನಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿಯಂತೆ ತೋರುವ ದಪ್ಪಗಿನ ವ್ಯಕ್ತಿಯೊಂದಿಗೆ ಮಾತನಾಡಿದರು.
ಇದನ್ನು ಅಂಗಡಿಯಲ್ಲಿದ್ದ ನರಸಿಂಹ ಮಡಿವಾಳ, ಸದಾನಂದ ಪೈ, ಬಿ.ಕೆ. ಇದಿನಬ್ಬ ಮತ್ತಿತರರು ಗಮನಿಸುತ್ತಿದ್ದರು. ಇಸ್ಮಾಯಿಲ್ ಅವರು ಮೇಲೆ ಮಡಚಿ ಕಟ್ಟಿದ್ದ ಲುಂಗಿಯನ್ನು ಕೆಳಗೆ ಇಳಿಬಿಟ್ಟು ಜೀಪಿನಲ್ಲಿದ್ದ ವ್ಯಕ್ತಿಯೊಂದಿಗೆ ಮಾತನಾಡಿ ವಾಪಸ್ ಅಂಗಡಿಗೆ ಬಂದರು. ಮೇಜಿನ ಮೇಲಿದ್ದ ಲೆಕ್ಕ ಪತ್ರದ ಚೀಟಿಗಳು ಮತ್ತು ನಗದು ಹಣವನ್ನು ಡ್ರಾವರ್ನಲ್ಲಿ ಇಟ್ಟು ಈಗ ಬರುತ್ತೇನೆ ಎಂದು ಜೊತೆಗಾರರಿಗೆ ಹೇಳಿ ಜೀಪಿನ ಬಳಿ ಹೋಗಿದ್ದರು.
ಆಗ ಜೀಪಿನ ಎದುರಿನ ಸೀಟಿನಲ್ಲಿ ಕುಳಿತಿದ್ದ ಪೊಲೀಸ್ ಅಧಿಕಾರಿ ಕೆಳಗೆ ಇಳಿದು ಇಸ್ಮಾಯಿಲ್ ಅವರನ್ನು ಎದುರು ಸೀಟಿನಲ್ಲಿಯೇ ಕುಳ್ಳಿರಿಸಿ ತಾನೂ ಕುಳಿತುಕೊಂಡರು. ಜೀಪು ಪುತ್ತೂರು ಕಡೆಗೆ ಹೋಯಿತು. ಅಂಗಡಿಯಲ್ಲಿದ್ದ ಸದಾನಂದ ಪೈ ಅವರು ಮನೆಗೆ ಹೋದರು.
ಬಿ.ಕೆ. ಇದಿನಬ್ಬ ಮತ್ತು ನರಸಿಂಹ ಮಡಿವಾಳ ಅಂಗಡಿಯಲ್ಲಿ ಕಾದು ಕುಳಿತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಕಾಂಗ್ರೆಸ್ ಕಾರ್ಯಕರ್ತರಾಗಿದ್ದ ಗೋಳ್ತಮಜಲಿನ ಪದ್ಮನಾಭ ರೈ ಎಂಬವರು ಬಂದರು. ಅವರಿಗೆ ಮಂಗಳೂರಿಗೆ ದೂರವಾಣಿ ಕರೆ ಮಾಡಲಿಕ್ಕಿತ್ತು. ಆ ಸಂದರ್ಭದಲ್ಲಿ ಕಲ್ಲಡ್ಕದಲ್ಲಿ ಒಂದೆರಡು ದೂರವಾಣಿ ಸಂಪರ್ಕಗಳಿದ್ದವು. ಅದರಲ್ಲಿ ಇಸ್ಮಾಯಿಲ್ ಅವರ ಅಂಗಡಿಯೂ ಒಂದಾಗಿತ್ತು. ಅದ್ದರಿಂದ ಪದ್ಮನಾಭ ರೈ ಅವರು ತನ್ನ ಮನೆ ಸಮೀಪದ ವೃದ್ಧರೊಬ್ಬರು ಮೃತಪಟ್ಟ ವಿಚಾರವನ್ನು ಅವರ ಮಂಗಳೂರಿನ ಸಂಬಂಧಿಕರಿಗೆ ತಿಳಿಸಲು ಅಲ್ಲಿಗೆ ಕರೆ ಮಾಡಲು ಬಂದಿದ್ದರು.
ಅವರು ಮಂಗಳೂರಿನ ದೂರವಾಣಿ ಸಂಖ್ಯೆಗೆ ಟ್ರಂಕ್ ಕಾಲ್ ಗೊತ್ತು ಮಾಡಿ ಕಾಯತೊಡಗಿದ್ದರು. ಆ ಸಂದರ್ಭದಲ್ಲಿ ನರಸಿಂಹ ಮಡಿವಾಳ ಅವರು ಇಸ್ಮಾಯಿಲ್ ಅವರು ಪುತ್ತೂರು ಕಡೆಯಿಂದ ಬಂದಂತಹ ಪೊಲೀಸ್ ಜೀಪಿನಲ್ಲಿ ಪುತ್ತೂರು ಕಡೆಯೇ ಹೋಗಿದ್ದನ್ನು ತಿಳಿಸಿದರು.
ರಾತ್ರಿ ಸುಮಾರು ಒಂದು ಗಂಟೆಯಾದರೂ ಇಸ್ಮಾಯಿಲ್ ಅವರು ಬಾರದೆ ಇದ್ದಾಗ ಪದ್ಮನಾಭ ರೈ ಅವರು ಒಕ್ಕೆತ್ತೂರಿನಲ್ಲಿದ್ದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶಿವರಾಮ ಶೆಟ್ಟರಿಗೆ ಮಾಹಿತಿ ನೀಡಲು ದೂರವಾಣಿ ಕರೆ ಮಾಡಿದರು.
ಆದರೆ ಸಂಪರ್ಕ ಸರಿಯಾಗಿರದ ಹಿನ್ನೆಲೆಯಲ್ಲಿ ಮಾತನಾಡಲು ಸಾಧ್ಯವಾಗಲಿಲ್ಲ. ತದನಂತರ ವಿಟ್ಲ ಮತ್ತು ಪುತ್ತೂರು ಪೊಲೀಸ್ ಠಾಣೆಗಳಿಗೆ ದೂರವಾಣಿ ಮೂಲಕ ವಿಚಾರಿಸಲು ಕರೆ ಮಾಡಲು ಟ್ರಂಕ್ ಕಾಲ್ ಬುಕ್ ಮಾಡಿದರೂ ದೂರವಾಣಿ ಎಕ್ಸ್ಚೇಂಜ್ನವರು ಸಂಪರ್ಕ ನೀಡಲಿಲ್ಲ.
ರಾತ್ರಿ ಸುಮಾರು 2.3೦ರವರೆಗೆ ಕಾದರೂ ಇಸ್ಮಾಯಿಲ್ ಅವರು ಬಾರದೆ ಇದ್ದುದರಿಂದ ಪದ್ಮನಾಭ ರೈ ಮತ್ತು ನರಸಿಂಹ ಮಡಿವಾಳ ಅವರು ಮೇಜಿನ ಮೇಲಿದ್ದ ಬೀಗ ಮತ್ತು ಅದರ ಕೀ ತೆಗೆದುಕೊಂಡು ಅಂಗಡಿಗೆ ಬಾಗಿಲು ಹಾಕಿ ಕೀಯನ್ನು ಮತ್ತು ಟಾರ್ಚ್ಲೈಟನ್ನು ಅಂಗಡಿಯ ಎದುರು ಭಾಗದಲ್ಲೇ ಇರುವ ಇಸ್ಮಾಯಿಲ್ ಅವರ ಮನೆಗೆ ಕೊಂಡೋಗಿ ಕೊಡಲು ಬಾಗಿಲು ತಟ್ಟಿದರು. ಆ ವೇಳೆಗೆ ಇಸ್ಮಾಯಿಲ್ ಅವರ ಮಾವ ಮತ್ತು ಪತ್ನಿ ಬೀಫಾತಿಮಾ ಎದ್ದು ಬಂದರು. ಈ ಸಂದರ್ಭದಲ್ಲಿ ಪದ್ಮನಾಭ ರೈ ಅವರು ಇಸ್ಮಾಯಿಲ್ ಅವರು ಪೊಲೀಸ್ ಜೀಪಿನಲ್ಲಿ ಹೋಗಿದ್ದು ವಾಪಸ್ ಬಂದಿಲ್ಲ ಎಂದು ತಿಳಿಸಿದರು.
ಆಗ ಬೀಫಾತಿಮಾ ಅವರು ಇಸ್ಮಾಯಿಲ್ ಅವರು ಹೋಗಿ ಗಂಟೆ ನಾಲ್ಕು ಕಳೆದರೂ ಅಂಗಡಿಯ ಎದುರಲ್ಲೇ ಇದ್ದ ಮನೆಗೆ ಮಾಹಿತಿ ನೀಡಲಿಲ್ಲ ಯಾಕೆ ಎಂದು ಗಲಾಟೆ ಮಾಡಿದರು.
ತದನಂತರ ಪದ್ಮನಾಭ ರೈ ಮತ್ತು ಇದಿನಬ್ಬ ಅವರು ಅಲ್ಲಿಂದ ಸುಮಾರು ಒಂದು ಫರ್ಲಾಂಗ್ ದೂರದಲ್ಲಿರುವ ಸದಾನಂದ ಪೈ ಅವರ ಮನೆಗೆ ಹೋಗಿ ವಿಷಯ ತಿಳಿಸಿದರು. ಅಲ್ಲಿಂದ ಮೂವರೂ ವಿಟ್ಲದ ಬಿ.ಎ. ಖಾದರ್ ಎಂಬವರ ಮನೆಗೆ ಹೋದರು. ಬಿ.ಎ. ಖಾದರ್ ಅವರೂ ಸ್ಥಳೀಯ ಕಾಂಗ್ರೆಸ್ ಮುಖಂಡರಾಗಿದ್ದು, ಅವರ ಮೇಲೆ ಗುಂಡಿನ ದಾಳಿಯೂ ನಡೆದಿತ್ತು. ಆದ್ದರಿಂದ ಅವರನ್ನು ಪರಿಚಿತರು ಗುಂಡು ಖಾದರ್ ಎಂದೇ ಗುರುತಿಸುತ್ತಿದ್ದರು. ಅಲ್ಲಿಗೆ ಪದ್ಮನಾಭ ರೈ ಮತ್ತು ಇತರರು ಹೋಗಲು ಕಾರಣವೂ ಇತ್ತು. ಇಸ್ಮಾಯಿಲ್ ಅವರು ಪೊಲೀಸ್ ಜೀಪಿನಲ್ಲಿ ಹೋದ ವಿಚಾರವನ್ನು ತಿಳಿಸುವುದರ ಜೊತೆಗೆ ಅವರಲ್ಲಿದ್ದ ಟೆಂಪೋವೊಂದನ್ನು ಪಡೆದು ವಿಟ್ಲ, ಪುತ್ತೂರು, ಉಪ್ಪಿನಂಗಡಿ ಪೊಲೀಸ್ ಠಾಣೆಗಳಿಗೆ ಹೋಗಿ ವಿಚಾರಿಸಲು ಅವರು ತೀರ್ಮಾನಿಸಿದ್ದರು.
ಅದರಂತೆ ಟೆಂಪೋ ಪಡೆದುಕೊಂಡು ಮೂರೂ ಠಾಣೆಗಳಿಗೆ ಹೋಗಿ ವಿಚಾರಿಸಿದಾಗ ಅಲ್ಲಿಗೆ ಇಸ್ಮಾಯಿಲ್ ಅವರನ್ನು ಕರೆತಂದಿಲ್ಲ ಎಂದು ಸ್ಪಷ್ಟವಾಯಿತು. ಅಲ್ಲಿಂದ ವಾಪಸ್ ಬಂದ ಅವರು ವಿಟ್ಲ ಸಮೀಪದ ಒಕ್ಕೆತ್ತೂರಿನ ಶಿವರಾಮ ಶೆಟ್ಟರ ಮನೆಗೆ ಹೋಗಿ ವಿಚಾರ ತಿಳಿಸಿದರು. ಆಗ ಶಿವರಾಮ ಶೆಟ್ಟಿ ಅವರು ಬೆಳಗ್ಗಿನವರೆಗೆ ಇಸ್ಮಾಯಿಲ್ ಅವರು ಬಾರದೆ ಇದ್ದಲ್ಲಿ ಪೊಲೀಸರಿಗೆ ದೂರು ನೀಡುವುದು ಒಳ್ಳೆಯದು ಎಂಬ ಸಲಹೆ ನೀಡಿದರು.
ಪೊಲೀಸರಿಗೆ ದೂರು
ಇಸ್ಮಾಯಿಲ್ ಅವರು ನಾಪತ್ತೆಯಾದ ಮರುದಿನ ಅಂದರೆ ಸೆ. 5ರಂದು ಬೆಳಿಗ್ಗೆ 8.3೦ರ ವೇಳೆಗೆ ಪದ್ಮನಾಭ ರೈ, ನರಸಿಂಹ ಮಡಿವಾಳ, ಇದಿನಬ್ಬ, ಸದಾನಂದ ಪೈ ಅವರು ಟೆಂಪೋದಲ್ಲಿಯೂ, ಶಿವರಾಮ ಶೆಟ್ಟಿ ಅವರು ಅವರ ಕಾರಿನಲ್ಲಿಯೂ ಬಂಟ್ವಾಳ ಪೊಲೀಸ್ ಠಾಣೆಗೆ ಹೋದರು. ಆಗ ಆ ಠಾಣೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿದ್ದವರು ಎಸ್.ಬಿ. ಕೋಲ್ಕರ್ ಅವರು.
ಎಸ್ಐ ಅವರು ಠಾಣೆಗೆ ಬಂದಂತಹ ಸ್ಥಳೀಯ ಕಾಂಗ್ರೆಸಿನ ನಾಯಕರಲ್ಲಿ ಎನೇನು ಘಟನೆಗಳು ನಡೆಯಿತು ಎಂದು ವಿಚಾರಿಸಿದರು. ನರಸಿಂಹ ಮಡಿವಾಳ ಮತ್ತು ಪದ್ಮನಾಭ ರೈ ಅವರು ಹಿಂದಿನ ರಾತ್ರಿ ನಡೆದ ವಿದ್ಯಮಾನಗಳನ್ನು ವಿವರಿಸಿದರು. ಆಗ ಎಸ್ಐ ಕೋಲ್ಕರ್ ಅವರು ಲಿಖಿತವಾಗಿ ದೂರು ನೀಡುವಂತೆ ಸೂಚಿಸಿದರು.
ನರಸಿಂಹ ಮಡಿವಾಳ ಅವರು ತಮ್ಮೊಂದಿಗೆ ಇದ್ದ ಅಬ್ದುಲ್ ರಹಿಮಾನ್ ಅವರಲ್ಲಿ ದೂರು ಅರ್ಜಿ ಬರೆಯುವಂತೆ ಸೂಚಿಸಿದರು. ಅದರಲ್ಲಿ ನರಸಿಂಹ ಮಡಿವಾಳ ಅವರು ಹೇಳಿದಂತೆಯೇ ಅಬ್ದುಲ್ ರಹಿಮಾನ್ ದೂರು ಬರೆದು ಎಸ್ಐ ಅವರಿಗೆ ನೀಡಿದರು. ಎಸ್ಐ ಕೋಲ್ಕರ್ ಅವರು ನರಸಿಂಹ ಮಡಿವಾಳ ನೀಡಿದ ದೂರಿನ ಅನ್ವಯ ಕೇಸು ದಾಖಲಿಸಿಕೊಂಡರು. ತದನಂತರ ಕಲ್ಲಡ್ಕಕ್ಕೆ ಬಂದು ಸ್ಥಳದ ಮಹಜರು ನಡೆಸಿದರು. ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಊರಿಡೀ ಗುಲ್ಲು!
ಕಲ್ಲಡ್ಕ ಇಸ್ಮಾಯಿಲ್ ಅವರು ನಾಪತ್ತೆಯಾಗಿದ್ದಾರೆ. ಅವರನ್ನು ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಹೋಗಿದ್ದಾರೆ ಎಂಬ ಮಾಹಿತಿಗಳು ಬಾಯಿಂದ ಬಾಯಿಗೆ ಹರಡಲು ಆರಂಭವಾಯಿತು.

ಇಸ್ಮಾಯಿಲ್ ಅವರು ಸ್ಥಳೀಯವಾಗಿ ಜನಪ್ರಿಯ ರಾಜಕೀಯ ಮುಖಂಡರಾಗಿದ್ದರು. ರಾಜ್ಯಮಟ್ಟದ ಅಧಿಕಾರದಲ್ಲಿದ್ದ ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಅಂದಿನ ಪ್ರಧಾನಿ ಇಂದಿರಾಗಾಂಧಿ ಅವರು ರಸ್ತೆ ಮೂಲಕ ಮಂಗಳೂರಿಗೆ ಹೋಗುತ್ತಿದ್ದಾಗ ಕಲ್ಲಡ್ಕದಲ್ಲಿ ಅವರನ್ನು ತಡೆದು ಹೂಹಾರ ಹಾಕಿ ಅಭಿನಂದಿಸಿ ಭಾಷಣ ಮಾಡಿಸಿದ್ದರು.

1974ರ ಮಹಾ ನೆರೆಯ ಸಂದರ್ಭದಲ್ಲಿ ಮನೆಮಠ ಕಳೆದುಕೊಂಡವರಿಗೆ ಸಹಾಯ ಹಸ್ತ ಚಾಚಿದ್ದವರು. ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರೊಂದಿಗೆ ಆತ್ಮೀಯ ಸಂಬoಧ ಹೊಂದಿದ್ದವರು. ಅಂತಹ ಪ್ರಭಾವಿ ಸ್ಥಳೀಯ ಮುಖಂಡರೊಬ್ಬರು ನಿಗೂಢವಾಗಿ ನಾಪತ್ತೆಯಾಗಿದ್ದಾರೆ.
ಅದರಲ್ಲೂ ಪೊಲೀಸ್ ಜೀಪಿನಲ್ಲಿ ಅವರನ್ನು ಕರೆದೊಯ್ಯಲಾಗಿದೆ . ಆದರೆ ಸ್ಥಳೀಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಮತ್ತು ಸರಿಯಾದ ರೀತಿಯಲ್ಲಿ ತನಿಖೆ ನಡೆಸುತ್ತಿಲ್ಲ ಎಂಬ ಸಂಶಯ ಸ್ಥಳೀಯರಲ್ಲಿ ಹುಟ್ಟಿಕೊಂಡಿತ್ತು.
ಈ ಸಂದರ್ಭದಲ್ಲಿಯೇ ಇಸ್ಮಾಯಿಲ್ ಅವರ ವ್ಯವಹಾರದ ಹಿನ್ನೆಲೆಯಲ್ಲಿ ಅವರನ್ನು ವಿಚಾರಣೆಯ ನೆಪದಲ್ಲಿ ಜಿಲ್ಲೆಯಿಂದ ಹೊರಗಿನ ಪೊಲೀಸ್ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ ಎಂಬ ವದಂತಿಗಳೂ ಹರಡಲು ಆರಂಭವಾಯಿತು. ಯಾಕೆಂದರೆ ಇಸ್ಮಾಯಿಲ್ ಅವರು ವಿದೇಶಿ ಮೂಲದ ಎಲೆಕ್ಟ್ರಾನಿಕ್ ವಸ್ತುಗಳನ್ನು ಹಾಗೂ ಸುಗಂಧ ದ್ರವ್ಯಗಳನ್ನು ಮಾರಾಟ ಮಾಡುತ್ತಿದ್ದರು. ಆ ವಸ್ತುಗಳನ್ನು ಅವರು ಮಂಗಳೂರು ಮತ್ತು ಭಟ್ಕಳದಿಂದ ತರಿಸುತ್ತಿದ್ದರು. ಆ ವಸ್ತುಗಳು ವಿದೇಶದಿಂದ ಕಳ್ಳ ಸಾಗಾಣಿಕೆಯ ಮೂಲಕ ಭಾರತಕ್ಕೆ ಬರುತ್ತಿದ್ದು ಅದನ್ನು ಇಸ್ಮಾಯಿಲ್ ಅವರು ತಂದು ಮಾರಾಟ ಮಾಡುತ್ತಿದ್ದರು. ಇಸ್ಮಾಯಿಲ್ ಅವರು ಹಣ ಕೊಟ್ಟು ಖರೀದಿ ಮಾಡಿ ತಂದು ಆ ವಸ್ತುಗಳನ್ನು ಸ್ಥಳೀಯರಿಗೆ ವಾರದ ಕಂತು ರೂಪದಲ್ಲಿ ಕೊಡುತ್ತಿದ್ದರು. ಈ ವ್ಯವಹಾರದಲ್ಲಿದ್ದ ಮಂಗಳೂರು ಮತ್ತು ಭಟ್ಕಳದ ಕಳ್ಳ ಸಾಗಾಣಿಕೆದಾರರ ಬಗ್ಗೆ ಇಸ್ಮಾಯಿಲ್ ಅವರಿಗೆ ಮಾಹಿತಿ ಇತ್ತು. ಈ ಮಾಹಿತಿಯನ್ನು ಪಡೆಯಲೆಂದೇ ಕಸ್ಟಮ್ಸ್ ಇಲಾಖೆಯವರು ಅವರನ್ನು ಕರೆದುಕೊಂಡು ಹೋಗಿದ್ದಾರೆ ಎಂಬ ವದಂತಿಗಳು ತೇಲಿಬರತೊಡಗಿತು.
ಇದರಿಂದಾಗಿ ಇಸ್ಮಾಯಿಲ್ ಅವರ ನಿಗೂಢ ನಾಪತ್ತೆ ಪ್ರಕರಣ ತನಿಖೆಯಲ್ಲಿ ಜಟಿಲಗೊಳ್ಳತೊಡಗಿತು.
ಇಸ್ಮಾಯಿಲ್ ಅವರ ರಾಜಕೀಯ ಸಂಪರ್ಕ ಬಲವಾಗಿದ್ದುದರಿಂದ ಆ ಸಂದರ್ಭದಲ್ಲಿ ರಾಜ್ಯ ಸರಕಾರದಲ್ಲಿ ಸಚಿವರಾಗಿದ್ದ ವಿಟ್ಲ ಮೂಲದ ವಿಠಲದಾಸ ಶೆಟ್ಟಿ ಅವರು ಅಂದಿನ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರಲ್ಲಿ ಈ ಪ್ರಕರಣದ ತನಿಖೆಯನ್ನು ಉನ್ನತ ಮಟ್ಟದಲ್ಲಿ ನಡೆಸುವ ಅಗತ್ಯ ಇದೆ ಎಂದು ಭಿನ್ನವಿಸಿಕೊಂಡಿದ್ದರು.
ಅಂದಿನ ಬಂಟ್ವಾಳ ಶಾಸಕರಾಗಿದ್ದ ಕಮ್ಯೂನಿಸ್ಟ್ ಪಕ್ಷದ ನಾಯಕ ಬಿ.ವಿ. ಕಕ್ಕಿಲ್ಲಾಯ ಅವರೂ ಸಹ ಇದೇ ಅಭಿಪ್ರಾಯವನ್ನು ಹೊಂದಿ ಸರಕಾರದ ಮೇಲೆ ಒತ್ತಡ ಹೇರಿದ್ದರು. ಆ ಕಾಲದಲ್ಲಿ ರಾಜ್ಯದಲ್ಲಿ ಕಮ್ಯೂನಿಸ್ಟ್ ಪಕ್ಷ ಕಾರ್ಮಿಕ ಪರ ಹೋರಾಟದ ಹಿನ್ನೆಲೆಯಲ್ಲಿ ಬಲವಾದ ಹಿಡಿತ ಹೊಂದಿತ್ತು.
1972ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಕಮ್ಯೂನಿಸ್ಟ್ ಪಕ್ಷ ರಾಜಕೀಯ ಹೊಂದಾಣಿಕೆ ಮಾಡಿಕೊಂಡಿತ್ತು. ಇದರಿಂದಾಗಿ ಬಂಟ್ವಾಳ ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಲು ಕಮ್ಯೂನಿಸ್ಟ್ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು.
ಆದ್ದರಿಂದ ಬಿ.ವಿ. ಕಕ್ಕಿಲ್ಲಾಯ ಅವರು ಆ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಬೆಂಬಲದoದ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಇಸ್ಮಾಯಿಲ್ ಅವರು ಕಕ್ಕಿಲ್ಲಾಯರ ಪರವಾಗಿ ಚುನಾವಣಾ ಪ್ರಚಾರ ನಡೆಸಿದ್ದರು. ಆದ್ದರಿಂದ ಕಕ್ಕಿಲ್ಲಾಯ ಮತ್ತು ಇಸ್ಮಾಯಿಲ್ ಅವರ ಮಧ್ಯೆ ಒಳ್ಳೆಯ ಬಾಂಧವ್ಯ ಇತ್ತು.
1974ರ ನೆರೆಯ ಸಂದರ್ಭದಲ್ಲಿ ಸರಕಾರದ ನೆರವು ಪಡೆದು ಸಂತ್ರಸ್ಥ ಕುಟುಂಬಗಳಿಗೆ ಸಹಾಯಹಸ್ತ ಚಾಚಲು ಇಸ್ಮಾಯಿಲ್ ಅವರಿಗೆ ಇದೂ ಒಂದು ಕಾರಣವಾಗಿತ್ತು.
ಇದರಿಂದಾಗಿ ಇಸ್ಮಾಯಿಲ್ ಅವರ ನಿಗೂಢ ನಾಪತ್ತೆ ಪ್ರಕರಣವನ್ನು ಪತ್ತೆ ಹಚ್ಚಲು ರಾಜ್ಯ ಸರಕಾರ ಸಿಓಡಿಗೆ ಒಪ್ಪಿಸಿತು.
ಆಗಾಗಲೇ ರಾಜ್ಯ ಮಟ್ಟದಲ್ಲಿ ಸುದ್ದಿಯಾಗಿದ್ದ ಈ ಪ್ರಕರಣವನ್ನು ಸರಕಾರ ಸಿಓಡಿಗೆ ಒಪ್ಪಿಸುತ್ತಿದ್ದಂತೆಯೇ ಸಿಓಡಿ ಅಧಿಕಾರಿಗಳ ದಂಡು ಬಂಟ್ವಾಳಕ್ಕೆ ದಾಂಗುಡಿಯಿಟ್ಟಿತು. ಈ ದಂಡಿನ ನೇತೃತ್ವ ವಹಿಸಿದವರೇ ಅಂದಿನ ಸಿಓಡಿ ಎಸ್ಪಿ ಎಲ್. ರೇವಣ್ಣಸಿದ್ದಯ್ಯ.
ಮುಂದುವರಿಯುವುದು…





















