ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜ್ ಬೇಕು
ಉಡುಪಿ : ಸಿಪಿಐ(ಎಂ) ಹಲವಾರು ವರ್ಷಗಳಿಂದ ಉಡುಪಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂದು ಒತ್ತಾಯ ಮಾಡುತ್ತಾ ಬಂದಿದ್ದೇವೆ.
ಅದೇ ರೀತಿ ಹಲವು ಸಂಘ ಸಂಸ್ಥೆಗಳು ಮತ್ತು ಜಿಲ್ಲೆಯ ಗಣ್ಯ ವ್ಯಕ್ತಿಗಳು ಸಹ ಸರಕಾರಿ ಮೆಡಿಕಲ್ ಕಾಲೇಜು ಬೇಕೆಂದು ಆಗ್ರಹಿಸಿದ್ದಾರೆ. ಇದೀಗ ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ ಪ್ರಕಾಶ ಪಾಟೀಲರು, ಸರಕಾರಿ ಮೆಡಿಕಲ್ ಕಾಲೇಜುಗಳು ಇಲ್ಲದ 11 ಜಿಲ್ಲೆಗಳಲ್ಲಿ ಪಿ.ಪಿ.ಪಿ. ಮಾದರಿಯಲ್ಲಿ ಮೆಡಿಕಲ್ ಕಾಲೇಜು ಆರಂಭಿಸುವುದಾಗಿ ಹೇಳಿಕೆ ನೀಡಿರುತ್ತಾರೆ.
ಯಾವುದೇ ಕಾರಣಕ್ಕೂ ಪಿಪಿಪಿ ಮಾದರಿಯ ಕಾಲೇಜನ್ನು ಉಡುಪಿಯ ಜನತೆ ಈ ಕೆಳಗಿನ ಕಾರಣಗಳಿಗಾಗಿ ಒಪ್ಪುವುದಿಲ್ಲ.
1) ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಉಡುಪಿ ಜಿಲ್ಲೆಯಲ್ಲಿ ಸರಕಾರದ ಹೂಡಿಕೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಪ್ರಮಾಣದಲ್ಲಿದೆ.
2) ಖಾಸಗಿ ವೈದ್ಯಕೀಯ ಕಾಲೇಜು ಎಂಬುದು ಉಳ್ಳವರಿಗೆ ಮಾತ್ರ ಎಂಬಂತಾಗಿದೆ. ಪಿ ಪಿ ಪಿ ಎಂದರೆ ಸರಕಾರದಿಂದ ನೆಲ, ಜಲ, ವಿದ್ಯುತ್ ಪಡೆದು ಖಾಸಗಿಯವರು ನಡೆಸುವ ಉದ್ಯಮ ಎಂಬಂತಾಗಿದೆ.
3) ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆ ಆದಲ್ಲಿ ಜಿಲ್ಲೆಯ ಅರ್ಹ ಬಡ, ಮಧ್ಯಮ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶ ಸಿಗುತ್ತದೆ.
4) ಈಗಾಗಲೇ ಉಡುಪಿಯ ಮಕ್ಕಳ ಮತ್ತು ಮಹಿಳಾ ಸರಕಾರಿ ಆಸ್ಪತ್ರೆಯನ್ನು ಪಿಪಿಪಿ ಮಾದರಿಯಲ್ಲಿ ಶ್ರೀ ಬಿ.ಆರ್.ಶೆಟ್ಟಿಯವರ ಸಂಸ್ಥೆಗೆ ನೀಡಿ ಏನಾಗಿದೆ ಎಂದು ಸರ್ಕಾರಕ್ಕೆ ಗೊತ್ತಿದೆ. ಈಗ ಪುನ: ಸರಕಾರವೇ ನಡೆಸುತ್ತಿದೆ.
ಮೇಲೆ ಹೇಳಿದ ಕಾರಣಗಳಿಗಾಗಿ ಉಡುಪಿ ಜಿಲ್ಲೆಗೆ ಸರಕಾರಿ ವೈದ್ಯಕೀಯ ಕಾಲೇಜು ಬೇಕು ಹಾಗೂ ಪಿ ಪಿ ಪಿ ಮಾದರಿ ಬೇಡ ಎಂದು ಈ ಮೂಲಕ ಸಿಪಿಐ(ಎಂ) ಆಗ್ರಹಿಸುತ್ತದೆ ಎಂದು ಸಿಪಿಐ(ಎಂ)
ಉಡುಪಿ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.






































