ನಿರ್ಬಂಧಿತ ಜಾಗದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಕಡಿವಾಣ
ರಿಕ್ಷಾ ಚಾಲಕ ಮಾಲಕರಿಂದ ಗ್ರಾ.ಪಂ. ಮುತ್ತಿಗೆ, ಕಟ್ಟಡ ಸಾಮಾಗ್ರಿಗಳ ತೆರವು
ಕಾರ್ಕಳ : ಬೆಳ್ಮಣ್ಣು ಬಸ್ ನಿಲ್ದಾಣದಲ್ಲಿ ಅನಧೀಕೃತ ಬಸ್ ತಂಗುದಾಣ ನಿರ್ಮಾಣಗೊಳಿಸುವ ಗ್ರಾ.ಪಂ.ನಿರ್ಧಾರಕ್ಕೆ ಕಡಿವಾಣ ಬಿದ್ದಿದೆ. ಲೋಕೋಪಯೋಗಿ ಇಲಾಖೆಯ ಅನುಮತಿ ಪಡೆಯದೆ ಕಟ್ಟಡ ನಿರ್ಮಾಣಕ್ಕೆ ಮುಂದಾಗ ಬೆಳ್ಮಣ್ಣು ಗ್ರಾ.ಪಂ.ಗೆ ಬಾರೀ ಮುಖಭಂಗವಾಗಿದೆ.

ಕಾರ್ಕಳ-ಪಡುಬಿದ್ರಿ ರಸ್ತೆ ನಿರ್ಮಾಣದ ವೇಳೆ ಕೆಶಿಫ್ನಿಂದ ನಡೆದ ಕಾಮಗಾರಿ ಸಂದರ್ಭ, ಇದೇ ಸ್ಥಳಕ್ಕೆ ಗ್ರಾ.ಪಂ. ೨೦.೫೪ ಲಕ್ಷ ರೂ. ಪರಿಹಾರ ಮೊತ್ತವನ್ನು ಸ್ವೀಕರಿಸಿತ್ತು.
ಬಳಿಕ ಭೂಸ್ವಾಧೀನ ಕೂಡಾ ನಡೆದಿತ್ತು.
ಲೋಕೋಪಯೋಗಿ ಇಲಾಖೆಗೆ ರಸ್ತೆ ಹಸ್ತಾಂತರಗೊಂಡಿತ್ತು. ಇದೀಗ ತಂಗುದಾಣ ಇಲ್ಲ ಎನ್ನುವ ನೆಪವೊಡ್ಡಿ ಅದೇ ಸ್ಥಳದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಗ್ರಾ.ಪಂ. ಮುಂದಾಗಿತ್ತು. ಕಾನೂನು ಬಾಹಿರ ಕೃತ್ಯವನ್ನು ವಿರೋಧಿಸಿ ರಿಕ್ಷಾ ಚಾಲಕ ಮತ್ತು ಮಾಲಕರು ಹಾಗೂ ಸಾರ್ವಜನಿಕರು ಪ್ರತಿಭಟನೆಗಿಳಿದಿದ್ದರು. ಬೆಳ್ಮಣ್ಣು ಗ್ರಾ.ಪಂ.ಗೂ ಮುತ್ತಿಗೆ ಹಾಕಿದ್ದರು.
ವಿದ್ಯಾಮಾನಗಳು ವಿಕೋಪಕ್ಕೆ ತಲುಪಿ, ತಪ್ಪಿನ ಅರಿವಾಗುತ್ತಿದ್ದಂತೆ ಕಟ್ಟಡ ನಿರ್ಮಾಣಕ್ಕೆ ತಂದಿದ್ದ ಸಾಮಾಗ್ರಿಗಳನ್ನು ವಾಹನದಲ್ಲಿ ತುಂಬಿಸಿ ಗುತ್ತಿಗೆದಾರರು ಪರಾರಿಯಾಗಿದ್ದಾರೆ.



ಆಗಿದ್ದೇನು ?
ಇದೇ ಗ್ರಾ.ಪಂ. ಕಳೆದ ಆರೇಳು ವರ್ಷದ ಹಿಂದೆ ೨೦ ಲಕ್ಷ ರೂ. ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕೆ ಮುಂದಾಗಿತ್ತು. ಕಾಮಗಾರಿಗೆ ಶಂಕು ಸ್ಥಾಪನೆ ನೆರವೇರಿಸಿ, ಕಟ್ಟಡಕ್ಕೆ ಆಧಾರಸ್ತಂಭದ ಕಾಮಗಾರಿಯನ್ನು ಆರಂಭಿಸಿತ್ತು. ಅಂದಿನ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಆದೇಶದಂತೆ ಕಾಮಗಾರಿ ಸ್ಥಗಿತಗೊಂಡಿತ್ತು.
ಈಗ ಮತ್ತೆ ಗ್ರಾ.ಪಂ. ಹೊಸ ನಾಟಕವನ್ನಾಡಿ, ಯಾರಿಗೋ ವೈಯಕ್ತಿಕ ಲಾಭ ಮಾಡಲು ಮುಂದಾಗಿದೆ. ರಸ್ತೆಯ ಮುಂಭಾಗದಲ್ಲಿ ಕೆಶೀಫ್ನಿಂದ ನಿರ್ಮಾಣಗೊಂಡ ಸುಂದರ ತಂಗುದಾಣವಿದ್ದರೂ, ಅದರ ಸ್ವಚ್ಚತೆಯನ್ನು ಕಾಪಾಡಿ ಸಾರ್ವಜನಿಕರಿಗೆ ಉಪಯೋಗಿಸುವಲ್ಲಿ ಗ್ರಾ.ಪಂ. ವೈಫಲ್ಯ ಸಾಧಿಸಿರುವುದು ಕಂಡು ಬಂದಿದೆ.
ಗುರುವಾರ ಅದೇ ಸ್ಥಳದಲ್ಲಿ ಕಾಮಗಾರಿ ಆರಂಭಿಸಲು ಬೆಳ್ಮಣ್ ಗ್ರಾ.ಪಂ. ಮುಂದಾಗಿದ್ದು, ಸ್ಥಳೀಯರು ಗ್ರಾ.ಪಂ.ಗೂ ಮುತ್ತಿಗೆ ಹಾಕಿದ್ದರು.
ಗ್ರಾ.ಪಂ.ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.





















