9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಸಜ್ವಾನ್ ಹುಸೈನ್ ಬಂಧನ

Picture of RB NEWS

RB NEWS

Bureau Report


ಮಂಗಳೂರು, ಫೆ. 18: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ಹಾಗೂ ಉಡುಪಿ ಜಿಲ್ಲೆ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ನಡೆದ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ರೌಡಿಶೀಟರ್‌ರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹಳೆಯಂಗಡಿ ವಿಲೇಜ್ ನಿವಾಸಿ ಸಜ್ವಾನ್ ಹುಸೈನ್ (42) ಎಂದು ಗುರುತಿಸಲಾಗಿದೆ. ಈತನ ವಿರುದ್ಧ 02 ಕೊಲೆ, 04 ಕೊಲೆಯತ್ನ, ಗ್ಯಾಂಗ್ ರೇಪ್, 05 ದರೋಡೆ, ಅಪಹರಣ, ಸುಲಿಗೆ, ಪೊಲೀಸ್ ಅಧಿಕಾರಿಗಳ ಮೇಲೆ ಹಲ್ಲೆ, ಕಳ್ಳತನ, ಸರಗಳ್ಳತನ, ಜೈಲಿನಲ್ಲಿ ಸಹ ಖೈದಿಗಳ ಮೇಲೆ ಹಲ್ಲೆ, ಅಕ್ರಮ ಕೂಟ ಸೇರಿ ಹಲ್ಲೆ, ಕೊಲೆ ಬೆದರಿಕೆ, ಕರ್ತವ್ಯಕ್ಕೆ ಅಡ್ಡಿ, ದರೋಡೆಗೆ ತಯಾರಿ ಮತ್ತು ಸಂಚು ಸೇರಿದಂತೆ ಸುಮಾರು 21 ಪ್ರಕರಣಗಳು ದಾಖಲಾಗಿವೆ.
ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2008ರಲ್ಲಿ ದಾಖಲಾಗಿದ್ದ ಪ್ರವೀಣ್ ಅಪಹರಣ, ದರೋಡೆ ಮತ್ತು ಕೊಲೆ ಪ್ರಕರಣದಲ್ಲಿ 28-02-2020 ರಂದು ಮಾನ್ಯ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತ್ತು. ಅಲ್ಲದೆ ಕಾರ್ಕಳ ಠಾಣಾ ವ್ಯಾಪ್ತಿಯಲ್ಲಿ 2008ರ ದರೋಡೆ ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯವು 3 ವರ್ಷಗಳ ಶಿಕ್ಷೆ ವಿಧಿಸಿತ್ತು.
ಈತನ ವಿರುದ್ಧ 13 ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿ ಬಾಕಿ ಇದ್ದು, ನ್ಯಾಯಾಲಯದಿಂದ ದಸ್ತಗಿರಿ ವಾರಂಟ್‌ಗಳು ಜಾರಿಯಾಗಿದ್ದವು. 05 ಪ್ರಕರಣಗಳಲ್ಲಿ ನ್ಯಾಯಾಲಯವು ಎಲ್.ಪಿ.ಸಿ (Long Pending Case) ಎಂದು ಘೋಷಿಸಿತ್ತು.
2017ರಲ್ಲಿ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತನ್ನ ಸಹಚರರೊಂದಿಗೆ ಲೆಕ್ಕಿ ಸಹ್ವಾನ್ ಎಂಬಾತನನ್ನು ಅಪಹರಿಸಿ ಹಲ್ಲೆ ನಡೆಸಿ ಕೊಲೆ ಮಾಡಿ ಆಗುಂಬೆ ಘಾಟಿಯಲ್ಲಿ ಶವ ಎಸೆದ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದನು. ಬಳಿಕ ದಸ್ತಗಿರಿಗೆ ಸಿಗದೇ ತಲೆಮರೆಸಿಕೊಂಡಿದ್ದನು.
ಪರಾರಿಯಾದ ಬಳಿಕ ಆಂಧ್ರ ಪ್ರದೇಶದ ರಾಯಚೋಟೆ ಪ್ರದೇಶದಲ್ಲಿ ತನ್ನ ಹೆಸರನ್ನು ಉಮ್ಮರ್ ಮೊಹಮ್ಮದ್ ನಾಸಿರ್ ಎಂದು ಬದಲಿಸಿ ನಕಲಿ ಆಧಾರ್ ಕಾರ್ಡ್ ಹಾಗೂ ಪಾಸ್‌ಪೋರ್ಟ್ ಮಾಡಿಸಿಕೊಂಡು 2018ರಿಂದ ವಿದೇಶಕ್ಕೆ ಪರಾರಿಯಾಗಿದ್ದನು. ವಿದೇಶಗಳಲ್ಲಿ ಮಂಗಳೂರು ಮೂಲದ ವ್ಯಾಪಾರಸ್ಥರಿಗೆ ಬಲವಂತದ ಹಣ ವಸೂಲಿ (ಎಕ್ಸ್ಟೋರ್ಷನ್) ನಡೆಸಿದ ಬಗ್ಗೆ ದೂರುಗಳು ದಾಖಲಾಗಿದ್ದವು.
ಸುಮಾರು 9 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top