ಕಾಲೆಳೆದು ಕುಗ್ಗಿಸುವವರನ್ನು ಕಡೆಗಣಿಸಿ ಮುನ್ನಡೆಯಬೇಕು : ಪ್ರಜ್ವಲಾ ಶೆಣೈ
ಕಾರ್ಕಳ : ಕಾಲೆಳೆದು ಕುಗ್ಗಿಸುವ ಕೆಟ್ಟ ಪ್ರವೃತ್ತಿಯವರನ್ನು ಕಡೆಗಣಿಸಿ ಮುನ್ನಡೆಯುವ ಛಲ ಬೆಳೆಸಿಕೊಳ್ಳಬೇಕು .ದೇಹಕ್ಕೆ ಗಾಯವಾದಾಗ ಸಹಿಸಿಕೊಳ್ಳಬಹುದು .ಭಾವನೆಗಳಿಗೆ ಪೆಟ್ಟಾದಾಗ , ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅದನ್ನು ಸಹಿಸಿ ಸುಮ್ಮನೆ ಕೂರುವ ಜಾಯಮಾನ ಒಳ್ಳೆಯದಲ್ಲ . ಇಂತಹ ಕಠಿಣ ಸಂದರ್ಭಗಳಲ್ಲಿ ಅಂತಹ ಹೀನ ಪ್ರವೃತ್ತಿಯ ವ್ಯಕ್ತಿಗಳಿಂದ ದೂರವಿದ್ದು , ನಮ್ಮದೇ ದಾರಿಯಲ್ಲಿ ಸಾಗುವುದು ನಮ್ಮ ಏಳಿಗೆಗೆ ಶ್ರೇಯಸ್ಕರ ‘ ಎಂದು ಶಿಕ್ಷಕಿ , ಲೇಖಕಿ ಪ್ರಜ್ವಲಾ ಶೆಣೈ ಹೇಳಿದ್ದಾರೆ .
ಅವರು ಕಾರ್ಕಳ ಹೋಟೆಲ್ ಪ್ರಕಾಶ್ ಸಂಭ್ರಮ ಸಭಾಂಗಣದಲ್ಲಿ ಹೊಸಸಂಜೆ ಪ್ರಕಾಶನದ 32 ನೆಯ ಪ್ರಕಟಣೆ , ತಾವೇ ಬರೆದ 42 ಲೇಖನಗಳ ಸಂಕಲನ ‘ ಭರವಸೆಯ ಹೆಜ್ಜೆಗಳು ‘ ಕೃತಿ ಲೋಕಾರ್ಪಣೆ ಸಮಾರಂಭದಲಿ ಮಾತನಾಡಿದರು .
ಬದುಕಿನ ಏಳು ಬೀಳುಗಳಲ್ಲಿ ಕೈ ಹಿಡಿದು ಮುನ್ನಡೆಸಿದವರ ಋಣ ಹಣ ಕೊಟ್ಟು ತೀರಿಸಲಾಗದು .
ಕಡುಬಡತನದ ಸಂಕಷ್ಟದ ಸಮಯದಲ್ಲಿ ಆಶ್ರಯ ನೀಡಿ ಧೈರ್ಯ ತುಂಬಿ ಮಾನಸಿಕವಾಗಿ ಗಟ್ಟಿಗೊಳಿಸಿದ ಹಿರಿಯರು ಸದಾ ಸ್ಮರಣೀಯರು .ಕತ್ತಲೆಯಲ್ಲಿ ಬೆಳಕಾಗಿ ದಾರಿ ತೋರಿದವರನ್ನು ಎಂದಿಗೂ ಮರೆಯಬಾರದು ‘ ಎಂದು ಅವರು ನುಡಿದರು .
ಉಡುಪಿ ಜಿಲ್ಲಾ ಕ ಸಾ ಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅಧ್ಯಕ್ಷತೆ ವಹಿಸಿದ್ದರು .
ಪ್ರಭಾವತಿ ಭಕ್ತ ಕೃತಿ ಬಿಡುಗಡೆಗೊಳಿಸಿ ಲೇಖಕಿಗೆ ಯಶಸ್ಸನ್ನು ಹಾರೈಸಿದರು .
ಕೃತಿ ವಿಮರ್ಶೆ ಮಾಡಿ ಮಾತನಾಡಿದ ಕಾರ್ಕಳ ತಾಲೂಕು ಕ ಸಾ ಪ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ‘ ನಮ್ಮೊಳಗೆ ನಾವು ತಪ್ಪುಗಳನ್ನು ತುಂಬಿಕೊಡು ಇನ್ನೊಬ್ಬರ ತಪ್ಪು ಎತ್ತಿ ತೋರಿಸುವುದು ಮೂರ್ಖತನ .ತಪ್ಪು ಮಾಡದೇ ಏನೂ ಕಲಿಯಲಾಗದು .
ತಪ್ಪುಗಳನ್ನು ತಿದ್ದಿಕೊಂಡು ಪಾಠ ಕಲಿತು , ಮೌಲ್ಯಗಳ ದಾರಿಯಲ್ಲಿ ಮುನ್ನಡೆದು ಆಚಾರ ವಿಚಾರ ವಿವೇಕ ವಿವೇಚನೆಗಳಿಂದ ಶ್ರೇಷ್ಠ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು . ಈ ದಿಸೆಯಲ್ಲಿ ಕಲೆ ಸಾಹಿತ್ಯ ಸಂಸ್ಕ್ರತಿಗಳು ಬದುಕಿನ ಯಶಸ್ಸಿನ ಪೂರಕ ಶಕ್ತಿಯಾಗಿ ಸಹಕರಿಸುತ್ತವೆ ‘ ಎಂದರು .
ನಿವೃತ್ತ ಶಿಕ್ಷಕ ಗಣಪತಿ ಪೈ ಮುದ್ರಾಡಿ ಮುಖ್ಯ ಅತಿಥಿಯಾಗಿ ಮಾತನಾಡಿ ‘ ಬದುಕಿನ ಕಷ್ಟಕಾರ್ಪಣ್ಯ , ನೋವುಸಂಕಟ ಸ್ವತಃ ಅನುಭವಿಸಿ ಮೂಡಿಬಂದ ಬರಹ ಜನಸಾಮಾನ್ಯರ ಮನಃಪಟಲದಲ್ಲಿ ಅಚ್ಚಳಿಯದೆ ನಿಲ್ಲುತ್ತದೆ ” ಎಂದರು .
ಉದ್ಯಮಿ ಹರೀಶ ಶೆಣೈ , ಪ್ರಕಾಶಕ ಆರ್ . ದೇವರಾಯ ಪ್ರಭು ಉಪಸ್ಥಿತರಿದ್ದರು .
ಪ್ರತ್ಯುಷಾ ಶೆಣೈ ಸ್ವಾಗತಿಸಿದರು .
ವಿಶ್ವಕುಮಾರ್ ಭಟ್ ಮುಂಡ್ಕೂರು ಕಾರ್ಯಕ್ರಮ ನಿರ್ವಹಿಸಿದರು .