42 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಾರಾಷ್ಟ್ರದಲ್ಲಿ ಬಂಧನ
RB NEWS
Bureau Report
42 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಹಾರಾಷ್ಟ್ರದಲ್ಲಿ ಬಂಧನ
ಕಾರ್ಕಳ: ಸುಮಾರು 42 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಪಳ್ಳಿ ಗ್ರಾಮದ ನಿವಾಸಿ ರವೀಂದ್ರ ಶೆಟ್ಟಿ (65) ಎಂಬಾತನನ್ನು ಕಾರ್ಕಳ ನಗರ ಪೊಲೀಸರು ಮಹಾರಾಷ್ಟ್ರದಲ್ಲಿ ಪತ್ತೆಹಚ್ಚಿ ಬಂಧಿಸಿದ್ದಾರೆ. ದೀರ್ಘಕಾಲದಿಂದ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡಿದ್ದ ರವೀಂದ್ರ ಶೆಟ್ಟಿಯ ಪತ್ತೆಗಾಗಿ ಕಾರ್ಕಳ ನಗರ ಪೊಲೀಸರು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದರು. ಈ ವೇಳೆ ಆತ ಮಹಾರಾಷ್ಟ್ರದ ಮುಲುಂಡ್ ಪಶ್ಚಿಮದಲ್ಲಿ ವಾಸವಾಗಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಮಾಹಿತಿಯ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಪೊಲೀಸರು ಸೆಪ್ಟೆಂಬರ್ 1ರಂದು ಮುಲುಂಡ್ ಪಶ್ಚಿಮದಲ್ಲಿ ರವೀಂದ್ರ ಶೆಟ್ಟಿಯನ್ನು ಬಂಧಿಸಿದ್ದಾರೆ. ಬಳಿಕ ಸೆಪ್ಟೆಂಬರ್ 2ರಂದು ಆತನನ್ನು ಕಾರ್ಕಳ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಪೊಲೀಸ್ ಪ್ರಕಟಣೆಯ ಪ್ರಕಾರ, ನ್ಯಾಯಾಲಯವು ರವೀಂದ್ರ ಶೆಟ್ಟಿಗೆ ಜಾಮೀನು ಮಂಜೂರು ಮಾಡಿದೆ. 42 ವರ್ಷಗಳ ಬಳಿಕ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪತ್ತೆಹಚ್ಚುವಲ್ಲಿ ಕಾರ್ಕಳ ನಗರ ಪೊಲೀಸರ ನಿರಂತರ ಪ್ರಯತ್ನ ಫಲ ನೀಡಿದೆ.