Writing
ಕಾನೂನು ಸಮ್ಮತ ಮಾಂಸ ಸಾಗಾಟ ತಡೆದರೆ 10 ವರ್ಷ ಸಜೆ: ಅಕ್ರಮ ಗೋಹತ್ಯೆ, ಸಾಗಾಟಕ್ಕೆ ಕಠಿಣ ಕ್ರಮ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ನಿಲುವು – ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ
ಮಂಗಳೂರು:
ನಗರ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ ಅಕ್ರಮ ಗೋಹತ್ಯೆ ಅಥವಾ ಕಾನೂನುಬಾಹಿರ ಜಾನುವಾರು ಸಾಗಾಟ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ನೇರವಾಗಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು. ಇಂತಹ ಕೃತ್ಯಗಳನ್ನು ಬೇಟೆಯಾಡಿ ತಡೆಯಲು ಇಲಾಖೆ ಸಂಪೂರ್ಣ ಬದ್ಧವಾಗಿದೆ. ಆದರೆ, ಇದೇ ನೆಪದಲ್ಲಿ ಕಾನೂನುಬದ್ಧವಾಗಿ ನಡೆಯುವ ಮಾಂಸ ಸಾಗಾಟವನ್ನು ತಡೆಯುವುದು, ವಾಹನ ಅಡ್ಡಗಟ್ಟಿ ಗೂಂಡಾಗಿರಿ ನಡೆಸುವುದು ಅಥವಾ ಕಾನೂನನ್ನು ಕೈಗೆತ್ತಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಅಂತಹವರ ವಿರುದ್ಧ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾದ ಕಠಿಣ ಕಲಂ ಅಡಿ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಪರಿಶೀಲನೆಯಲ್ಲಿ ದೃಢಪಟ್ಟ ಅಧಿಕೃತ ಸಾಗಾಟ:
ನಗರಕ್ಕೆ ಸಾಗಿಸಲಾಗುತ್ತಿದ್ದ ಮಾಂಸದ ವಾಹನವೊಂದರ ಕುರಿತು ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ತಪಾಸಣೆ ನಡೆಸಿದ್ದು, ಆ ಮಾಂಸವನ್ನು ಕೇರಳದಿಂದ ಖರೀದಿಸಿ ಮಂಗಳೂರಿನ ಅಧಿಕೃತ ಪರವಾನಗಿ ಹೊಂದಿರುವ ಮಾಂಸದ ಮಳಿಗೆಗೆ ತರಲಾಗುತ್ತಿತ್ತು ಎಂಬುದು ದಾಖಲೆಗಳ ಪರಿಶೀಲನೆಯಿಂದ ಸಾಬೀತಾಗಿದೆ.
ಕಾನೂನಿನ ಸ್ಪಷ್ಟನೆ – ದೌರ್ಜನ್ಯ ಎಸಗಿದರೆ ಜೈಲು:
ಕರ್ನಾಟಕದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯಡಿ ಹಸುಗಳ ಹತ್ಯೆ ಅಪರಾಧವಾಗಿದೆ. ಆದರೆ, ಚಾಲ್ತಿಯಲ್ಲಿರುವ ಕಾನೂನುಬದ್ಧ ನಿಯಮಗಳ ಪ್ರಕಾರ ಅಧಿಕೃತ ಮಾಂಸದ ಸಾಗಾಟ ಮತ್ತು ಮಾರಾಟಕ್ಕೆ ಕಾನೂನಿನಲ್ಲಿ ಸಂಪೂರ್ಣ ಅವಕಾಶವಿದೆ.
ಕಾನೂನಿನ ಚೌಕಟ್ಟಿನಲ್ಲಿ ಅನುಮತಿ ಪಡೆದು ಸಾಗಾಟ ನಡೆಸುತ್ತಿರುವ ಯಾವುದೇ ವಾಹನವನ್ನು ತಡೆಯುವುದು, ಬೆದರಿಕೆ ಹಾಕುವುದು, ದಾಳಿ ನಡೆಸುವುದು ಅಥವಾ ಅಡ್ಡಿಪಡಿಸುವುದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಅಂತಹ ಕೃತ್ಯಗಳಿಗೆ 10 ವರ್ಷಗಳ ತನಕ ಜೈಲು ಶಿಕ್ಷೆ ವಿಧಿಸಲು ಕಾಯ್ದೆಯಲ್ಲಿ ಅವಕಾಶವಿದೆ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ವಾಹನ ಅಡ್ಡಗಟ್ಟಿದವರ ವಿರುದ್ಧ ಪ್ರಕರಣ ದಾಖಲಿಸಲು ಸಿದ್ಧತೆ:
ಬೆಳಗಿನ ಜಾವ ಈ ವಾಹನವನ್ನು ಕೆಲವರು ಅಡ್ಡಗಟ್ಟಲು ಯತ್ನಿಸಿದ್ದಾರೆ ಎಂಬ ಬಗ್ಗೆ ಪೊಲೀಸ್ ಠಾಣೆಗೆ ಈಗಾಗಲೇ ದೂರು ಬಂದಿದೆ. ಪ್ರಾಥಮಿಕ ತನಿಖೆಯಲ್ಲಿ ಈ ಆರೋಪ ನಿಜವೆಂದು ದೃಢಪಟ್ಟರೆ, ಕಾನೂನು ಕೈಗೆತ್ತಿಕೊಂಡ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲಾಗುವುದು.
ಯಾರಾದರೂ ಅಕ್ರಮ ಗೋಹತ್ಯೆ ಅಥವಾ ಅಕ್ರಮ ಜಾನುವಾರು ಸಾಗಾಟದ ಮಾಹಿತಿ ಹೊಂದಿದ್ದರೆ, ತಾವೇ ಕಾನೂನು ಕೈಗೆತ್ತಿಕೊಳ್ಳುವ ಬದಲು ತಕ್ಷಣ ಪೊಲೀಸರಿಗೆ ಮಾಹಿತಿ ರವಾನಿಸಬೇಕು. ಪೊಲೀಸರೇ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.






































