[t4b-ticker]

ಪತ್ನಿಯೊಂದಿಗೆ ಅನೈತಿಕ ಸಂಬಂಧದ ಶಂಕೆ: ಬೈಕ್‌ಗೆ ಟಾಟಾ ಸುಮೋ ಡಿಕ್ಕಿ, ಕೊಲೆಗೆ ಯತ್ನ

Picture of RB NEWS

RB NEWS

Bureau Report

ಬೆಳ್ತಂಗಡಿ: ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬರನ್ನು ವಾಹನ ಢಿಕ್ಕಿ ಹೊಡೆಸಿ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಧರ್ಮಸ್ಥಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಘಟನೆ ಜುಲೈ 30ರಂದು ಸಂಜೆ 5.45ರ ಸುಮಾರಿಗೆ ನಡೆದಿದೆ. ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಬಾಲಕೃಷ್ಣ ಅವರು ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ, ಧರ್ಮಸ್ಥಳ ಕಂಚಿಮಾರು ನಿವಾಸಿ ಶರತ್ ಚಲಾಯಿಸುತ್ತಿದ್ದ KA-05-AD-6341 ನೋಂದಣಿ ಸಂಖ್ಯೆಯ ಟಾಟಾ ಸುಮೋ ವಾಹನವು ಹಿಂದಿನಿಂದ ಬಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿಯ ಪರಿಣಾಮ ಬಾಲಕೃಷ್ಣ ಅವರು ಬೈಕ್ ಸಮೇತ ರಸ್ತೆಗೆ ಬಿದ್ದು, ತಲೆ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಪತ್ನಿಯೊಂದಿಗೆ ಅನೈತಿಕ ಸಂಬಂಧದ ಶಂಕೆ

ಬಾಲಕೃಷ್ಣ ಅವರು ಕೆಲಸ ಮಾಡುತ್ತಿದ್ದ ಖಾಸಗಿ ಆಸ್ಪತ್ರೆಯಲ್ಲೇ ಆರೋಪಿಯ ಪತ್ನಿಯೂ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತನ್ನ ಪತ್ನಿಯೊಂದಿಗೆ ಬಾಲಕೃಷ್ಣ ಅವರಿಗೆ ಅನೈತಿಕ ಸಂಬಂಧವಿದೆ ಎಂಬ ಅನುಮಾನ ಶರತ್‌ನಲ್ಲಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕಾರಣದಿಂದ ಬಾಲಕೃಷ್ಣ ಅವರಿಗೆ ಒಂದು ಗತಿ ಕಾಣಿಸಬೇಕೆಂಬ ಉದ್ದೇಶದಿಂದ ಶರತ್ ಸುಮಾರು ಆರು ತಿಂಗಳಿನಿಂದ ಅವರನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದೆ ವಾಹನ ಢಿಕ್ಕಿ ಹೊಡೆದು ಕೊಲೆ ಮಾಡುವುದಾಗಿ ಬಾಲಕೃಷ್ಣ ಅವರಿಗೆ ಜೀವ ಬೆದರಿಕೆ ಹಾಕಿದ್ದಾನೆ. ಇದೇ ದ್ವೇಷದ ಮುಂದುವರಿದ ಭಾಗವಾಗಿ ವಾಹನ ಢಿಕ್ಕಿ ಹೊಡೆಸಿ ಕೊಲೆ ಮಾಡಲು ವಿಫಲ ಯತ್ನ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಳಿಕ ಆರೋಪಿ ಶರತ್ ಪರಾರಿಯಾಗಿದ್ದ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದರು.

ಆರೋಪಿ ಬಂಧನ

ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು, ಖಚಿತ ಮಾಹಿತಿ ಮೇರೆಗೆ ಆಗಸ್ಟ್ 22ರಂದು ಬೆಳಗ್ಗೆ 8 ಗಂಟೆಗೆ ಆರೋಪಿಯನ್ನು ಬಂಧಿಸಿದ್ದಾರೆ. ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಸಮರ್ಥ್ ಆರ್. ಗಣಿಗೇರ್ ಅವರ ನೇತೃತ್ವದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಶರತ್‌ನನ್ನು ಬಂಧಿಸಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯವು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಪ್ರಕರಣದ ಕುರಿತು ಧರ್ಮಸ್ಥಳ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಈ ರೀತಿಯ ಇನ್ನಷ್ಟು ಸುದ್ದಿಗಳು

error: Content is protected !!
Scroll to Top