ಹೊಸ್ಮಾರಿನ ಪ್ರೇಮ್ ಕುಮಾರ್ ಅವರು ಅಕಾಲದಲ್ಲಿ ನಮ್ಮನ್ನು ಅಗಲಿದ್ದಾರೆ. ಅವರೊಬ್ಬ ದಿನಸಿ ಅಂಗಡಿಯನ್ನು ನಡೆಸುತ್ತಿದ್ದವರು. ಸಾಮಾಜಿಕ,ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡವರೇ ಆಗಿದ್ದವರಾದರೂ ಅವರು ಆ ಊರಿನ ಒಬ್ಬ #ಅಜಾತಶತ್ರು ಆಗಿದ್ದರು ಅನ್ನುವುದು ಅತ್ಯಂತ ಸೂಕ್ತ ಮಾತಾಗುತ್ತದೆ. ಸಹಾಯ ಕೇಳಿದವನಿಗೆ ಇಲ್ಲವೆನ್ನುವ ಜಾಯಮಾನವೇ ಅವರದಲ್ಲವಾಗಿತ್ತು. ಇಲ್ಲ ಮಾತನ್ನು ತಮಾಷೆಗಾಗಿಯೂ ಉಚ್ಚರಿಸಿದಲ್ಲದವರಾಗಿದ್ದರು. ಆ ಊರು ಗ್ರಾಮ,ನೆರೆಯ ಗ್ರಾಮ,ದೂರದ ಗ್ರಾಮದವರು ಅಲ್ಲಿಗೆ ಬಂದು ಸಹಾಯ ಮತ್ತು ಸಾಲ ಎರಡನ್ನೂ ಪಡೆದು ಮನೆ ರಿಪೇರಿ,ಶಾಲೆಗೆ ಮಕ್ಕಳನ್ನು ದಾಖಲು ಮಾಡುವುದಕ್ಕೆ ಅಂಗಿ,ಕೊಡೆ ಪುಸ್ತಕ ಇತ್ಯಾದಿಗಳಿಗೆ, ಮನೆ ಮಕ್ಕಳ ಮದುವೆಗೆ ,ಆಸ್ಪತ್ರೆಯ ಹಣ ಪಾವತಿಗೆ,ಸತ್ತವನ ಸಮಾರಾಧನೆಗೆ ಹೀಗೆ ಎಲ್ಲವನ್ನೂ ಸುಧಾರಿಸುವುದಕ್ಕೆ ಸದಾ ಕೈ ಚಾಚಿ ಸಹಕಾರ ಕೊಡುತ್ತಿದ್ದ ಅಪೂರ್ವ ವ್ಯಕ್ತಿತ್ವದ ಪ್ರೇಮ್ ಕುಮಾರ್ ಇಹಲೋಕ ತ್ಯಜಿಸಿದ್ದಾರೆ ಅನ್ನುವಾಗ ಈ ಹೊತ್ತಿನಲ್ಲಿ ಬೀಳುತ್ತಿರುವ ಮಳೆಯ ಒಂದೊಂದು ಹನಿಯೂ ಕೂಡಾ ಧರೆಗಿಳಿವ #ಭಾಷ್ಪಾಂಜಲಿ ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ.
ನವೋದಯ,ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಗುಂಪು ಆ ಸಂಸ್ಥೆಗಳು ಹುಟ್ಚುವುದಕ್ಕೆ ಮುಂಚೆ ಮತ್ತು ಆ ನಂತರವೂ ಅನೇಕ ಗ್ರಾಮಗಳಲ್ಲಿನ ಬಡಬಗ್ಗರು ತಮ್ಮ ಮನೆಯ ಮಕ್ಕಳಿಗೆ ಮದುವೆ ಮಾಡಿಸುವುದಕ್ಕೆ ಸಹಾಯ ಮತ್ತು ಸಾಲ ಪಡೆದುಕೊಂಡದ್ದೇ ಅಣ್ಣಾಜಿಯವರಿಂದ ಅನ್ನುವುದಕ್ಕೆ ಆ ಕುಟುಂಬಗಳೇ ಸಾಕ್ಷಿ. ಮದುವೆಗಾಗುವಾಗ ಅಣ್ಣಾಜಿಯವರಲ್ಲಿ ಹಣ ಕೇಳಿದರಾಯಿತು ಅಂತ ಧೈರ್ಯದಲ್ಲಿ ಮಗಳಿಗೆ ಮದುವೆ ವರ ನಿಶ್ಚಿತಾರ್ಥ ಮಾಡಿದ್ದ ಅದೆಷ್ಟೋ ಬಡ ಕುಟುಂಬಗಳಿವೆ ಎಂದರೆ ಪ್ರತಿಯೊಬ್ಬನಿಗೂ ಅಚ್ಚರಿ ತರುವ ಸಂಗತಿಯಿದು. ಅಣ್ಣಾಜಿಯವರ ಮೇಲಿನ ಪ್ರೀತಿ ವಿಶ್ವಾಸದಲ್ಲಿ ತಮ್ಮ ಬದುಕನ್ನು ಸಾರ್ಥಕ ಮಾಡಿಕೊಂಡ ಕುಟುಂಬಗಳ ಬಗ್ಗೆ ವರದಿ ಮಾಡುವುದಾದರೂ ಸಾವಿರ ಪುಟಗಳೂ ಮೀರಬಹುದು. ಗ್ರಾಮೀಣ ಪ್ರದೇಶದಲ್ಲಿ ದಿನಸಿ ಅಂಗಡಿ ವ್ಯಾಪಾರ ಪ್ರಾರಂಭ ಮಾಡುವುದಕ್ಕೆ ಯಥೇಚ್ಚವಾದ ಬೆಂಬಲ ಕೊಡುತ್ತಿದ್ದ ಒಬ್ಬ ನಿಸ್ವಾರ್ಥಿ ಮನುಷ್ಯನಾಗಿದ್ದರು. ಆತನ ಅಂಗಡಿಗೆ ರಖಂ ದರದಲ್ಲಿಯೇ ಸಾಮಾನುಗಳನ್ನು ತುಂಬಿಸಿಕೊಟ್ಟು ವ್ಯಾಪಾರ ನಡೆಯುತ್ತಿದ್ದಂತೆಯೇ ಸಂದಾಯ ಮಾಡುವಂತೆ ತನ್ನ ಮೆದು ಮಾತಿನಲ್ಲಿ ಕೇಳಿಕೊಳ್ಳುವುದಷ್ಟೇ ಆಗಿರುತ್ತಿತ್ತು. ಅನೇಕ ಮಂದಿ ಯುವಕರು ಬೇರೆ ಬೇರೆ ವ್ಯಾಪಾರೋದ್ಯಮದಲ್ಲಿ ಭಾರೀ ಯಶಸ್ಸು ಸಾಧಿಸಿದ್ದಾರೆ, ಕೋಟಿ ಬೆಲೆ ತೂಗುವ ಮನೆ ಕಟ್ಟಿಕೊಂಡು ನೆಮ್ಮದಿಯಾಗಿದ್ದಾರೆ.ಅವರಿಗೆ ಎಲ್ಲ ರೀತಿಯ ಸಹಕಾರ ನೀಡಿದವರೇ ಅಣ್ಣಾಜಿಯಾಗಿರುತ್ತಾರೆ. ಮದುವೆ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ತರಕಾರಿಯಿಂದ ಅಕ್ಕಿ ಮೆಣಸುವರೆಗೂ ಎಲ್ಲ ಸಾಮಾನುಗಳನ್ನು ಕೊಟ್ಟು ಆ ಮನೆಯವರಿಗೆ ನೆಮ್ಮದಿ ಕೊಡುತ್ತ ಬಂದವರು. ನಂತರದ ದಿನಗಳಲ್ಲಿ ಕೈಲಾದಷ್ಟು ಹಣವನ್ನು ಅವರಿಗೆ ಕೊಟ್ಟು ಸಂದಾಯ ಮಾಡುತ್ತಿದ್ದರು,ಅದು ಬೇರೆ ವಿಚಾರ. ಅದು ಮೊನ್ನೆ ತನಕವೂ ಇತ್ತು. ಅಂಥ ಒಬ್ಬ ವಿಶೇಷ ವ್ಯಕ್ತಿತ್ವವನ್ನು ನಾನು ಅವರಲ್ಲಿ ಮಾತ್ರ ಕಂಡಿರುವುದು.
ಸಾಮಾಜಿಕ ಸೇವೆ
ಯಾವುದೇ ಪರಿಸರದಲ್ಲಿ ದೇವಸ್ಥಾನ,ಬಸದಿ,ಪ್ರಾರ್ಥನಾ ಮಂದಿರ,ಶಾಲೆ ನಿರ್ಮಾಣ ಮಾಡುವಾಗಲೂ ಉದಾರ ದೇಣಿಗೆ ಕೊಡುತ್ತಿದ್ದ ಮೊದಲ ವ್ಯಕ್ತಿಯಾಗಿದ್ದರು. ಬಹುಶಃ ಅವರ ಧನಸಹಾಯ ಪಡೆದಿರದ ಅಂಥ ಕಟ್ಟಡಗಳು ಇರಲಿಕ್ಕಿಲ್ಲವೇನೊ. ಶಾಲಾ ಮಕ್ಕಳ ಚಟುವಟಿಕೆಗಳಿಗೆ,ಶಾಲೆಗಳಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಅಣ್ಣಾಜಿಯವರ ಸೇವೆಯೇ ಹೆಚ್ಚು. ಎಷ್ಟೋ ಸಂದರ್ಭಗಳಲ್ಲಿ ಅನೇಕರಿಗೆ ಅವರು ಈಗಿನ ಎಟಿಎಂ ನಂತೆಯೆ ಇದ್ದರು. ಅವರ ಅಂಗಡಿ ಬಾಗಿಲಲಿ ನಿಂತು”ಅಣ್ಣಾಜಿಯವರೆ ಅರ್ಜೆಂಟಾಗಿ ಇಷ್ಟು ನಗದು ಬೇಕಿತ್ತು” ಅಂತ ಕೇಳುವವರಿಗೂ ಸಹ ಕೈ ಚಾಚಿ ಕೊಡುವ ಔದಾರ್ಯವಂತನಾಗಿದ್ದರು. ಕೊಟ್ಟ ಹಣ ಮರಳಿ ವಾಪಾಸು ಬರುವುದೊ ಅಥವಾ ಇಲ್ಲವೊ ಅನ್ನುವ ಪ್ರಶ್ನೆಯನ್ನೆ ಹುಟ್ಟಿಸಿಕೊಳ್ಳದ ಒಂದು ವಿಶೇಷ ಉದಾರ ನೀತಿಯಲ್ಲಿ ಅವರು, “ಕೊಟ್ಟದ್ದು ತನಗೆ ಬಚ್ಚಿಟ್ಟದ್ದು ಪರರಿಗೆ “ ಅನ್ನುವ ಆದರ್ಶದಲ್ಲಿ ಬದುಕಿದ್ದಾರೆ.
ರಾಜಕೀಯ
ಅವರು ಸಾಮಾಜಿಕ ಚಟುವಟಿಕೆಯಲ್ಲಿಯೇ ಜನಪ್ರಿಯನಾಗಿದ್ದರು. ಕಂಬಳ ಕ್ರೀಡಾಪಟು ಕಂಗಿನಮನೆ ವಿಜಯ ಕುಮಾರ್ ಅವರ ಒತ್ತಾಯದಲ್ಲಿ ಆಗಿನ ಮಂಡಲ ಪಂಚಾಯತು ಸದಸ್ಯ ಸ್ಥಾನಕ್ಕೆ ಚುನಾವಣೆಗೆ ಇಳಿದು ಸದಸ್ಯರಾದರು. ನಂತರ ತಾಲೂಕು ಪಂಚಾಯತ್ ಸದಸ್ರದರು.ರಾಜಕೀಯದಲ್ಲೂ ಅವರಿಗೆ ಬಹಳ ಗೌರವದ ಸ್ಥಾನ ದೊರಕಿತ್ತು.
ಪ್ರೀತಿ_ಜನಪ್ರಿಯತೆ
ಅಣ್ಣಾಜಿಯವರು ತನ್ನ ಖಾಯಿಲೆಯ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕಳೆದ ಒಂದು ವಾರದಿಂದ ಊರಿನ ಬಡ ಜನರು ,ರಿಕ್ಷಾ ಮಾಲಕ,ಚಾಲಕರು ಮಂತಾದವರು ತಂಡ ತಂಡವಾಗಿ ಅಲ್ಲಿಗೆ ಹೋಗಿ ಅವರ ಆರೋಗ್ಯ ಸ್ಥಿತಿಯನ್ನು ತಿಳಿದುಕೊಂಡು ಬರುತ್ತಿದ್ದರು. ಅವರ ತಂದೆ ಆದಿರಾಜ ಮುರಾಯರ್ ಕೂಡಾ ಮುಳಿಕಾರ್ ನಲ್ಲಿ ದಿನಸಿ ವ್ಯಾಪಾರ ಮಾಡಿಕೊಂಡಿದ್ದರು. ಹೊಸ್ಮಾರ್ ಪೇಟೆಯ ಮುಖ್ಯ ರಸ್ತೆ ಬಳಿಯಲ್ಲಿದ್ದ ಅವರ ಜಾಗದಲ್ಲಿ ಸಣ್ಣದಾದ ಅಂಗಡಿ ಕಟ್ಟಡವನ್ನು ರಚಿಸಿ ಪ್ರೇಮ್ ಕುಮಾರ್ ಅವರು ತನ್ನ ಎಸ್ ಎಸ್ ಎಲ್ ಸಿ ತರಗತಿ ಮುಗಿಸಿ ವ್ಯಾಪಾರ ಪ್ರಾರಂಭಿಸಿದರು. ಅವರು ಬಹುಶಃ 66 ನೇ ವರ್ಷ ವಯಸ್ಸಿಗೆ ತನ್ನ ಜೀವನದ ಕೊನೆಯುಸಿರಾಡಿದರು. ಅವರ ಪತ್ನಿ ಭಾರತಿ ಹಾಗೂ ಪುತ್ರಿ ಡಾ.ಪ್ರತಿಭ . ಅಳಿಯ ಕೂಡಾ ವೈದ್ಯನೇ ಆಗಿರುತ್ತಾರೆ. ಹಾಸನದಲ್ಲಿ ಚಿಕಿತ್ಸಾ ಘಟಕವೊಂದನ್ನು ತೆರೆದು ಸೇವೆ ನೀಡುತ್ತಿದ್ದಾರೆ.ಡಾ.ಪ್ರತಿಭ ಅವರು ಹಾಸನದ ಎಸ್. ಡಿ. ಎಂ. ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ಉಪಾನ್ಯಾಸಕಿಯೂ ಆಗಿರುತ್ತಾರೆ. ಅಗಲಿದ ಪ್ರೇಮ್ ಕುಮಾರ್ ಅವರಿಗೆ ಭಾವಪೂರ್ಣ #ಶ್ರದ್ಧಾಂಜಲಿ.