ಉಡುಪಿ : 2026 ಎ. 18 ರಂದು ರಾತ್ರಿ ಸುಮಾರು 7:45 ಗಂಟೆಗೆ ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬಿದ್ರಿ ಶ್ರೀ ನಾರಾಯಣ ಗುರು ಮಂದಿರದ ಸಮೀಪ ನಿಲ್ಲಿಸಿದ ಮೋಟಾರ್ ಸೈಕಲ್ ಕಳವು ಪ್ರಕಟಣೆಗೆ ಸಂಬಂಧಿಸಿದಂತೆ ಆರೋಪಿಯನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ. ಕಳವಾದ ಬೈಕ್ ಪತ್ತೆ ಹಚ್ಚಿದ್ದಾರೆ.
ಮುಲ್ಕಿ ಕಾರ್ನಾಡಿನ ನಿವಾಸಿ ವಾಸುದೇವ ಶೆಟ್ಟಿಗಾರ್ ಅವರು ತಮ್ಮ ತಮ್ಮನ KA19EH6946 ಸಂಖ್ಯೆಯ ಯಮಹಾ FZ ಮೋಟಾರ್ ಸೈಕಲ್ ಅನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಸಮೀಪದ ಕ್ಯಾಂಟೀನ್ಗೆ ತಿಂಡಿ ತಿನ್ನಲು ತೆರಳಿದ್ದರು. ನಂತರ ವಾಪಸು ಬಂದು ನೋಡಿದಾಗ ಮೋಟಾರ್ ಸೈಕಲ್ ಕಾಣೆಯಾಗಿದ್ದು, ಕಳವುಗೊಂಡಿರುವ ಬಗ್ಗೆ ಅವರು ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಅವರ ಆದೇಶದಂತೆ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ ಎಸ್ ನಾಯಕ್, ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಎಸ್ ವಿಜಯಪ್ರಸಾದ್ ಮತ್ತು ಕಾಪು ವೃತ್ತ ನಿರೀಕ್ಷಕ ಅಜ್ಮತ್ ಆಲಿ ಅವರ ಮಾರ್ಗದರ್ಶನದಲ್ಲಿ ಪಡುಬಿದ್ರಿ ಪೊಲೀಸ್ ಠಾಣೆಯ ಪಿಎಸ್ಐ ಸಕ್ತಿವೇಲು ಹಾಗೂ ಅನಿಲ್ ಕುಮಾರ್ ಟಿ ನಾಯಕ್ ಅವರು ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡರು.
ತನಿಖೆಯ ಫಲವಾಗಿ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶ್ಯಾಡಗುಪ್ಪಿ ಗ್ರಾಮದ ಮಂಜುನಾಥ ಫಕೀರಪ್ಪ ವಾಲಿಕಾರ ಎಂಬ ಆರೋಪಿಯನ್ನು ವಶಕ್ಕೆ ಪಡೆದು, ಆತನಿಂದ ಕಳವುಗೊಂಡ ಸುಮಾರು ರೂ. 20,000/- ಮೌಲ್ಯದ KA19EH6946 ಸಂಖ್ಯೆಯ ಯಮಹಾ FZ ಮೋಟಾರ್ ಸೈಕಲ್ ಅನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಎಎಸ್ಐ ರಾಜೇಶ್ ಪಿ, ಹೆಡ್ ಕಾಂಸ್ಟೇಬಲ್ ಕೃಷ್ಣಪ್ರಸಾದ್, ಅಶ್ವಿನ್ ಕುಮಾರ್ ಮತ್ತು ಪಿಸಿ ಸಂದೇಶ್ ಭಂಡಾರಿ ಅವರು ಭಾಗವಹಿಸಿದ್ದಾರೆ.