2027 ಫೆ.18 ರಿಂದ ಫೆ.28ರ ವರೆಗೆ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ



ಬಾಹುಬಲಿಯು ಜೈನಧರ್ಮದವರಿಗೆ ಮೊದಲ ದೇವರಾಗಿರುತ್ತಾರೆ. ಬಾಹುಬಲಿ ಸ್ವಾಮಿಯವರು ಮೋಕ್ಷಗಾಮಿಯಾದ ಮಹಾಪುರಷನಾಗಿದ್ದಾರೆ. ಅವರ ಸಂದೇಶ ಲೋಕದಲ್ಲಿ ಇಂದಿಗೂ ಪ್ರಸ್ತುತವಾಗಿದೆ ಮತ್ತು ಸಾರ್ವಕಾಲಿಕವಾಗಿದೆ. ಪ್ರಕಾಶಮಾನನಾದ ಸೂರ್ಯನ ಬೆಳಕಿನಂತೆಯೆ ಭಗವಾನ್ ಬಾಹುಬಲಿಯ ಸಂದೇಶ ಲೋಕಕ್ಕೆ ಹರಡುತ್ತಲೇ ಇರುತ್ತದೆ.
ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನೆರವೇರುವ ಈ ಮಹಾಮಸ್ತಕಾಭಿಷೇಕವು ನಡೆಯುತ್ತಲೇ ಬಂದಿದೆ. ಮಹಾಮೂರ್ತಿಗೆ ಪಾದಾಭಿಷೇಕ ಮಾತ್ರ ನಿತ್ಯ ನಿರಂತರವಿರುತ್ತದೆ. ಇಪ್ಪತ್ತನಾಲ್ಕು ತೀರ್ಥಂಕರರುಗಳ ಜೀವನ ಸಂದೇಶಗಳು ಪಾವನ ಪ್ರಸಿದ್ಧವಾಗಿದೆಯಾದರೂ ಭಗವಾನ್ ಬಾಹುಬಲಿಯ ಸತ್ಯ ಶಾಂತಿ ಮತ್ತು ತ್ಯಾಗದ ಸಂದೇಶ ಬಹುದೊಡ್ಡದು.
ಮಹಾಪುರುಷರ ಸಂದೇಶ ನಮಗೆ ನಮ್ಮ ಬದುಕಿದೆ ಅತ್ಯಗತ್ಯವಾಗಿದೆ. ಮುಂದಿನ ಎಂಭತ್ತನಾಲ್ಕು ಸಾವಿರ ವರ್ಷಗಳವರೆಗೆ ಈ ಭಾರತ ಭೂಮಿಯಲ್ಲಿ ಯಾವನೇ ಮಹಾಪುರುಷನ ಉಗಮವಾಗುವುದಿಲ್ಲ. ಮುಂದಿನ ದಿನಗಳನ್ನು ಸುಖ ಶಾಂತಿಯಿಂದ ಕಳೆಯುವುದಕ್ಕೆ ಮಹಾಪುರುಷರ ಸಂದೇಶಗಳನ್ನು ಪಾಲಿಸಬೇಕಾಗಿದೆ. ನಮ್ಮಿಂದಾಗಿರುವ ತಪ್ಪುಗಳು ,ದೋಷಗಳನ್ನು ಕಳೆಯುವುದಕ್ಕೆ ಈ ಮಹಾ ಮಸ್ತಕಾಭಿಷೇಕ ಪ್ರೇರಣೆಯಾಗುತ್ತದೆ. ಮಾನವ ತಾನು ಮಾಡಿರುವ ಲೋಪ ದೋಷಗಳನ್ನು ತಿದ್ಗಿಕೊಳ್ಳುವುದಕ್ಕೆ ದೊಡ್ಡ ಅವಕಾಶವಾಗುತ್ತದೆ ಎಂದು ಶ್ರೀ ಶ್ರೀ ಶ್ರೀ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ತಮ್ಮ ಶುಭಾಶೀರ್ವಾದಗಳಲ್ಲಿ ಹೇಳಿದರು.
ಕಾರ್ಕಳ ದಾನಶಾಲಾ ಬಳಿಯ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆದ ಕಾರ್ಕಳ ಬಾಹುಬಲಿ ಮಹಾಮಸ್ತಕಾಭಿಷೇಕ -2027ರ ದಿನಾಂಕವನ್ನು ಪ್ರಕಟಿಸುವ ಕಾರ್ಯಕ್ರಮದಲ್ಲಿ ಆಶೀರ್ವಚನಕಾರರಾಗಿ ಮಹಾಸ್ವಾಮಿಗಳು ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಸ್ತುತ ಬಾಹುಬಲಿ ಮಹಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾಗಿರುವ ಡಾ।ಎಂ. ಎನ್. ರಾಜೇಂದ್ರ ಕುಮಾರ್ ಅವರು ಮಹಮಸ್ತಕಾಭಿಷೇಕದ ದಿನಾಂಕವನ್ನು ಡ್ಜಿಟಲ್ ಪರದೆಯ ಮೇಲೆ ಪ್ರತಿಪಲಿಸುವಂತೆ ರಿಮೋಟ್ ಬಟನ್ ಒತ್ತಿದರು.
ಡಾ।ಎಂ. ಎನ್. ರಾಜೇಂದ್ರ ಕುಮಾರ್ ಮತ್ತು ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ್ ಜೈನ್ ಅವರು ವೇದಿಕೆಯಲ್ಲಿ ಪಾವನ ಸಾನಿಧ್ಯರಾದ ಶ್ರೀ ಶ್ರೀ.ಶ್ರೀ. ಲಲಿತಕೀರ್ತಿ ಮಹಾಸ್ವಾಮೀಜಿಯವರಿಗೆ ಒಂದು ಲಕ್ಷ ನಗದು ಹಾಗೂ ಮೂರು ಲಕ್ಷ ಬ್ಯಾಂಕ್ ಚೆಕ್ ಮತ್ತು ಫಲಪುಷ್ಪಗಳನ್ನು ಪಾದಕಮಲಕ್ಕೆ ಒಪ್ಪಿಸಿ ಉದ್ದೇಶಿತ ಸಭೆಯ ಮುಂದಿನ ಎಲ್ಲ ಕೆಲಸ ಕಾರ್ಯಗಳ ಯಶಸ್ಸಿಗೆ ಆಶೀರ್ವಾದ ಬೇಡಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಅನುಪಸ್ಥಿತಿಯನ್ನು ತುಂಬಿಸಿದ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ಅವರು ಕಾರ್ಯಕ್ಪಮವನ್ನು ದಾಪ ಬೆಳಗಿಸಿ ಉದ್ಘಾಟಿಸಿದರು.
ತೊಡಗಿಸಿಕೊಳ್ಳಲು ಕಲಿಯಬೇಕು ಆದರೆ ,ಅಡಗಿಸಿಕೊಳ್ಳಲು ಕಲಿಯಬಾರದು ಒನ್ನುವ ಮಾರ್ಮಿಕವಾದ ನುಡಿಗಳೊಂದಿಗೆ ಮಾತು ಆರಂಭಿಸಿದ ಡಿ. ಹರ್ಷೇಂದ್ರ ಕುಮಾರ್, ನಮ್ಮೂರಿನ ಕಾರ್ಯಕ್ರಮದಲ್ಲಿ ನಮ್ಮ ತ್ಯಾಗವೇ ಬಹುದೊಡ್ಡ ಆತಿಥ್ಯವಾಗುತ್ತದೆ. ಪರವೂರಿನ ಅತಿಥಿ ಬಂದಾಗ ತಾವು ಕುಳಿತಿದ್ದ ಆಸನವನ್ನು ತ್ಯಾಗ ಮಾಡಿ ಕೊಡುವುದು ಒಳ್ಳೆಯ ಕಾರ್ಯಕೆಲಸ. ಸಮಿತಿಯ ಜೊತೆ ಹತ್ತಾರು ಉಪಸಮಿತಿಗಳನ್ನು ರಚನೆ ಮಾಡಲಾಗಿರುತ್ತದೆ. ಪ್ರತೀ ಸಭೆಯಲ್ಲೂ ಅದರ ಸದಸ್ಯ ಸಮಯಕ್ಕೆ ಸರಿಯಾಗಿ ಹಾಜರಾಗುವ ಅಭ್ಯಾಸವಿಟ್ಚುಕೊಂಡರಷ್ಟೆ ಮುಂದಿನ ಕೆಲಸವೂ ವಿಳಂಬ ,ತೊಂದರೆಗಳಿಲ್ಲದೆಯೆ ನೆರವೇರುತ್ತದೆ.ಪ್ರತಿಯೊಬ್ಬನೂ ತನ್ನ ಜವಾಬ್ದಾರಿಯಿಂದ ಹೊರಬರಕೂಡದು. ಡಾ।ಎಂ. ಎನ್. ರಾಜೇಂದ್ರ ಕುಮಾರ್ ಅವರ ಮುಂದಾಳ್ತನದಲ್ಲಿ ಎಲ್ಲವೂ ವ್ಯವಸ್ಥಿತವಾಗಿಯೇ ನೆರವೇರುತ್ತದೆ ಎಂದು ಡಿ. ಹರ್ಷೇಂದ್ರ ಕುಮಾರ್ ಶುಭಹಾರೈಸಿ ತಮ್ಮ ಮಾತು ಮುಗಿಸಿದರು.
ಕಾರ್ಕಳದ ಬಾಹುಬಲಿ ಮಹಾಮಸ್ತಕಾಭಿಷೇಕ ಉತ್ಸವವು ಕೇವಲ ಜಿಲ್ಲೆ ಮತ್ತು ರಾಜ್ಯಕ್ಕಷ್ಟೇ ಸೀಮಿತವಾಗಿರದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಉತ್ಸವ ಆಗಬೇಕು. ಮಸ್ತಕಾಭಿಷೇಕದ ಉದ್ದೇಶವೆಂದರೆ ಬಾಹುಬಲಿಯ ಸಂದೇಶವನ್ನು ಇಡೀ ಜಗತ್ತಿಗೆ ಪಸರಿಸುವುದು.
ಪ್ರಕೃತಿಯನ್ನೇ ಪೂಜಿಸುವ ಪ್ರಪಂಚದ ಏಕೈಕ ರಾಷ್ಟ್ರವಿದ್ದರೆ ಅದು ಭಾರತ ಮಾತ್ರ ಎಂದು ಅಂದು ಲಾರ್ಡ್ ಮೌಂಟ್ ಬ್ಯಾಟನ್ ಹೇಳಿದ್ದನ್ನು ನೆನಪಿಸಿದರು. ಭಾರತದ ವೈವಿಧ್ಯತೆಯೆಂದರೆ ಶಾಂತಿಯ ಜೈನ ಸಮುದಾಯವು ಜಗತ್ತಿಗೆ ಶಾಂತಿಯನ್ನು ಕೊಡಬಲ್ಲ ಮಹಾನ್ ಶಕ್ತಿ ಹೊಂದಿದೆ. ಸತ್ಯ ಶಾಂತಿ ತ್ಯಾಗ ಸಂದೇಶವನ್ನು ಜಗತ್ತಿಗೆ ಕೊಟ್ಟಿದೆ. ಸತ್ಯ ಶಾಂತಿ ತ್ಯಾಗದ ಸಂದೇಶ ನೀಡಿರುವ ದೊಡ್ಡ ರಾಜನೇ ಬಾಹುಬಲಿಯಾಗಿದ್ದಾನೆ ಎಂದು ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಎಲ್ಲ ರಾಜಕೀಯ ಪಕ್ಷಗಳವರೊಂದಿಗೆ ಸಮಾನ ಸ್ನೇಹಾಚಾರ ಹೊಂದಿರುವ ಡಾ। ಎಂ. ಎನ್. ರಾಜೇಂದ್ರ ಕುಮಾರ್ ಅವರಿದ್ದಲ್ಲಿ ಎಲ್ಲ ಪಕ್ಷದವರ ನೆರವು ದೊರಕುತ್ತದೆ. ಒಂದು ರಾತಿಯಲ್ಲಿ ರಾಜೇಂದ್ರ ಕುಮಾರ್ ಅವರು ಎಲ್ಲ ಪಕ್ಷಗಳಿಗೂ ಅಧ್ಯಕ್ಷನಂತೆಯೇ ಇದ್ದಾರೆ ಎಂದು ಹೇಳಿದ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು , ಕಾರ್ಕಳದ ಬಾಹುಬಲಿ ಮಹಾಮಸ್ತಕಾಭಿಷೇಕವನ್ನು ಎಲ್ಲರೂ ಒಗ್ಗಟ್ಟಿನಿಂದ ನೆರವೇರಿಸಬೇಕೆಂದು ಶುಭಹಾರೈಸಿದರು.
ಡಾ।ಎಂ. ಎನ್. ರಾಜೇಂದ್ರ ಕುಮಾರ್ ಮಾತನ್ನಾಡಿ, ಈ ಬಾರಿಯ ಮಹಾಮಸ್ತತಕಾಭಿಷೇಕವನ್ನು ಈ ಹಿಂದಿನದಕ್ಕಿಂದ ಹೆಚ್ಚುಪಾಲು ವೈಭವದಿಂದ ನೆರವೇರಬೇಕು ಎನ್ನುವ ಸಂಕಲ್ಪವನ್ನು ಮಾಡಿಕೊಂಡಿದ್ದೇವೆ. ಹನ್ನೆರಡು ವರ್ಷಗಳಿಗೊಮ್ಮೆ ನೆರವೇರುವ ಮಹಾಮಸ್ತಕಾಭಿಷೇಕವನ್ನು ಐತಿಹಾಸಿಕ ದಾಖಲೆಯನ್ನಾಗಿಸಬೇಕು. ಅದಕ್ಕಾಗಿ ಸಮಾಜ ಹಾಗೂ ನಾಗರಿಕ ಬಂಧುಗಳ ಎಲ್ಲ ಬಗೆಯ ಸಹಕಾರ ಅತ್ಯಗತ್ಯವಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ಸರಕಾರಕ್ಕೆ ವರದಿಯನ್ನು ಕೊಟ್ಟಿದು ಈ ಬಾರಿ ಸುಮಾರು ಎಂಭತ್ತು ಲಕ್ಷ ರೂಪಾಯಿಗಳ ಅನುದಾನಕ್ಕೆ ಬೇಡಿಕೆಯಿಡಲಾಗಿದೆ ಎಂದರು.
ಉಡುಪಿ ಜಿಲ್ಲಾಧಿಕಾರಿ ಸ್ವರೂಪ್ ಟಿ ಕೆ. , ರಾಜ್ಯದ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್,ಅದಾನಿ ಬಳಗದ ವಲಯಾಧ್ಯಕ್ಷ ಕಿಶೋರ್ ಆಳ್ವ, ಡಾ.ಎಂ. ಮೋಹನ ಆಳ್ವ , ಮುನ್ಸಾಲು ಉದಯ ಕುಮಾರ್ ಶೆಟ್ಟಿಯವರುಗಳೆಲ್ಲ ಸಾಂದರ್ಭಿಕ ನುಡಿಗಳನ್ನಾಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ ಜೈನ್ ಅವರು ಅತಿಥಿಗಳನ್ನು ಆಮಂತ್ರಿತರನ್ನು ಸ್ವಾಗತಿಸಿದರು. ಬಾಹುಬಲಿ ಮಹಾಮಸ್ತಕಾಭಿಷೇಕ ಸಮಿತಿಯು ಈಗಾಗಲೇ ಸುಮಾರು 32ಉಪಸಮಿತಿಗಳನ್ನು ರಚನೆ ಮಾಡಿದ್ದು ಆರುನೂರು ಮಂದಿಯನ್ನು ಸದಸ್ಯರನ್ನಾಗಿ ಮಾಡಲಾಗಿದೆ. ಒಟ್ಟು ಎಂಟುನೂರಕ್ಕೂ ಹೆಚ್ಚು ಮಂದಿಯು ಆಸಕ್ತರಾಗಿ ಹೆಸರು ನೋಂದಾಯಿಸಿದ್ದಾರೆ. ಇನ್ನು ಮುಂದೆ ರಚನೆಯಾಗಬೇಕಾದ ಕೆಲವು ಉಪಸಮಿತಿಗಳಲ್ಲಿ ಅವರನ್ನು ಸೇರಿಸಿಕೊಳ್ಳಲಾಗುವುದು. ಈ ಬಾರಿಯ ಮಹಾಮಸ್ತಕಾಭಿಷೇಕಕ್ಕೆ ಜೈನ ಸಮಾಜ ಬಾಂಧವರುಗಳು ಒಂದೇ ಕರೆಗೆ ಓಗೊಟ್ಟು ಬಂದಿರುವ ಸಂಖ್ಯೆು ಅಭೂತಪೂರ್ವ ಹಾಗೂ ದಾಖಲೆಯಾಗಿದೆ ಎಂದು ಪುಷ್ಪರಾಜ್ ಜೈನ್ ತನ್ನ ಭಾಷಣದಲ್ಲಿ ತಿಳಿಸಿದರು.
ಡಾ.ಕೆ. ಜೀವಂಧರ ಬಲ್ಲಾಳ್, ಅಳದಂಗಡಿ ಪದ್ಮಪ್ರಸಾದ ಅಜಿಲ, ರತ್ನಾಕರ ಅರಸು, ಕೆ. ಪಿ. ಜಗಧೀಶ ಅಧಿಕಾರಿ,ಅನಂತರಾಜ ಪೂವಣಿ,ಕೆ. ಗುಣಪಾಲ ಕಡಂಬ, ಮಹಾವೀರ ಜೈನ್ ಕೆರ್ವಾಶೆ, ಎಸ್. ಡಿ. ಸಂಪತ್ ಸಾಮ್ರಾಜ್ಯ ಮುಂತಾದವರು ವೇದಿಕೆಯಲ್ಲಿ ಪಾಲ್ಗೊಂಡಿದ್ದರು.
ಅಜಿತ್ ಕುಮಾರ್ ಕೊಕ್ರಾಡಿ ಕಾರ್ಯಕ್ರಮ ನಿರೂಪಿಸಿದರು.ಮೋಹನ್ ಪಡಿವಾಳ್ ಧನ್ಯವಾದ ಅರ್ಪಿಸಿದರು.
ಎಂ .ಎನ್. ಆರ್. ಅವರಿಂದ ಶಾಲೆಗೆ #ದೇಣಿಗೆ
ಕಾರ್ಕಳ ಹಿರಿಯಂಗಡಿಯ ನೇಮಿಸಾಗರ ವಿದ್ಯಾವರ್ಧಕ ಸಂಘಕ್ಕೆ ಡಾ।ಎಂ. ಎನ್. ರಾಜೇಂದ್ರ ಕುಮಾರ್ ಅವರು ಐದು ಲಕ್ಷ ರೂಪಾಯಿಗಳ ಸಹಾಯದೇಣಿಗೆಯನ್ನು ಈ ಸಮಾರಂಭ ಸಂದರ್ಭದಲ್ಲಿ ನೀಡಿದರು.
–ವಿ. ಕೆ. ವಾಲ್ಪಾಡಿ



































