ಕಾರ್ಕಳದಲ್ಲಿ ಮಹಾಮಸ್ತಕಾಭಿಷೇಕ: ಏಪ್ರಿಲ್ 19ರಂದು ಸಮಿತಿಯ ಕಾರ್ಯಾಲಯ ಉದ್ಘಾಟನೆ ಹಾಗೂ ದಿನಾಂಕ ಘೋಷಣೆ

ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ (ರಿ.) ವತಿಯಿಂದ ಕಾರ್ಯಾಲಯ ಉದ್ಘಾಟನೆ ಮತ್ತು 2027ರ ಮಹಾಮಸ್ತಕಾಭಿಷೇಕದ ದಿನಾಂಕ ಘೋಷಣೆಯ ಮಹತ್ವದ ಕಾರ್ಯಕ್ರಮವು ಏಪ್ರಿಲ್ 19ರಂದು ಭಾನುವಾರ ಪೂರ್ವಾಹ್ನ 10.30ಕ್ಕೆ ಕಾರ್ಕಳದ ದಾನಶಾಲೆ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರದಲ್ಲಿ ಜರುಗಲಿದೆ ಎಂದು ಸಮಿತಿಯ ಕಾರ್ಯಾಧ್ಯಕ್ಷ ಡಾ. ಎನ್. ಎನ್. ರಾಜೇಂದ್ರ ಕುಮಾರ್ ತಿಳಿಸಿದ್ದಾರೆ.
ಭಾನುವಾರ ಕಾರ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವು ಕಾರ್ಕಳ ದಾನಶಾಲೆ ಶ್ರೀ ಜೈನ ಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ನೆರವೇರಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಆಕರ್ಷಣೆಯಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಅಧ್ಯಕ್ಷರಾದ ಪೂಜ್ಯ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು 2027ರ ಮಹಾಮಸ್ತಕಾಭಿಷೇಕದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲಿದ್ದಾರೆ. ಮಹಾಮಸ್ತಕಾಭಿಷೇಕವು ಜೈನ ಸಮುದಾಯದ ಅತ್ಯಂತ ಮಹತ್ವದ ಧಾರ್ಮಿಕ ಮಹೋತ್ಸವವಾಗಿದ್ದು, ಕಾರ್ಕಳ ಕ್ಷೇತ್ರದಲ್ಲಿ ನಡೆಯುವ ಈ ಉತ್ಸವಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.
ಕರ್ನಾಟಕ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಶೇಷ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಳರ್ ಅವರು ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಲಯವನ್ನು ಉದ್ಘಾಟಿಸಲಿದ್ದಾರೆ. ಕರ್ನಾಟಕ ಸರ್ಕಾರದ ಯೋಜನಾ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವರು ಹಾಗೂ ಸಮಿತಿಯ ಗೌರವ ಸಂರಕ್ಷಕರಾದ ಡಿ. ಸುಧಾಕರ್ ಅವರು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ, ಬೆಂಗಳೂರು ಇದರ ಅಧ್ಯಕ್ಷರು ಹಾಗೂ ಮಹಾಮಸ್ತಕಾಭಿಷೇಕ ಸಮಿತಿಯ ಕಾರ್ಯಾಧ್ಯಕ್ಷರಾದ ಡಾ. ಎಂ. ಎನ್. ರಾಜೇಂದ್ರ ಕುಮಾರ್ ವಹಿಸಲಿದ್ದಾರೆ.
ಈ ಸಮಾರಂಭದಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ವಿ. ಸುನಿಲ್ ಕುಮಾರ್, ಅಧಾನಿ ಗ್ರೂಪ್ ಕರ್ನಾಟಕದ ಕಾರ್ಯನಿರ್ವಾಹಕ ನಿರ್ದೇಶಕರಾದ ಕಿಶೋರ್ ಅಳ್ವ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಮಾಜಿ ಸಚಿವರು ಹಾಗೂ ಸಮಿತಿಯ ಉಪಾಧ್ಯಕ್ಷರಾದ ಕೆ. ಅಭಯಚಂದ್ರ ಜೈನ್, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಉದಯ ಕುಮಾರ್ ಶೆಟ್ಟಿ ಮುನಿಯಾಲು ಸೇರಿದಂತೆ ಅನೇಕ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಮಹಾಮಸ್ತಕಾಭಿಷೇಕ ಮಹೋತ್ಸವವನ್ನು ಪರಮಪೂಜ್ಯ ಗುರುವರ್ಯರ ಸಾನಿಧ್ಯದಲ್ಲಿ ಅತ್ಯಂತ ವೈಭವದಿಂದ ಮತ್ತು ಸುವ್ಯವಸ್ಥಿತವಾಗಿ ನಡೆಸಲು ಸಮಿತಿ ಈಗಾಗಲೇ ಕಾರ್ಯಪ್ರವೃತ್ತವಾಗಿದೆ. ಸಮಾಜದ ಎಲ್ಲಾ ವರ್ಗದವರ ಸಹಕಾರದೊಂದಿಗೆ ವಿವಿಧ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಡಾ. ರಾಜೇಂದ್ರ ಕುಮಾರ್ ವಿವರಿಸಿದರು.
ಈ ಮಹೋತ್ಸವದ ಹಿನ್ನೆಲೆಯಲ್ಲಿ ಲಕ್ಷಾಂತರ ಯಾತ್ರಿಕರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಮಗ್ರ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಇದರಲ್ಲಿ ರಸ್ತೆ, ನೀರು, ವಸತಿ, ಸ್ವಚ್ಛತೆ, ಸಂಚಾರ ವ್ಯವಸ್ಥೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಒಳಗೊಂಡಿದ್ದು, ಒಟ್ಟು ರೂ. 82,37,52,000 ವೆಚ್ಚದ ಅಂದಾಜು ಪಟ್ಟಿಯನ್ನು ಈಗಾಗಲೇ ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಹಿಂದಿನ 2015ರ ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಸರ್ಕಾರದಿಂದ ಸಾಕಷ್ಟು ಅನುದಾನ ದೊರೆತಿದ್ದ ಹಿನ್ನೆಲೆಯಲ್ಲಿ, ಈ ಬಾರಿಯೂ ರಾಜ್ಯ ಸರ್ಕಾರದಿಂದ ಸಮಗ್ರ ಸಹಕಾರ ದೊರೆಯುವ ವಿಶ್ವಾಸವಿದೆ ಎಂದು ಅವರು ಹೇಳಿದರು.
ಇದಲ್ಲದೆ, ರಾಜ್ಯ ಸರ್ಕಾರವು ಈಗಾಗಲೇ ಮಹಾಮಸ್ತಕಾಭಿಷೇಕಕ್ಕೆ ಸಂಬಂಧಿಸಿದ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರೂ. 1.59 ಕೋಟಿ ಮಂಜೂರು ಮಾಡಿದ್ದು, ಮೊದಲ ಕಂತಾಗಿ ಶೇಕಡಾ 75ರಷ್ಟು ಅನುದಾನವಾದ ರೂ. 1,19,25,000 ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.
ಬಿಡುಗಡೆಯಾದ ಅನುದಾನದಲ್ಲಿ ಅಟ್ಟಳಿಗೆ ನಿರ್ಮಾಣಕ್ಕೆ ರೂ. 37.50 ಲಕ್ಷ, ಜೈನ ಮಠದ ಬಳಿಯ ತ್ಯಾಗಿ ಭವನ ಹಾಗೂ ಮಾತಾಜಿ ಭವನಗಳ ನವೀಕರಣಕ್ಕೆ ರೂ. 63.75 ಲಕ್ಷ, ಸಭಾಂಗಣ ನವೀಕರಣಕ್ಕೆ ರೂ. 8.25 ಲಕ್ಷ ಹಾಗೂ ಶ್ರೀ ಗೊಮ್ಮಟೇಶ್ವರ ಬೆಟ್ಟಕ್ಕೆ ನೀರಿನ ಸರಬರಾಜು ಮತ್ತು ಕೊಳವೆ ಬಾವಿ ನಿರ್ಮಾಣಕ್ಕೆ ರೂ. 9.75 ಲಕ್ಷ ಮೀಸಲಿಡಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿ, ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಜೈನ್, ಕೋಶಾಧಿಕಾರಿ ಎ ಮೋಹನ್ ಪಡಿವಾಳ್, ಪ್ರಭಾತ್ ಕುಮಾರ್, ಅನಂತರಾಜ ಪೂವಣಿ, ಸಂಪತ್ ಸಾಮ್ರಾಜ್ಯ, ಸುಧೀರ್ ಪಡಿವಾಳ್, ಕೆ ಜಯಕೀರ್ತಿ ಕಡಂಬ, ಹೇಮಚಂದ್ರ ಜೈನ್, ಸುನಿಲ್ ಕುಮಾರ್ ಬಜಗೋಳಿ, ಮಹಾವೀರ ಹೆಗ್ಡೆ, ಭರತ್ ಕುಮಾರ್ ಜೈನ್, ಶೀತಲ್ ಜೈನ್, ಸುಭಾಶ್ಚಂದ್ರ ಚೌಟ, ಶಾಂತಿರಾಜ ಜೈನ್, ಮಹೇಂದ್ರ ವರ್ಮ ಜೈನ್, ಶಿಶುಪಾಲ ಜೈನ್, ಹಾಗೂ ಇತರರು ಉಪಸ್ಥಿತರಿದ್ದರು.






































