ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಭೆ
RB NEWS
Bureau Report
ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಭೆ
ಕಾರ್ಕಳ: ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವಭಾವಿ ಸಭೆಯು ಶ್ರೀ ಜೈನ ಧರ್ಮ ಜೀರ್ಣೊದ್ದಾರಕ ಸಂಘ (ರಿ), ಕಾರ್ಕಳ ಇದರ ಅಧ್ಯಕ್ಷ ಹಾಗೂ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ರವಿವಾರ ಸಂಜೆ ಜರುಗಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು, ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಕಾರ್ಕಳ ಹಾಗೂ ಸುತ್ತಮುತ್ತಲಿನ ರಸ್ತೆ ಅಭಿವೃದ್ಧಿಗಾಗಿ 70 ಕೋಟಿ ರೂ. ಅನುದಾನವನ್ನು ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದಾಗಿ ತಿಳಿಸಿದರು. ಉಸ್ತುವಾರಿ ಸಚಿವೆ ಮಹೋತ್ಸವಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿರುವುದನ್ನು ಸ್ಮರಿಸಿ, ಆ ಭರವಸೆ ಈಡೇರುವ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ಮಹೋತ್ಸವದ ಯಶಸ್ವಿ ಆಯೋಜನೆಗಾಗಿ ಒಟ್ಟು 36 ಸಮಿತಿಗಳನ್ನು ರಚಿಸಲಾಗಿದ್ದು, ಮಹಿಳೆಯರ ಸಂಪೂರ್ಣ ಭಾಗವಹಿಸುವಿಕೆಗೆ ಮಹಿಳಾ ಸಮಿತಿಯನ್ನೂ ರಚಿಸಲಾಗುವುದು ಎಂದು ತಿಳಿಸಿದರು. ಪ್ರತಿಭೆ ಹಾಗೂ ಆಸಕ್ತಿಗೆ ಅನುಗುಣವಾಗಿ ಸಮಿತಿಗಳಲ್ಲಿ ಸದಸ್ಯರನ್ನು ಸೇರಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದರು. ಕಾರ್ಕಳ ಗೊಮ್ಮಟಬೆಟ್ಟದಿಂದ ಆನೆಕೆರೆವರೆಗೆ, ಅನಂತಶಯನದಿಂದ ಗೊಮ್ಮಟಬೆಟ್ಟದವರೆಗೆ ಹಾಗೂ ಸುತ್ತಮುತ್ತಲಿನ ಪ್ರಮುಖ ರಸ್ತೆಗಳ ಅಗಲೀಕರಣದ ಕುರಿತು ಚಿಂತನೆ ನಡೆಸಲಾಗಿದೆ. ಮಠದ ಗೆಸ್ಟ್ ಹೌಸ್ ನವೀಕರಣ, ಯಾತ್ರಿ ನಿವಾಸದ ಅಭಿವೃದ್ಧಿ ಹಾಗೂ ಕೋಣೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಅಲ್ಪಸಂಖ್ಯಾತ ಇಲಾಖೆಯ ಅನುದಾನದಿಂದ ಕಾರ್ಯ ಕೈಗೊಳ್ಳಲಾಗುವುದು ಎಂದು ಹೇಳಿದರು. ಸಭೆಯಲ್ಲಿ ವಿವಿಧ ಊರುಗಳಿಂದ ಆಗಮಿಸಿದ ಜೈನ ಶ್ರಾವಕರು ಹಾಗೂ ಶ್ರಾವಕಿಯರು ಮಹಾಮಸ್ತಕಾಭಿಷೇಕದ ಪೂರ್ವ ತಯಾರಿಗಳನ್ನು ಸುಸೂತ್ರವಾಗಿ ನಡೆಸಲು ತಮ್ಮ ಸಲಹೆ–ಸೂಚನೆಗಳನ್ನು ನೀಡಿದರು. ವೇದಿಕೆಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್, ಅನಂತ್ ರಾಜ್ ಪೂವಣಿ, ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಪುಷ್ಪರಾಜ್ ಜೈನ್, ಸುಧೀರ್ ಪಾಡಿವಾಳ್, ರತ್ನಾಕರ್ ರಾಜ್, ಡಾ. ಜೀವಂಧರ್ ಬಲ್ಲಾಳ್ ಕಾಂತಾವರ, ಕೆ.ಸಿ. ಧರಣೇಂದ್ರ ಕಳಸ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಅಜಿತ್ ಕೊಕ್ರಾಡಿ ನಿರೂಪಿಸಿದರು. ಮೋಹನ್ ಪಾಡಿವಾಳ್ ಸ್ವಾಗತಿಸಿದರು. ಅಂಡಾರ್ ಮಹಾವೀರ್ ಜೈನ್ ಧನ್ಯವಾದ ಅರ್ಪಿಸಿದರು.