ವಾರಭವಿಷ್ಯ ದಿನಾಂಕ 30.11.2025 ನಿಂದ 06.12.2025ರ ವರೆಗೆ
ವಿಶೇಷ ದಿನಗಳು
04.12.2025…..ಪೂರ್ಣಿಮಾ, ದತ್ತಾತ್ರೇಯ ಜಯಂತೀ
05.12.2025…..ಮಿಥುನ ವಕ್ರೀ ಗುರು:
06.12.2025…..ವೃಶ್ಚಿಕ ಬುಧ
ಮೇಷ : ವಿವಾಹ ವಿಷಯದಲ್ಲಿ ಯಶಸ್ಸು ಕಾಣಲು ಹೆಚ್ಚಿನ ಪ್ರಯತ್ನ ಬೇಕು, ಪ್ರಸ್ತುತ ಗುರು ಬಲ ಶುಕ್ರ ಬಲ ಇರುವುದಿಲ್ಲ.ವೃತ್ತಿ ಕ್ಷೇತ್ರದಲ್ಲಿ ರಾಹುವಿನ ಸಹಾಯದಿಂದ ಆದಾಯವನ್ನು ಹೆಚ್ಚಿಸಿಕೊಳ್ಳುತ್ತೀರಿ. ಅನೇಕ ದಿನಗಳಿಂದ ಕಾಡುತ್ತಿದ್ದ ಮಾನಸಿಕ ಒತ್ತಡ ಶುಕ್ರ ಕುಜರ ಸ್ಥಳ ಬದಲಾವಣೆಯಿಂದಾಗಿ ದೂರವಾಗಲಿದೆ. ನೀವು ಕೈಗೊಳ್ಳಲಿರುವ ದೇವತಾ ಕಾರ್ಯಗಳಿಂದ ದೈವಾನುಗ್ರಹ ದೊರೆಯಲಿದೆ.
ವೃಷಭ : ದೈವಾನುಗ್ರಹ ಇರುವುದರಿಂದ ಪಾಲುದಾರಿಕೆಯ ವ್ಯವಹಾರಗಳಲ್ಲಿ ಮಿತ್ರರ ನೆರವಿನಿಂದ ಕಾರ್ಯಾನುಕೂಲವಾಗಲಿದೆ. ಹೊಸ ಮನೆ ನಿರ್ಮಾಣದ ಪ್ರಯತ್ನ ಮಾಡುವಿರಿ.ಸಾಡೇ ಸಾತ್ ಶನಿಯ ದೋಷ ಪರಿಹಾರಕ್ಕಾಗಿ ನಿತ್ಯ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ. ನಿಮ್ಮ ಹಿತ ಶತ್ರುಗಳ ಕಾಣದ ಕೈಗಳ ತೊಂದರೆಗಳ ಮಧ್ಯೆಯೂ ಯಶಸ್ಸು ನಿಮ್ಮದಾಗಲಿದೆ. ದಾಂಪತ್ಯ ಜೀವನ ಒಂದು ಸವಾಲಾಗಿ ಕಾಡಲಿದೆ.
ಮಿಥುನ : ಉದ್ಯೋಗ ಕ್ಷೇತ್ರದಲ್ಲಿ ಇರುವವರಿಗೆ ಮುಂಬಡ್ತಿಯ ಸೂಚನೆ ಸಿಗಲಿದೆ. ಶುಕ್ರ ನಿಮಗೆ ಆಭರಣಗಳನ್ನು ಖರೀಧಿ ಮಾಡಿಸಲಿದ್ದಾನೆ. ಸ್ವತಂತ್ರವಾಗಿ ವ್ಯಾಪಾರ ನಡೆಸಲು ಉತ್ತಮ ಸಮಯವಾಗಿದೆ. ವ್ಯವಹಾರಗಳಲ್ಲಿ ಉತ್ತಮ ಆದಾಯವಿದ್ದರೂ ಖರ್ಚು ವೆಚ್ಚಗಳಲ್ಲಿ ಜಾಗ್ರತೆ ವಹಿಸಬೇಕಾಗಿದೆ. ಪತ್ನಿಯ ಅಸೌಖ್ಯ ನಿಮ್ಮ ಮಾನಸಿಕ ನೆಮ್ಮದಿಗೆ ಕಿರಿಕಿರಿ ತರಲಿದೆ, ಕಫ ಅಥವಾ ಪಿತ್ತ ಸಂಬಂಧಿ ಅನಾರೋಗ್ಯಗಳು ಕಾಡಲಿವೆ.
ಕರ್ಕಾಟಕ : ಕಷ್ಟಕರ ಕಾರ್ಯಗಳನ್ನು ಅನ್ಯರ ಸಹಾಯದಿಂದ ಪೂರೈಸಿಕೊಳ್ಳಲಿದ್ದೀರಿ . ರಾಹು ಶನಿಯರ ಪ್ರಭಾವದಿಂದಾಗಿ ತನ್ನವರೇ ಶತ್ರುಗಳಾಗಿ ಕಾಣಲಿದ್ದಾರೆ. ಪ್ರೇಮಿಗಳು ಎಚ್ಚರವಾಗಿರಬೇಕು. ಗುರು ಹಿರಿಯರೊಂದಿಗೆ ಹೊಂದಾಣಿಕೆಯ ಬದುಕು ಅವಶ್ಯವಿದೆ. ಮಕ್ಕಳೊಂದಿಗೆ ಮಕ್ಕಳಾಗಿ ವರ್ತಿಸಿರಿ. ಸುಖ ಸ್ಥಾನದ ಶನಿಯಿಂದಾಗಿ ಶುಭ ಕಾರ್ಯಗಳಿಗೆ ಅಡೆ ತಡೆಗಳು ಬರಲಿವೆ. ವಾಹನ ಚಾಲಕರು ಎಚ್ಚರವಹಿಸಬೇಕು, ದಾಂಪತ್ಯದಲ್ಲಿ ಸಹನೆ ತಾಳ್ಮೆ ಅಗತ್ಯವಿದೆ.
ಸಿಂಹ : ಗುರು ಹಿರಿಯರ ಹಾರೈಕೆಯಿಂದ ಯಶಸ್ಸಿನ ಉತ್ತುಂಗಕ್ಕೆ ಏರಲಿದ್ದೀರಿ. ಗುರು, ರಾಹು ಮತ್ತು ಶನಿಯರನ್ನು ಪ್ರತಿನಿತ್ಯ ಪ್ರಾರ್ಥನೆ ಮಾಡಲು ಮರೆಯಬೇಡಿರಿ. ತನಗಿಂತ ಬೇರೆ ಯಾರೂ ಮೇಲೆ ಬರಬಾರದು ಎಂಬ ತತ್ವ ನಿಮ್ಮದಾಗಿದೆ. ಇದನ್ನು ಮತ್ಸರ ಎನ್ನುತ್ತಾರೆ. ವ್ಯಾಪಾರ ವಿಸ್ತರಣೆಗೆ ಇದು ಸಕಾಲವಾಗಿದೆ. ಬಹು ದಿನಗಳಿಂದ ನಿಧಾನವಾಗಿ ಸಾಗುತ್ತಿದ್ದ ಕೆಲಸಗಳು ಪೂರ್ಣವಾಗಲಿವೆ. ಮಕ್ಕಳ ವರ್ತನೆಯ ಕಡೆಗೆ ನಿಮ್ಮ ಗಮನ ಅವಶ್ಯವಾಗಿದೆ. ವಾಹನ ಚಲಾವಣೆಯಲ್ಲಿ ಎಚ್ಚರವಾಗಿರಿ.
ಕನ್ಯಾ : ಗುರು ಲಾಭಕ್ಷೇತ್ರದಲ್ಲಿ ಇರುವುದು ನಿಮಗಿರುವ ಪೂರ್ಣ ದೈವಾನುಗ್ರಹವನ್ನು ಸೂಚಿಸುತ್ತಿದ್ದಾನೆ. ನಿಮಗಿದ್ದ ಅನೇಕ ಸಮಸ್ಯೆಗಳು ಕರ್ಪೂರ ಉರಿದು ಮಾಯವಾಗುವಂತೆ ಪರಿಹಾರ ಆಗಲಿದೆ. ಇತರರ ಭಾವನೆಗಳನ್ನೂ ಅರ್ಥೈಸಿಕೊಂಡು ಮುಂದುವರಿಯಿರಿ, ವ್ಯರ್ಥ ಖರ್ಚುಗಳು ಬರುತ್ತಲಿರುತ್ತವೆ. ಹಣ ಹೂಡಿಕೆಗೆ ಸರಿಯಾದ ಸಮಯ. ನಿಮ್ಮ ವ್ಯವಹಾರ ಕ್ಷೇತ್ರದಲ್ಲಿ ನೀವು ನಡೆಸುವ ಬದಲಾವಣೆಗಳು ಯಶಸ್ವಿಯಾಗಲಿವೆ.
ತುಲಾ : ಉದ್ಯೋಗದ ಅನ್ವೇಷಣೆಯಲ್ಲಿ ಇರುವವರಿಗೆ ಒಳ್ಳೆಯ ಸಮಯವಾಗಿದೆ. ಆದಾಯದ ಅನೇಕ ದಾರಿಗಳು ನಿಮ್ಮ ಗೋಚರಕ್ಕೆ ಬರಲಿವೆ. ಶುಭ ಸೂಚನೆಯೊಂದು ನಿಮ್ಮ ಗಮನಕ್ಕೆ ಬರಲಿದೆ. ಬೇರೆಯವರಿಗೆ ಸಲಹೆ ಸೂಚನೆ ಕೊಡುವ ಸಂದರ್ಭಗಳು ನಿಮ್ಮ ಪಾಲಿಗೆ ಬರಲಿವೆ. ವ್ಯಾಪಾರ ಕ್ಷೇತ್ರದಲ್ಲಿ ಕೆಲವೊಂದು ಒಳ್ಳೆಯ ಪರಿವರ್ತನೆಗಳನ್ನು ಮಾಡಿಕೊಳ್ಳಲಿದ್ದೀರಿ. ಅನುಭವಿಗಳ ಸಲಹೆ ಪಡೆದು ಮುಂದುವರಿದಲ್ಲಿ ಯಶಸ್ಸು ನಿಮ್ಮದಾಗಲಿದೆ.
ವೃಶ್ಚಿಕ : ಜನ್ಮ ರಾಶಿಯಲ್ಲಿ ರವಿ ಶುಕ್ರ ಕುಜ ಜೊತೆಯಾಗಿದ್ದಾರೆ. ಬುಧ ವ್ಯಯದಲ್ಲಿ ರಾಹು ಸುಖ ಸ್ಥಾನದಲ್ಲಿ ಶನಿ ಪಂಚಮದಲ್ಲಿ ಇದ್ದಾರೆ. ಎಲ್ಲರಿಗೂ ನೀವೊಂದು ಪ್ರಯೋಗ ಶಾಲೆಯಾಗಲಿದ್ದೀರಿ. ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಒಂದಿರಲಿ ‘ ಎಂಬಂತೆ ಸಹನೆ ತಾಳ್ಮೆಯೊಂದಿಗೆ ಮುಂದುವರಿಯಿರಿ. ಗುರುವಿನ ಅನುಗ್ರಹ ಪ್ರಸ್ತುತ ಡಿಸೆಂಬರ್ 5 ರ ವರೆಗೆ ನಿಮಗಿರುತ್ತದೆ. ದಿನದಲ್ಲಿ ಒಮ್ಮೆ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.
ಧನು : ಗುರು ಡಿಸೆಂಬರ್ 5 ಕ್ಕೆ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾ ದೇವರ ಅನುಗ್ರಹವನ್ನು ಪಡೆಯಲಿದ್ದೀರಿ, ಶನಿ ಸುಖ ಸ್ಥಾನದ ದೋಷ ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡುತ್ತಾ ಬನ್ನಿರಿ, ರವಿ ಕುಜ ಶುಕ್ರ ವ್ಯಯದಲ್ಲಿ ಇರುವುದರಿಂದ ನೀವು ‘ಏಕಾಂಗಿಯಾಗಿಬಿಟ್ಟೆ’ ಎನ್ನುವ ಭಾವನೆ ನಿಮಗೆ ಬರಬಹುದು, ತಾಳ್ಮೆ ಸಹನೆ ಧೈರ್ಯ ನಿಮ್ಮಲ್ಲಿರಲಿ, ಹಣದ ವಿಷಯದಲ್ಲಿ ಎಚ್ಚರವಿರಲಿ. ಲೆಕ್ಕಾಚಾರವಿರಲಿ.60+ ಆಗಿರುವವರು ಸಾಲ ಮಾಡುವ ಯೋಚನೆ ಮಾಡ ಬೇಡಿರಿ. ಅದುವೇ ನಿಮಗೊಂದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು.
ಮಕರ : ಡಿಸೆಂಬರ್ 5 ರ ನಂತರ ಗುರುಬಲವನ್ನು ಕಳೆದುಕೊಳ್ಳುವ ಕಾಲ ಬರುತ್ತಿದೆ ಉದ್ಯೋಗ ಕ್ಷೇತ್ರದ ಬದಲಾವಣೆಗಳು ಖಾಸಗಿ ಬದುಕಿನ ಮೇಲೆಯೂ ಪರಿಣಾಮ ಬೀರಲಿದೆ. ನಿರುದ್ಯೋಗಿಗಳಿಗೆ ತಕ್ಕಮಟ್ಟಿನ ಉದ್ಯೋಗ ಪ್ರಾಪ್ತಿಯಾಗಲಿದೆ. ದ್ವಿತೀಯಾದಲ್ಲಿ ರಾಹು ಇರುವುದರಿಂದ ಹೆಚ್ಚು ಸಾಲ ಮಾಡಿದರೆ ತೊಂದರೆ ಆಗುವ ಸಾಧ್ಯತೆ ಇರುತ್ತದೆ. ಬರುವ ಆದಾಯಕ್ಕೆ ಯಾವುದೇ ಕೊರತೆ ಇರುವುದಿಲ್ಲ. ಮಾತಿನಲ್ಲಿ ಎಚ್ಚರವಿರಲಿ.
ಕುಂಭ : ಗುರು ಮಿಥುನ ರಾಶಿಯನ್ನು ಪ್ರವೇಶಿಸುವ ಸಮಯ ಬರುತ್ತಿದೆ.ಇಷ್ಟರ ವರೆಗಿನ ಕಷ್ಟದ ದಿನಗಳು ದೂರವಾಗುವ ಕಾಲ ಬಂದಿದೆ ಸಾಡೇ ಸಾತ್ ಶನಿ ಮುಂದುವರಿಯುತ್ತಿದೆ. ನಿಮ್ಮ ಉತ್ತಮ ಕಾರ್ಯಗಳು ಇತರರಿಗೆ ಪ್ರೇರಣೆಯಾಗಲಿದೆ. ಎಷ್ಟೇ ಶತ್ರುಗಳಿದ್ದರೂ ನಿಮ್ಮ ಎದುರು ಬಂದಾಗ ಅವರ ಸಿಟ್ಟು ದರ್ಪ ಮಾಯವಾಗಿರುತ್ತದೆ. ನಿಮಗೆ ಇಷ್ಟವಿಲ್ಲದ ಕೆಲಸಗಳನ್ನು ಮಾಡಲು ಹೋಗಿ ನಷ್ಟವನ್ನು ತಂದು ಕೊಳ್ಳಬೇಡಿರಿ. ಇತರರ ಜಗಳವನ್ನು ಬಿಡಿಸಲು ಹೋಗಿ ಮೊಕದ್ದಮೆಗಳನ್ನು ನಿಮ್ಮ ಮೇಲೆ ಹಾಕಿಸಿ ಕೊಳ್ಳಬೇಡಿರಿ.
ಮೀನ : ಅನೇಕ ಸಮಯಗಳಿಂದ ಕಾಡುತ್ತಿದ್ದ ಕೌಟುಂಬಿಕ ಸಮಸ್ಯೆಗಳು ಪರಿಹಾರವಾಗುವ ಹಂತಕ್ಕೆ ಬರುತ್ತಿದೆ. ವೃತ್ತಿ ಕ್ಷೇತ್ರದಲ್ಲಿ ಹೊಸ ಸವಾಲುಗಳು ಎದುರಾಗಬಹುದು. ಎಲ್ಲವೂ ಸಾಡೇ ಸಾತ್ ಶನಿಯಿಂದಾಗಿ ಇರುವುದರಿಂದ ವಿಷ್ಣು ಸಹಸ್ರ ನಾಮ ಪಾರಾಯಣ ಮಾಡಿರಿ. ಸಂಗಾತಿಯ ಬೇಕು ಬೇಡಗಳ ಬಗ್ಗೆ ಗಮನವಿರಲಿ, ಕ್ರೀಡಾ ಕ್ಷೇತ್ರದಲ್ಲಿ ಇರುವವರಿಗೆ ಒಳ್ಳೆಯ ಭವಿಷ್ಯವಿದೆ. ಗುರುವಿನ ಅನುಗ್ರಹದಿಂದಾಗಿ ಹೊಸ ಮನೆಯನ್ನು ಹೊಂದುವ ಕನಸ್ಸು ನನಸಾಗಲಿದೆ.




































